Friday, September 20, 2024

ಪ್ರಾಯೋಗಿಕ ಆವೃತ್ತಿ

ಆಧುನಿಕ ಆಹಾರ ಪದ್ದತಿಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ: ಚಲುವರಾಯಸ್ವಾಮಿ

ಇಂದಿನ ಆಧುನಿಕ ಆಹಾರ ಪದ್ದತಿಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ, ಆದ್ದರಿಂದ ಗಿಡಮೂಲಿಕೆಯ ಪ್ರಕೃತಿ ಚಿಕಿತ್ಸೆ ಪಡೆದುಕೊಂಡರೆ ಆರೋಗ್ಯ ವೃದ್ದಿಯಾಗುತ್ತದೆ ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದರು.

ಕೇಂದ್ರದ ಆಯುಷ್ ಮಂತ್ರಾಲಯದ ಸಹಯೋಗದಲ್ಲಿ ನಾಗಮಂಗಲದ ಶ್ರೀರಾಪಟ್ಟಣದಲ್ಲಿ ಸ್ಥಾಪಿಸಲಾಗಿರುವ ಕೇಂದ್ರಿಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಸ್ಥೆಯನ್ನು ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯದ ಸಚಿವರಾದ ಡಾ. ಮುಂಜಪರ ಮಹೇಂದ್ರಬಾಯ್ ಕಲುಬಾಯ್ ಅವರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಗಳು ಸಾರ್ವಜನಿಕರಿಗೆ ಅವಶ್ಯಕತೆ ಇರುವ ಯೋಜನೆಯನ್ನೇ ಜಾರಿಗೆ ತರುತ್ತವೆ. ಆ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ನಾನು ಆರೋಗ್ಯ ಸಚಿವನಾಗಿದ್ದಾಗ ಈ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿತ್ತು, ಇದೀಗ ನಾನು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತೋಷದಾಯಕ ವಿಷಯವಾಗಿದೆ ಎಂದರು.

ದಕ್ಷಿಣ ಭಾರತದಲ್ಲೇ ಈ ಯೋಜನೆ ನಾಗಮಂಗಲದಲ್ಲಿ ಮೊದಲು ಪ್ರಾರಂಭವಾಗುತ್ತಿರುವುದು ಹೆಮ್ಮೆ ತಂದಿದೆ. ಕೇಂದ್ರದ ಈ ಯೋಜನೆ ನಮ್ಮ ಭಾಗದ ಜನರು ಉಪಯೋಗಿಸಿಕೊಳ್ಳಬೇಕು. ಇಂದಿನ ಮಾನವನ ದೇಹ ಮೊದಲಿನಂತಿಲ್ಲ. ಆಗಾಗಿ ಇಂತಹ ಪ್ರಕೃತಿ ಚಿಕಿತ್ಸೆಗೆ ಹೋಗುವುದು ಅನಿವಾರ್ಯವಾಗಿದೆ. ಸಾವಿರಾರು ವರ್ಷದಿಂದ ಗಿಡ ಮೂಲಿಕೆಗಳಿಂದಲೇ ನಮ್ಮ ಪೂರ್ವಜರು ಆರೋಗ್ಯ ವೃದ್ಧಿಸಿಕೊಳ್ಳುತ್ತಿದ್ದರು. ಪೂರ್ವಜರ ಪದ್ಧತಿಯನ್ನೇ ಅಳವಡಿಸಿಕೊಳ್ಳುವುದು ಇಂದಿನ ಅನಿವಾರ್ಯವಾಗಿದೆ ಎಂದರು.

ಯೋಗ ಕೇಂದ್ರವು ಅತ್ಯಂತ ಸುಸಜ್ಜಿತವಾಗಿದ್ದು, 200 ಹಾಸಿಗೆ ಸಾಮ್ಮರ್ಥ ಹೊಂದಿರುವ ಕಟ್ಟಡವಾಗಿದೆ. ಸಾಮಾನ್ಯ ಕೊಠಡಿ, ಡಿಲಕ್ಸ್ ವಾರ್ಡ್, ಸ್ಪೆಷಲ್ ವಾರ್ಡ್, ಪ್ರತ್ಯೇಕ ಪುರುಷ ಮತ್ತು ಮಹಿಳಾ ಚಿಕಿತ್ಸಾ ಕೊಠಡಿಗಳೊಂದಿಗೆ ಬೃಹತ್ ಯೋಗ ಸಭಾಂಗಣ, ಆಹಾರ ಚಿಕಿತ್ಸಾ ಕೇಂದ್ರ, ಪ್ರಯೋಗಾಲಯ ಹೊಂದಿದೆ. ಮುಂದಿನ ದಿನಗಳಲ್ಲಿ ಇಲ್ಲಿಯೇ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಸ್ಥಾಪಿಸಲು ಚಿಂತಿಸಲಾಗುತ್ತಿದೆ ಎಂದರು.

ಯೋಗಕ್ಕೆ ಅಪಾರವಾದ ಕೊಡುಗೆ

ಸಂಸದೆ ಸುಮಲತಾ ಅಂಬರೀಶ್  ಮಾತನಾಡಿ, ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಉದ್ಘಾಟನೆಯಲ್ಲಿ ಭಾಗಿಯಾಗಿರುವುದು ಸಂತೋಷದಯಾಕವಾಗಿದೆ. ವಿಶ್ವದ ಯೋಗಗುರುವಾದ ಭಾರತ ದೇಶವು ವಿಶ್ವಕ್ಕೆ ಯೋಗವನ್ನು ಕೊಡುಗೆಯಾಗಿ ನೀಡಿದೆ. ದಕ್ಷಿಣ ಭಾರತದಲ್ಲೆ ಅತಿದೊಡ್ಡ ಚಿಕಿತ್ಸಾ ಯೋಗ ಕೇಂದ್ರದ ಉದ್ಘಾಟನೆ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಸಿಗುವ ಸೌಲಭ್ಯ

ಹೈಡ್ರೋ ಥೆರಪಿ, ಮುಡ್ ಥೆರಪಿ, ಮಸಾಜ್ ಥೆರಪಿ, ಮ್ಯಾಗ್ನೆಟೊ ಥೆರಪಿ, ಕ್ರೋಮೊ ಥೆರಪಿ, ಫಾಸ್ಟಿಂಗ್ ಆ್ಯಂಡ್ ಡಯಟ್ ಥೆರಪಿ, ಆಕ್ಯೂಪಂಕ್ಚರ್, ಆಕ್ಯೂಪ್ರಜ಼ರ್, ಯೋಗ ಥೆರಪಿ, ಫಿಸಿಯೋ ಥೆರಪಿ ಸೇರಿದಂತೆ ಇನ್ನಿತರ ಸೌಲಭ್ಯಗಳು ದೊರೆಯಲಿವೆ ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಆಯುಷ್ ಇಲಾಖೆಯ ನಿರ್ದೇಶಕ ಡಾ.ರಾಘವೇಂದ್ರರಾವ್, ಉಪ ನಿರ್ದೇಶಕ ಸತ್ಯಜಿತ್ ಪೌಲ್, ಸಲಹೆಗಾರ ಡಾ.ಎಂ.ಎ ಖಾಸ್ಮಿ, ರಾಜ್ಯ ಆಯುಷ್ ಇಲಾಖೆಯ ಆಯುಕ್ತ ಶ್ರೀನಿವಾಸುಲು, ಎಸ್.ವಿ.ವೈ.ಎ.ಎಸ್.ಎ ವಿಶ್ವವಿದ್ಯಾಲಯದ ಕುಲಪತಿ ಡಾ.ಹೆಚ್ ಆರ್ ನಾಗೇಂದ್ರ, ಜಿಲ್ಲಾಧಿಕಾರಿ ಡಾ‌.ಕುಮಾರ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!