Thursday, September 19, 2024

ಪ್ರಾಯೋಗಿಕ ಆವೃತ್ತಿ

ನೂತನ ಕೃಷಿ ಸಚಿವ ಚಲುವರಾಯಸ್ವಾಮಿ ಮುಂದಿದೆ ಸಮಸ್ಯೆಗಳ ಸರಮಾಲೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವ ಸ್ಥಾನ ಪಡೆದಿರುವ ಎನ್.ಚಲುವರಾಯಸ್ವಾಮಿ ಅವರಿಗೆ ಕೃಷಿ ಖಾತೆ ನೀಡಲಾಗಿದೆ.

ಮಂಡ್ಯ ಜಿಲ್ಲೆಯಿಂದ ಏಕೈಕ ಸಚಿವರಾಗಿರುವ ಚಲುವರಾಯಸ್ವಾಮಿ ಅವರು ಸುಮಾರು ಹದಿನೈದು ವರ್ಷಗಳ ನಂತರ ಸಚಿವ ಸ್ಥಾನ ದೊರೆತಿದೆ. 2004 ರಲ್ಲಿ ಜೆಡಿಎಸ್ ಪಕ್ಷದಿಂದ ಗೆದ್ದಿದ್ದ ಚಲುವರಾಯಸ್ವಾಮಿ ಅವರು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಧರ್ಮಸಿಂಗ್ ಅವರ ಸಂಪುಟದಲ್ಲಿ ಆರೋಗ್ಯ ಸಚಿವರಾಗಿ ಮತ್ತು 2006ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಅದಾಗಿ ಬರೋಬ್ಬರಿ 15 ವರ್ಷಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರಿಗೆ ಮಹತ್ವದ ಕೃಷಿ ಖಾತೆ ನೀಡಲಾಗಿದ್ದು, ಅವರ ಜವಾಬ್ದಾರಿಯನ್ನು ಹೆಚ್ಚಿಸಿದೆ.

ಕರ್ನಾಟಕ ರಾಜ್ಯ ಕೃಷಿ ಪ್ರಧಾನವಾದ ನಾಡಾಗಿದೆ.ಶೇ.60 ಕ್ಕೂ ಹೆಚ್ಚು ಮಂದಿ ಕೃಷಿಯನ್ನು ನಂಬಿದ್ದಾರೆ.ರಾಜ್ಯದ ರೈತರ ಉಳಿವಿಗಾಗಿ ಅವರ ಕುಟುಂಬಗಳ ಒಳಿತಿಗಾಗಿ ಕಾರ್ಯಕ್ರಮ ರೂಪಿಸುವ ಹೊಣೆಗಾರಿಕೆ ಚಲುವರಾಯಸ್ವಾಮಿ ಅವರ ಮೇಲಿದೆ.

ಸಮಸ್ಯೆಗಳ ಸರಮಾಲೆ
ಕೃಷಿ ಕ್ಷೇತ್ರ ಇಂದು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ.ಕೃಷಿ ಕ್ಷೇತ್ರದಲ್ಲಿ ಸಮಸ್ಯೆಗಳ ಸರಮಾಲೆಯೇ ಇದ್ದು,ಇದಕ್ಕೆ ಕೃಷಿ ಸಚಿವ ಚಲುವರಾಯಸ್ವಾಮಿ ಯಾವ ಪರಿಹಾರ ನೀಡಲಿದ್ದಾರೆ ಎಂಬ ನಿರೀಕ್ಷೆ ರೈತರದ್ದಾಗಿದೆ‌.

ಇತ್ತೀಚಿನ ವರ್ಷಗಳಲ್ಲಿ ಕೃಷಿಯನ್ನು ನಂಬಿ ಬದುಕುತ್ತಿದ್ದ ರಾಜ್ಯದ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೃಷಿ ಸಚಿವರ ತವರು ಕ್ಷೇತ್ರ ಮಂಡ್ಯ ಜಿಲ್ಲೆಯಲ್ಲಿಯೇ 300 ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.ಜಿಲ್ಲೆಯಲ್ಲಿ ಕಾವೇರಿ ಹರಿದರೂ ಶೇ.50 ಕ್ಕೂ ಹೆಚ್ಚು ಭಾಗ ನೀರಾವರಿಯಿಂದ ವಂಚಿತವಾಗಿದೆ‌‌. ರೈತರ ಯಾವುದೇ ಬೆಳೆಗಳಿಗೂ ಉತ್ತಮ ಬೆಲೆ ಸಿಗುತ್ತಿಲ್ಲ. ಭತ್ತ, ರಾಗಿ, ಕಬ್ಬು,ರೇಷ್ಮೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ.ಕೃಷಿ ಲಾಭದಾಯಕವಾಗದೆ ನಷ್ಟದ ಬಾಬ್ತಾಗಿದೆ.’ವ್ಯವಸಾಯ ಮನೆ ಮಂದಿಯೆಲ್ಲಾ ಸಾಯ’ ಎನ್ನುವಂತಾಗಿದೆ.’ಮಂಡಿಯುದ್ದ ಕಬ್ಬು ಎದೆಯುದ್ದ ಸಾಲ’ ಎಂಬಂತೆ ಬಹುತೇಕ ಸಂದರ್ಭಗಳಲ್ಲಿ ಕೃಷಿಯಲ್ಲಿ ನಷ್ಟವೇ ಹೆಚ್ಚಾಗಿದೆ‌.ರಸಗೊಬ್ಬರ ಸೇರಿದಂತೆ ಕೃಷಿ ಸಲಕರಣೆಗಳ ಬೆಲೆಗಳು ಹೆಚ್ಚಾಗಿದ್ದು,ಕೃಷಿ ದುಬಾರಿಯಾಗಿದೆ.

ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯೂ ದೊರಕುತ್ತಿಲ್ಲ.ರೈತ ವಿರೋಧಿ ಈ ಹಿಂದಿನ ಸರ್ಕಾರಗಳು ರೈತರಿಗೆ ಮಾರಕವಾಗಿರುವ ಕೃಷಿ ಕಾಯಿದೆಗಳನ್ನು ಜಾರಿಗೆ ತಂದು ರೈತರ ಬವಣೆಯನ್ನು ಮತ್ತಷ್ಟು ಹೆಚ್ಚಿಸಿವೆ‌.ಮಾರಕ ಎಪಿಎಂಸಿ ಕಾಯ್ದೆ,ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆದಿಲ್ಲ. ಈ ಬಗ್ಗೆ ಸಿದ್ದರಾಮಯ್ಯ ಅವರ ಗಮನ ಸೆಳೆದು ಬಿಜೆಪಿ ಜಾರಿಗೆ ತಂದಿರುವ ಮಾರಣಾಂತಿಕ ಕೃಷಿ ಕಾಯಿದೆ ರದ್ದು ಪಡಿಸಬೇಕಿದೆ.

ಹಾಗೆಯೇ ಹೈನುಗಾರಿಕೆ ಅವಲಂಬಿಸಿರುವ ಬಹುತೇಕ ಕುಟುಂಬಗಳು ಹೈನು ಪದಾರ್ಥಗಳ ಬೆಲೆ ಏರಿಕೆಯಿಂದ ತತ್ತರಿಸಿವೆ. ಹೈನುಗಾರಿಕೆ ಇಂದು ದುಬಾರಿಯಾಗಿದ್ದು, ರೈತರಿಗೆ ಕೈ ಕಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ.ರೇಷ್ಮೆ, ತರಕಾರಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ರೈತರ ಪರಿಸ್ಥಿತಿ ಕೂಡ ಭಿನ್ನವಾಗೇನೂ ಇಲ್ಲ.

ಮೈಷುಗರ್ ಉಳಿಸಿ
ಮಂಡ್ಯ ಜಿಲ್ಲೆಯನ್ನು ಸಕ್ಕರೆ ನಾಡು ಎಂದು ಕರೆಯುತ್ತಾರೆ.ರೈತರ ಜೀವನಾಡಿ ಸರ್ಕಾರಿ ಸ್ವಾಮ್ಯದ ಮೈಷುಗರ್ ಕಾರ್ಖಾನೆ ಮುಚ್ಚುವ ಭೀತಿಯಲ್ಲಿದೆ‌.ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಮೈಷುಗರ್ ಕಾರ್ಖಾನೆಯನ್ನು ಆಧುನೀಕರಣಗೊಳಿಸಿ ರೈತರಿಗೆ ಉಳಿಸಿಕೊಡುವ ಮೂಲಕ ಅವರ ಬಾಳಿಗೆ ಬೆಳಕಾಗಬೇಕಿದೆ‌.ಟನ್ ಕಬ್ಬಿಗೆ 4500 ರೂ. ನೀಡಬೇಕೆಂಬುದು ರೈತರ ಆಗ್ರಹವಾಗಿದೆ‌.

ಇಂತಹ ನೂರಾರು ಸಂಕಷ್ಟಗಳಿಂದ ಕೂಡಿದ ವಿಷಮ ಪರಿಸ್ಥಿತಿಯಲ್ಲಿ ಕೃಷಿ ಕ್ಷೇತ್ರವಿದ್ದು, ನೂತನ ಕೃಷಿ ಸಚಿವರಾಗಿರುವ ಚಲುವರಾಯಸ್ವಾಮಿ ಅವರು ಕೃಷಿ ಕ್ಷೇತ್ರದಲ್ಲಿರುವ ಬಿಕ್ಕಟ್ಟುಗಳನ್ನು ಬಗೆಹರಿಸಿ ಅನ್ನದಾತರಿಗೆ ನೆರವಾಗಬೇಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!