Friday, September 20, 2024

ಪ್ರಾಯೋಗಿಕ ಆವೃತ್ತಿ

ಜನಸಾಮಾನ್ಯರ ಅಭಿವೃದ್ಧಿ ಪತ್ರಕರ್ತರ ಮುಖ್ಯ ಗುರಿಯಾಗಬೇಕು: ಚಲುವರಾಯಸ್ವಾಮಿ

ಪತ್ರಕರ್ತರು ರಚನಾತ್ಮಕವಾಗಿ ಕೆಲಸ ಮಾಡಬೇಕು. ಜನರಿಗೆ ಉಪಯುಕ್ತವಾದ ವಿಷಯಗಳನ್ನು ಬರೆಯುವ ಅಗತ್ಯವಿದೆ. ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪಗಳು ಇದ್ದೇ ಇರುತ್ತವೆ. ಯುವಕರ ಪ್ರಗತಿಗೆ ಪೂರಕವಾದ, ಮಹಿಳೆಯರಿಗೆ ಅಭಿವೃದ್ಧಿಗೆ ಅನುಕೂಲವಾಗುವ, ರೈತರ ಜೀವನ ಭದ್ರತೆಗೆ ನೆರವಾಗುವಂತಹ ವಿಷಯಗಳಿಗೆ ಆದ್ಯತೆ ನೀಡುವುದರಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಜನ ಸಾಮಾನ್ಯರ ಅಭಿವೃದ್ಧಿ ಪತ್ರಕರ್ತರ ಮುಖ್ಯ ಗುರಿಯಾಗಬೇಕು. ಅವರ ಸಮಸ್ಯೆಗಳಿಗೆ ದನಿಯಾಗಿ, ಜನರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕು. ಪತ್ರಿಕಾರಂಗಕ್ಕೆ ಹೆಚ್ಚಿನ ಮೌಲ್ಯವಿದೆ. ಅದನ್ನು ಕಾಪಾಡಿಕೊಂಡು ಹೋಗುವ ದಿಸೆಯಲ್ಲಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವಂತೆ ಕಿವಿಮಾತು ಹೇಳಿದರು.

ಸಾನಿಧ್ಯ ವಹಿಸಿದ್ದ ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಅವಧೂತ ಸ್ವಾಮೀಜಿ ಮಾತನಾಡಿ, ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಶಿಕ್ಷಣ ಹಾಗೂ ಕುಟುಂಬ ವರ್ಗದವರಿಗೆ ರಿಯಾಯಿತಿ ದರದಲ್ಲಿ ಆರೋಗ್ಯ ಒದಗಿಸುವುದಕ್ಕೆ ಸರ್ಕಾರ ವ್ಯವಸ್ಥೆ ಮಾಡಬೇಕು ಎಂದರು.

nudikarnataka.com

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ರಾಜಕಾರಣಿಗಳಿಗೆ ಪತ್ರಕರ್ತರು ಮಾರ್ಗದರ್ಶಕರೂ ಆಗಿದ್ದಾರೆ. ನನ್ನ ರಾಜಕೀಯ ಬೆಳವಣಿಗೆಯಲ್ಲಿ ಪತ್ರಕರ್ತರ ಸಹಕಾರ ದೊಡ್ಡದಿದೆ. ಕೊರೋನಾ ಸಮಯದಲ್ಲಿ ನಾವು ಸೈನಿಕರಂತೆ ಕೆಲಸ ಮಾಡುವುದಕ್ಕೆ ಪತ್ರಕರ್ತರು ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.

ಶಾಸಕ ಪಿ.ರವಿಕುಮಾರ್ ಮಾತನಾಡಿ, ಪತ್ರಕರ್ತ ಎಂದರೆ ಜವಾಬ್ದಾರಿ. ಅವರು ಮನಗಳನ್ನು ಕೂಡಿಸಲೂಬಹುದು, ಹಾಳು ಮಾಡಲೂಬಹುದು. ವಿಷಯವನ್ನು ವಸ್ತುನಿಷ್ಠವಾಗಿ ವರದಿ ಮಾಡಿದಾಗ ಪ್ರಗತಿಗೆ ಪೂರಕವಾಗುತ್ತದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕೆ ಮೊದಲ ಆದ್ಯತೆ ಇರಬೇಕು ಎಂದರು.

ಪತ್ರಕರ್ತರ ಜಾಹೀರಾತಿನ ಬಾಕಿ ಹಣ 145 ಕೋಟಿ ರು.ಗಳಾಗಿದೆ. ಅದನ್ನು ದೊರಕಿಸಿಕೊಡುವುದಕ್ಕೆ ಸರ್ಕಾರದ ಗಮನಸೆಳೆದಿದ್ದೇನೆ . ಅಧಿವೇಶನದಲ್ಲೂ ಈ ಕುರಿತು ಮಾತನಾಡುವೆ. ಈಗಾಗಲೇ 15 ಕೋಟಿ ರು.ಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು ಉಳಿದ 130 ಕೋಟಿ ರು. ಹಣ ಬಿಡುಗಡೆಗೆ ಪ್ರಯತ್ನಿಸುವುದಾಗಿ
ಹೇಳಿದರು.

ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಕೆ.ಸಿ.ಮಂಜುನಾಥ್ ಅವರು ನೂತನ ಅಧ್ಯಕ್ಷ ಬಿ.ಪಿ.ಪ್ರಕಾಶ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಹಿರಿಯ ಪತ್ರಕರ್ತ ಡಿ.ಎಲ್.ಲಿಂಗರಾಜುಗೆ ಜೀವಮಾನ ಪ್ರಶಸ್ತಿ, ಪತ್ರಕರ್ತರಾದ ಆರ್.ಎನ್.ನಂಜುಂಡಸ್ವಾಮಿ, ಪುಟ್ಟರಾಜು, ಜಯರಾಜು, ಕ್ಯಾಮರಾಮನ್ ಮಹೇಶ್
ಅವರಿಗೆ ವಾರ್ಷಿಕ ಪ್ರಶಸ್ತಿ ನೀಡಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರಾಜ್ಯ ಕಾರ್ಯದರ್ಶಿ ಮತ್ತೀಕೆರೆ ಜಯರಾಂ, ಕಾರ್ಯದರ್ಶಿ ಸೋಮಶೇಖರ ಕೆರಗೋಡು, ಏಷ್ಯಾ ಪತ್ರಕರ್ತರ ಒಕ್ಕೂಟದ ಸಂಚಾಲಕ ಹೆಚ್.ಬಿ.ಮದನ್‌ಗೌಡ, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಪಿ.ಜೆ.ಚೈತನ್ಯಕುಮಾರ್, ಕೆ.ಎನ್.ರವಿ, ನವೀನ್
ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!