ಕಳೆದ ಏಪ್ರಿಲ್ 14 ರಂದು ಮಂಡ್ಯ ತಾಲ್ಲೂಕಿನ ಕೆರಗೋಡು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚಿನ್ನಾಭರಣ ಲೂಟಿ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿ ದರೋಡೆಕೋರರ ಹೆಡೆಮುರಿ ಕಟ್ಟಿರುವ ಮಂಡ್ಯ ಪೋಲಿಸರು ಅವರಿಗೆ ಕೋಳ ತೊಡಿಸಿದ್ದಾರೆ.
ಇಂದು ನಗರದ ಪೋಲಿಸ್ ಪೆರೇಡ್ ಮೈದಾನದಲ್ಲಿ ಸುದ್ದಿ ಗೋಷ್ಠಿ ನಡೆಸಿದ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಎನ್. ಯತೀಶ್ ಪ್ರಕರಣದ ಸಂಪೂರ್ಣ ಮಾಹಿತಿ ನೀಡಿದರು.
3 ಕೆ.ಜಿ. ಚಿನ್ನಾಭರಣ ಮತ್ತು 50 ಸಾವಿರ ನಗದು ವಶ
ಏಪ್ರಿಲ್ 14 ರಂದು ನಾಗಮಂಗಲ ಮುಖ್ಯ ರಸ್ತೆಯಲ್ಲಿರುವ ಗಂಟಗೌಡನ ಹಳ್ಳಿ ಹಾಗೂ ದ್ಯಾಪಸಂದ್ರ ಗ್ರಾಮದ ನಡುವೆ ಸಂಜೆ 6.30ರ ಸಮಯದಲ್ಲಿ ಕಾರನ್ನು ಅಡ್ಡಗಟ್ಟಿ 3 ಕೆ.ಜಿ.ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದ ಪ್ರಕರಣದಲ್ಲಿ ರಿಷಬ್ ಜ್ಯೂವೆಲ್ಲರ್ಸ್ ನಲ್ಲಿ ಎರಡು ವರ್ಷದ ಹಿಂದೆ ಕೆಲಸ ಮಾಡಿದ್ದ ರಮೇಶ್ ಎಂಬಾತನೇ ಈ ದರೋಡೆ ಪ್ರಕರಣದ ಮುಖ್ಯ ಸೂತ್ರಧಾರ.
ಅವನ ಸಹಚರರಾದ ಪುನೀತ್ ಅಲಿಯಾಸ್ ಗೂಳಿ, ವರುಣ್‌ಗೌಡ, ಕೈಲಾಶ್ ಕುಮಾರ್, ಪ್ರಕಾಶ್ ಹಾಗೂ ರಾಜು ಬಂಧಿತ ಆರೋಪಿಗಳು. ಬಂಧಿತರೆಲ್ಲರೂ ಮೈಸೂರಿನವರಾಗಿದ್ದು, ಬಂಧಿತ ಆರೋಪಿಗಳಿಂದ 3 ಕೆ.ಜಿ. ಚಿನ್ನಾಭರಣ, 50 ಸಾವಿರ ನಗದನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಲಾಗಿದೆ ಎಂದು ವಿವರಿಸಿದರು.
ಮೈಸೂರಿನ ರಿಷಬ್ ಜ್ಯುವೆಲರ್‍ಸ ಮಾಲೀಕ ಅಶೋಕ್ ಎಂಬಾತ ಮಂಡ್ಯ, ಬಸರಾಳು ಜಕ್ಕನಹಳ್ಳಿ,ಕೆರಗೋಡು ಭಾಗದಲ್ಲಿರುವ ಚಿನ್ನಾಭರಣದ ಅಂಗಡಿಗಳಿಗೆ ಆಭರಣ ಪೂರೈಸುವ ಒಡಂಬಡಿಕೆ ಮಾಡಿಕೊಂಡಿದ್ದರು.
ಈ ಭಾಗದ ಅಂಗಡಿಗಳಿಗೆ ಚಿನ್ನಾಭರಣ ನೀಡಲು ಎಂದಿನಂತೆ ಅಂದು ಜಕ್ಕನಹಳ್ಳಿ, ಬಸರಾಳು ಅಂಗಡಿಗಳಿಗೆ ಆಭರಣ ವಿತರಣೆ ಮಾಡಿ ಕೆರಗೋಡಿಗೆ ವಿತರಿಸಲು ಮಂಡ್ಯ-ಬಸರಾಳು ರಸ್ತೆಯಲ್ಲಿ ಬರುತ್ತಿದ್ದರು.
ಗಂಟಗೌಡನ ಹಳ್ಳಿಯ ಗೇಟ್ ಬಳಿ ಬರುತ್ತಿದ್ದಾಗ ಎದುರು ರಸ್ತೆಯಲ್ಲಿ ಕಾರಿನಲ್ಲಿ ಬಂದ ನಾಲ್ವರು ಹಾಗೂ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಾರು ಅಡ್ಡಗಟ್ಟಿ ಕಾರಿನ ಗಾಜನ್ನು ರಾಡಿನಿಂದ ಹೊಡೆದ ದುಷ್ಕರ್ಮಿಗಳು ಕಾರಿನಲ್ಲಿದ್ದ ಮಾತುರಾಂ ತಲೆಗೆ ಅದೇ ರಾಡಿನಿಂದ ಬಲವಾಗಿ ಥಳಿಸಿದ್ದಲ್ಲದೆ, ಲಲಿತ್ ಎಂಬಾತನ ಹೊಟ್ಟೆಗೆ ಮತ್ತು ಎದೆಗೆ ಗುದ್ದಿ ಆತನ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಚಿನ್ನಾಭರಗಳಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು.
ಬಂಧಿತರಲ್ಲಿ ಮೊದಲ ಆರೋಪಿಯಾದ ರಮೇಶ್ ಎಂಬಾತ ಎರಡು ವರ್ಷಗಳ ಹಿಂದೆ ರಿಷಬ್ ಜ್ಯೂವೆಲ್ಲರ್ಸ್ ಮಾಲೀಕರ ಬಳಿ ಕೆಲಸ ಮಾಡಿಕೊಂಡಿದ್ದು, ಸ್ವಂತ ಉದ್ಯೋಗ ಮಾಡುತ್ತಿದ್ದ ರಮೇಶ್ ಮಾಲೀಕರ ಜೊತೆ ಜಗಳವಾಡಿಕೊಂಡಿದ್ದ.ಹೊಸದಾಗಿ ಮಾಡಿರುವ ಉದ್ದಿಮೆಗೆ ಮಾಲೀಕರು ಹಣಕಾಸಿನ ನೆರವು ನೀಡದ ಹಿನ್ನೆಲೆಯಲ್ಲಿ ಚಿನ್ನಾಭರಣ ಲೂಟಿ ಮಾಡಲು ನಿರ್ಧರಿಸಿ ತನ್ನ ಐದು ಮಂದಿ ಸಹಚರರನ್ನು ಜೊತೆಗೂಡಿಸಿಕೊಂಡು ಈ ಕೃತ್ಯ ನಡೆಸಿದ್ದಾನೆ ಎಂದರು.
ಈ ಸಂಬಂಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಪ್ರಕರಣ ಭೇಧಿಸಲು 4 ತಂಡಗಳನ್ನು ರಚನೆ ಮಾಡಲಾಗಿತ್ತು.
ಅದರಂತೆ ನಮ್ಮ ಪೋಲಿಸರು ಹಗಲು- ರಲ್ಲಿ ದರೋಡೆಕೋರರ ಬೆನ್ನುಹತ್ತಿ ಆರು ಮಂದಿ ಆರೋಪಿಗಳನ್ನು ಬಂಧಿಸಿ,ಅವರಿಂದ ದರೋಡೆ ಮಾಡಿದ್ದ 3ಕೆ.ಜಿ. 100ಗ್ರಾಂ. ಚಿನ್ನಾಭರಣ ಮತ್ತು 50,000 ನಗದು, ಕೃತ್ಯಕ್ಕೆ ಬಳಸಿದ ಕಾರು,ಬೈಕ್ ಸೇರಿದಂತೆ 80 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ನಾಲ್ಕು ತಂಡಗಳಿಗೆ ತಲಾ 25 ಸಾವಿರ ರೂ. ನಗದು ನೀಡುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ವೇಣುಗೋಪಾಲ್, ಡಿವೈಎಸ್ಪಿಗಳಾದ ಮಂಜುನಾಥ್ ಮತ್ತು ವಿರುಪಾಕ್ಷೇಗೌಡ, ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಆನಂದೇಗೌಡ, ಕೆರಗೋಡು ಪೊಲೀಸ್ ಠಾಣೆ ಸಿಪಿಐ ಕ್ಯಾತೇಗೌಡ, ಸಿಪಿಐಗಳಾದ ಮಹೇಶ್, ರಾಘವೇಂದ್ರ ಸೇರಿದಂತೆ ಹಲವರು ಹಾಜರಿದ್ದರು
ಇದನ್ನು ಓದಿ : ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ 1.24 ಕೋಟಿ ಮೌಲ್ಯದ ಆಭರಣ ಲೂಟಿ