ಕಳೆದ ಬಾರಿ ಕ್ಷೇತ್ರದ ಶಾಸಕರಾಗಿದ್ದ ಸುರೇಶ್ ಗೌಡ ಕ್ಷೇತ್ರದಲ್ಲಿ ಎಷ್ಟು ಅಭಿವೃದ್ದಿ ಕೆಲಸ ಮಾಡಿದ್ದಾರೆಂದು ತೋರಿಸಲಿ ಎಂದು ಸಚಿವ ಎನ್.ಚಲುವರಾಯಸ್ವಾಮಿ ಸವಾಲು ಹಾಕಿದರು.
ನಾಗಮಂಗಲ ಪಟ್ಟಣದ ಬಡಗೂಡಮ್ಮ ದೇವಾಲಯ ಆವರಣದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಸ್ವಸಹಾಯ ಗುಂಪುಗಳಿಗೆ ಬಡ್ಡಿರಹಿತ ಸಾಲ ಮಂಜೂರಾತಿ ಪತ್ರಗಳ ವಿತರಣೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ವಿನಿಮಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸುರೇಶ್ ಗೌಡನಿಗೆ ನನ್ನ ಮತ್ತು ಕುಮಾರಸ್ವಾಮಿ ಅವರ ಸಂಬಂಧದ ಬಗ್ಗೆ ಅರಿವಿಲ್ಲ, ಅವರನ್ನು ಮುಖ್ಯಮಂತ್ರಿ ಮಾಡಲು ಎಷ್ಟು ಶ್ರಮಿಸಿದ್ದೇನೆಂಬುದು ಅವರಿಗೆ ಗೊತ್ತಿಲ್ಲ, 1999ರಲ್ಲಿ ಇಡೀ ಮೈಸೂರು ಭಾಗದಲ್ಲಿ ನಾನೊಬ್ಬನೇ ಜೆಡಿಎಸ್ ಶಾಸಕನಿದ್ದೆ, ಆಗಲೂ ಅಭಿವೃದ್ದಿ ಕೈಗೊಂಡಿದ್ದೇನೆ, ಅಭಿವೃದ್ದಿ ಮಾಡಲು ತಮ್ಮ ಸರ್ಕಾರವೇ ಇರಬೇಕೆಂದಿಲ್ಲ, ವಿರೋಧ ಪಕ್ಷದಲ್ಲಿದ್ದರೂ ಅಭಿವೃದ್ದಿ ಮಾಡಬಹುದು. ಆದರೆ 14 ತಿಂಗಳ ಅವರದೇ ಪಕ್ಷದ ಅಧಿಕಾರದಲ್ಲಿ ಸುರೇಶ್ ಗೌಡ ಯಾವ ಅಭಿವೃದ್ದಿ ಮಾಡಿದ್ಧಾರೆಂದು ತೋರಿಸಲಿ, ಈಗ ಹೊಟ್ಟೆ ಉರಿಯಿಂದ ಟೀಕಿಸುವ ಮಾಜಿ ಶಾಸಕರನ್ನು ಕ್ಷೇತ್ರದ ಜನರೇ ಪ್ರಶ್ನಿಸುವ ಮೂಲಕ ಬಾಯಿ ಮುಚ್ಚಿಸಬೇಕು ಎಂದು ಕಿವಿಮಾತು ಹೇಳಿದರು.
1996ರಲ್ಲಿ ಸುರೇಶ್ ಗೌಡರನ್ನು ಹೆಚ್.ಎ.ಎಲ್ ಕೆಲಸದಿಂದ ತೆಗೆದು ಹಾಕಿದ್ರು, ಆಗ ನಾನು ಅವರ ಮರು ನೇಮಕಕ್ಕೆ ಶ್ರಮಿಸಿದ್ದೆ, ಆ ತಪ್ಪಿಗಾಗಿ ನನ್ನ ಬಗ್ಗೆ ಸುರೇಶ್ ಗೌಡ ಹಗುರವಾಗಿ ಮಾತನಾಡುತ್ತಿದ್ದಾರೆ, ಸರ್ಕಾರದಲ್ಲಿ ಸಚಿವರಾಗಲು ಅದೃಷ್ಟಬೇಕು, ಸುರೇಶ್ ಗೌಡ ಶಾಸಕರಾಗಿದ್ದಾಗ ಅವರ ಸರ್ಕಾರ ಬರಲಿಲ್ಲ, ಅಂದರೆ ನಾವೇನು ಮಾಡೋಕಾಗುತ್ತೇ ಎಂದು ತಿರುಗೇಟು ನೀಡಿದರು.