Saturday, April 20, 2024

ಪ್ರಾಯೋಗಿಕ ಆವೃತ್ತಿ

ಮೀಸಲಾತಿ ರಕ್ಷಣೆಗಾಗಿ ಹಿಂದುಳಿದ ಸಮುದಾಯ ಜಾಗೃತವಾಗಬೇಕು : ಚಲುವರಾಯಸ್ವಾಮಿ

ಮಹಿಳೆಯರಿಗೆ, ದಲಿತರಿಗೆ ಮತ್ತು ಹಿಂದುಳಿದವರಿಗೆ ಮೀಸಲಾತಿ ಇದೆ. ಇದನ್ನು ಕಿತ್ತುಹಾಕಲು ಯಾರಿಂದಲೂ ಸಾಧ್ಯವಿಲ್ಲ. ಸಂವಿಧಾನವನ್ನೇ ಬದಲಿಸುವ ಕೆಲವು ಪ್ರಯತ್ನಗಳು ವಿಫಲವಾಗಿವೆ. ಆದರೂ ಸಹ ಮೀಸಲಾತಿ ರಕ್ಷಣೆಗಾಗಿ ಹಿಂದುಳಿದ ಸಮುದಾಯಗಳು ಜಾಗೃತರಾಗಿಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಆಯೋಜಿಸಿದ್ದ ಹಿಂದುಳಿದ ವರ್ಗಗಳ ನಾಯಕತ್ವ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಅವರ ಆಡಳಿತ ಮತ್ತು ಕಾಂಗ್ರೆಸ್‌ನ ಸಿದ್ಧಾಂತಗಳನ್ನು ಪ್ರಸ್ತಾಪಿಸಿದ ಅವರು, ಹಿಂದುಳಿದ ವರ್ಗಗಳು ಬುದ್ಧಿವಂತಿಕೆ, ರಾಜಕೀಯ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಯಾರು ತಮ್ಮ ಪರ ಇದ್ದಾರೆ, ಯಾರು ತಮ್ಮ ಸಮುದಾಯಗಳನ್ನು ಕೈ ಹಿಡಿದು ಬೆಂಬಲಿಸುತ್ತಾರೆ ಅಂತಹವರನ್ನು ರಾಜಕೀಯವಾಗಿ ಬೆಂಬಲಿಸಿದರೆ ಹಿಂದುಳಿದವರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಹಿಂದುಳಿದ ವರ್ಗಗಳು ಸಂಘಟಿತ ಹೋರಾಟ ಮಾಡುವುದು ಅಗತ್ಯವಾಗಿದೆ. ಮಕ್ಕಳ ಭವಿಷ್ಯದ ದೃಷ್ಠಿಯಿಂದ ಮತ್ತು ತಮ್ಮ ಸಮುದಾಯಗಳ ರಕ್ಷಣೆಗಾಗಿ ಜಾಗೃತರಾಗಬೇಕು. ವಿಶೇಷವಾಗಿ ರಾಜಕೀಯ ನಾಯಕತ್ವವನ್ನು ಮೈಗೂಡಿಸಿಕೊಂಡು ಸಮಾಜ ಮತ್ತು ವರ್ಗದ ರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ, ಹಿಂದುಳಿದ ವರ್ಗಗಳು ಸಂಘಟಿತರಾಗಿ ರಾಜಕೀಯ ಅಧಿಕಾರ ಪಡೆಯುವ ಮೂಲಕ ತಮ್ಮ ನಾಯಕತ್ವನ್ನು ಬಲಪಡಿಸಿಕೊಳ್ಳಬೇಕು. ಹಿಂದುಳಿದವರು ವರ್ಗದ ಹೆಸರಲ್ಲಿ ಸಂಘಟಿತರಾಗಬೇಕು. ಹೆಚ್ಚು ಜಾಗೃತರಾಗಬೇಕು. ವಿಶೇಷವಾಗಿ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ನಾಯಕತ್ವವೆಂದರೆ ಸಂಘಟನೆ ಮಾತ್ರವಲ್ಲದೆ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಅವರ ಕಷ್ಟಸುಖಗಳಿಗೆ ಸ್ಪಂಧಿಸುತ್ತಾ ಸಾಗಬೇಕು. ಆ ಮೂಲಕ ನಾಯಕತ್ವವನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದರು.

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್. ಸಂದೇಶ್ ಮಾತನಾಡಿ, ಹಿಂದುಳಿದರಲ್ಲಿ ಸಾಮರಸ್ಯ, ಸಂಘಟನೆ ಮತ್ತು ರಾಜಕೀಯ ನಾಯಕತ್ವವನ್ನು ಹುಟ್ಟುಹಾಕುವ ಉದ್ದೇಶದೊಡನೆ ಈ ಸಮಾವೇಶವನ್ನು ಆಯೋಜಿಸಲಾಗಿದೆ. ಜಿಲ್ಲೆಯ ಹಿಂದುಳಿದ ಸಮಾಜಗಳು ಒಗ್ಗೂಡಬೇಕು. ಈ ಚುನಾವಣೆಯಲ್ಲಿ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಬೇಕು ಎಂದರು.

ಶಾಸಕ ಎಂ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ನಗರಸಭೆ ಅಧ್ಯಕ್ಷ ಎಚ್.ಎಸ್. ಮಂಜು, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್, ಜಿ.ಪಂ. ಮಾಜಿ ಸದಸ್ಯ ಐಪನಹಳ್ಳಿ ನಾಗೇಂದ್ರಕುಮಾರ್ ಮಾತನಾಡಿದರು.

ಹಿಂದುಳಿದ ವರ್ಗಗಳ ಮುಖಂಡರಾದ ಬಿ.ಲಿಂಗಯ್ಯ, ಕೆ.ಎಚ್.ನಾಗರಾಜು, ಎಂ.ಕೃಷ್ಣ, ಅಮ್ಜದ್‌ಪಾಷ, ಸಂತೆಕಸಲಗೆರೆ ಬಸವರಾಜು, ವೆಂಕಟೇಶ್‌ಬಾಬು, ಮಲ್ಲರಾಜೇ ಅರಸ್, ರಮೇಶ್, ಬಿ.ಟಿ. ಗುರುರಾಜ್, ಗೋವಿಂದಸ್ವಾಮಿ, ಅಂದಾನಿ ಸೋಮನಹಳ್ಳಿ, ಎಂ.ಎಸ್. ರಾಜಣ್ಣ ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಇದೇ ವೇಳೆ ಹಿಂದುಳಿದ ವರ್ಗಗಳ ಮುಖಂಡರನ್ನು ಸನ್ಮಾನಿಸಲಾಯಿತು. ಕಾಯಕ ಶರಣರು ಮತ್ತು ಸಾಮಾಜಿಕ ಸುಧಾಕರ ಭಾವಚಿತ್ರವುಳ್ಳ ಸ್ಟಾರ್ ಪ್ರದರ್ಶನ ವಿಶೇಷವಾಗಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!