ಕಾವೇರಿ ನೀರಿನ ವಿಷಯವಾಗಿ ಸುಪ್ರೀಂಕೋರ್ಟ್ ಗೆ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಸೆ.6ರಂದು ನಡೆಯಲಿದ್ದು, ತೀರ್ಪು ನೋಡಿಕೊಂಡು ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಮಂಡ್ಯ ನಗರದ ಡಿಸಿಸಿ ಬ್ಯಾಂಕ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾಳಿನ ಸುಪ್ರೀಂ ಕೋರ್ಟ್ ಆದೇಶವನ್ನು ಸರ್ಕಾರ ಎದುರು ನೋಡುತ್ತಿದ್ದು, ಅದರ ಆಧಾರದ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳಲಿದೆ.
ನಮ್ಮ ವಕೀಲರ ತಂಡವು ರಾಜ್ಯದಲ್ಲಿ ಉಂಟಾಗಿರುವ ಮಳೆಯ ಕೊರತೆ, ಜಲಾಶಯಗಳಲ್ಲಿರುವ ನೀರಿನ ಪ್ರಮಾಣ ಸೇರಿದಂತೆ ವಾಸ್ತವ ಸ್ಥಿತಿಯೊಂದಿಗೆ ತಾಂತ್ರಿಕ ಮಾಹಿತಿಗಳನ್ನು ಸುಪ್ರೀಂ ಕೋರ್ಟಿಗೆ ನೀಡಿದೆ. ಜೊತೆಗೆ, ಯಾವುದೇ ಕಾರಣಕ್ಕೂ ಮತ್ತೆ ನೀರು ಹರಿಸಲಾಗದು ಎಂದು ಸ್ಪಷ್ಟವಾಗಿ ಹೇಳಿದೆ.ಇದನ್ನೆಲ್ಲಾ ಪರಿಗಣಿಸಿ ರಾಜ್ಯದ ಪರವಾಗಿ ಕೋರ್ಟ್ ಆದೇಶ ನೀಡಿದ ಸಂತೋಷ. ಇಲ್ಲದಿದ್ದರೆ ರಾಜ್ಯ ಸರಕಾರ ಕಠಿಣ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
ಕಾನೂನು ಮತ್ತು ನೀರಾವರಿ ತಜ್ಞರನ್ನು ನಮ್ಮ ಸರ್ಕಾರ ಬಂದ ನಂತರ ನೇಮಿಸಿಕೊಂಡಿಲ್ಲ. 20-30 ವರ್ಷಗಳಿಂದ ಇರುವ ತಂಡವೇ ಈಗಲೂ ಇದೆ. ಅವರ ಮೂಲಕ ನಮ್ಮ ವಾದವನ್ನು ಸಮರ್ಥವಾಗಿ ಮಾಡಿದ್ದೇವೆ. ನಾವು ರಾಜ್ಯದ ಜನರ ಪರವಾಗಿರುತ್ತೇವೆ ಎಂದರು.
ತಿಂಗಳ ಹಿಂದೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ 25 ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚಿಸಿತ್ತು. ನಾವು ಅಷ್ಟು ನೀರು ಬಿಡಲು ಒಪ್ಪದಿದ್ದಾಗ 15 ಸಾವಿರ ಕ್ಯೂಸೆಕ್ ಬಿಡಿ ಎಂದಿತು. ಅದನ್ನು ಒಪ್ಪದ ತಮಿಳುನಾಡು ಸಭೆಯಿಂದ ಹೊರನಡೆದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.ಕೊನೆಗೆ ಪ್ರಾಧಿಕಾರ 10 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸೂಚಿಸಿತು. ಅದರಂತೆ ಮೊದಲು ನೀರು ಬಿಡಲಾಗಿದೆ. ಎರಡನೇ ಆದೇಶದ ಪ್ರಕಾರ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ.ನಾಳೆ ಸುಪ್ರೀಂ ಕೋರ್ಟ್ ಮುಂದೆ ಹೋದಾಗ ಏಕೆ ಪ್ರಾಧಿಕಾರದ ಆದೇಶ ಉಲ್ಲಂಘನೆ ಮಾಡಿದ್ದೀರಿ ಎಂದು ಹೇಳುತ್ತಾರೆ. ಪ್ರಾಧಿಕಾರಕ್ಕೆ ಗೌರವ ನೀಡುವ ಭಾಗವಾಗಿ ನೀರು ಹರಿಸಲಾಗಿದೆ ಎಂದರು.
196 ತಾಲ್ಲೂಕು ಬರ ಪೀಡಿತ
ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ 196 ತಾಲ್ಲೂಕುಗಳು ಬರ ಪೀಡಿತ ಎಂದು ಗುರುತಿಸಲಾಗಿದೆ. ಈ ಬಗ್ಗೆ ಸೆ.7ರಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಮೊದಲ ಹಂತದಲ್ಲಿ 113 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಲಾಗಿತ್ತು. ಕೇಂದ್ರದ ಮಾರ್ಗಸೂಚಿಗಳ ಪ್ರಕಾರ 62 ತಾಲೂಕುಗಳು ಮಾತ್ರ ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿವೆ. ಉಳಿದ 51 ತಾಲೂಕುಗಳು ಕೇಂದ್ರದ ಮಾರ್ಗಸೂಚಿಗಳಿಗೆ ಒಳಪಟ್ಟಿಲ್ಲ. ಹೀಗಾಗಿ ಮೊದಲ ಹಂತದ ಬರಪೀಡಿತ ಪ್ರದೇಶಗಳ ಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ. ಬಾಕಿ ಉಳಿದಿರುವ 51 ತಾಲೂಕುಗಳ ಪಟ್ಟಿಗೆ ಹೊಸದಾಗಿ 83 ತಾಲೂಕುಗಳನ್ನು ಸೇರಿಸಿ 134 ತಾಲೂಕುಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದರು.
ಈಗಾಗಲೇ ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ಬರಪೀಡಿತ ಪ್ರದೇಶವೆಂದು ಘೋಷಣೆಗೆ ಸಿದ್ದವಾಗಿರುವ 62 ತಾಲೂಕುಗಳನ್ನು ಒಳಗೊಂಡಂತೆ 196 ತಾಲೂಕುಗಳು ನಮ್ಮ ಪ್ರಕಾರ ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿವೆ ಎಂದರು.
ಜೂನ್‌ನಲ್ಲಿ ಮಳೆ ಕೊರತೆಯಾಗಿದ್ದರೂ ಜುಲೈನಲ್ಲಿ ಉತ್ತಮವಾಗಿ ಮಳೆ ಸುರಿದಿತ್ತು. ಆದರೆ, ಮತ್ತೆ ಆಗಸ್ಟ್ ನಲ್ಲಿ ವಾಡಿಕೆಗಿಂತಲೂ ಶೇ.60-70ರಷ್ಟು ಮಳೆ ಕಡಿಮೆಯಾಗಿದೆ. ಒಟ್ಟಾರೆ ಜೂನ್‌ನಿಂದ ಆಗಸ್ಟ್ ವರೆಗೆ ಸರಾಸರಿ ಶೇ.35ರಷ್ಟು ಮಳೆ ಕೊರತೆಯಿದೆ. ಕೆಲ ದಿನಗಳು ಸುರಿದ ಜೋರು ಮಳೆಯನ್ನೇ ಕೃಷಿಗೆ ಪರಿಗಣಿಸಲಾಗದು. ತಿಂಗಳಿಡೀ ನಿಯಮಿತವಾಗಿ ಮಳೆ ಬಿದ್ದಾಗಷ್ಟೇ ಕೃಷಿಗೆ ಅನುಕೂಲವಾಗುತ್ತದೆ. ಹೀಗಾಗಿ ಬರ ಸಂಬಂಧ ಕೇಂದ್ರದ ನಿಯಮಾವಳಿಗಳನ್ನು ಸಡಿಲಗೊಳಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಆದರೆ, ಈವರೆಗೆ ಕೇಂದ್ರದಿಂದ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.
ಇದರೊಂದಿಗೆ 196 ತಾಲೂಕುಗಳಲ್ಲಿನ ಬರ ಪರಿಸ್ಥಿತಿ ಬಗ್ಗೆ ಕೃಷಿ ಮತ್ತು ಕಂದಾಯ ಇಲಾಖೆಗಳ ಮೂಲಕ ವಸ್ತುಸ್ಥಿತಿ ಅಧ್ಯಯನದೊಂದಿಗೆ ಜಂಟಿ ಸಮೀಕ್ಷೆ ನಡೆಸಿ 4-5 ದಿನಗಳಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರದ ತಂಡ ಬರುವುದೋ? ಇಲ್ಲವೋ? ಗೊತ್ತಿಲ್ಲ. ಆದರೆ, ರಾಜ್ಯ ಸರಕಾರ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚನೆಗೆ ಶಿಫಾರಸ್ಸು ಮಾಡಿದೆ. ಈ ಟಾಸ್ಕ್ ಫೋರ್ಸ್ ಕುಡಿಯುವ ನೀರಿನ ಸಮಸ್ಯೆ, ಬೋರ್‌ವೆಲ್‌ಗಳ ಸಮಸ್ಯೆ, ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಕೆ, ಖಾಸಗಿ ಬೋರ್‌ವೆಲ್/ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯುವುದು… ಹೀಗೆ ನಾನಾ ವಿಷಯಗಳ ಬಗ್ಗೆ ಸ್ಥಳೀಯವಾಗಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗೋಷ್ಠಿಯಲ್ಲಿ ಶಾಸಕ ಪಿ.ರವಿಕುಮಾರ್, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ನಿರ್ದೇಶಕ ಅಶೋಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್,ಮುಖಂಡ ಚಿದಂಬರ್ ಹಾಜರಿದ್ದರು.




