ಧರ್ಮದ ಕುರಿತು ಅವಹೇಳನ ಮಾಡಿದ ಪ್ರಕರಣದದಲ್ಲಿ ಹಿರಿಯ ಲೇಖಕ ಕೆ.ಎಸ್ ಭಗವಾನ್, ಅರವಿಂದ ಮಾಲಗತ್ತಿ, ಫ್ರೊ. ಮಹೇಶ್ ಚಂದ್ರಗುರು ಅವರನ್ನು ಆರೋಪ ಮುಕ್ತಗೊಳಿಸಿ ಮೈಸೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಮೈಸೂರಿನ ಮಾನಸ ಗಂಗೋತ್ರಿ ಆವರಣದಲ್ಲಿ 2016ರಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಈ ಮೂವರೂ ‘ಧಾರ್ಮಿಕ ಅವಹೇಳನ’ ಮಾಡಿದ್ದಾರೆ ಎಂದು ಅದೇ ವಿಶ್ವವಿದ್ಯಾಲಯದ ಅಧ್ಯಾಪಕರೊಬ್ಬರು ಆರೋಪಿಸಿದ್ದರು. ಆರೋಪದ ಮೇರೆಗೆ ಮೈಸೂರಿನ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಮೂವರ ವಿರುದ್ಧವೂ ಅದೇ ವರ್ಷ ಪ್ರಕರಣ ದಾಖಲಾಗಿತ್ತು.
“ನ್ಯಾಯಾಲಯವು ಬುಧವಾರ ಪ್ರಕರಣದ ವಿಚಾರಣೆ ನಡೆಸಿದ್ದು, ಭಗವಾನ್, ಮಹೇಶ್ ಚಂದ್ರಗುರು ಹಾಗೂ ಅರವಿಂದ ಮಾಲಗತ್ತಿ ‘ಧಾರ್ಮಿಕ ಅವಹೇಳನ ಮಾಡಿದ್ದಾರೆ’ ಎಂಬುವುದಕ್ಕೆ ಯಾವುದೇ ಬಲವಾದ ಸಾಕ್ಷಾಧಾರಗಳಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಮೂವರನ್ನೂ ಆರೋಪ ಮುಕ್ತರೆಂದು ಘೋಷಿಸಿದೆ” ಎಂದು ಮೂವರ ಪರ ವಕಾಲತ್ತು ವಹಿಸಿದ್ದ ವಕೀಲರು ತಿಳಿಸಿದ್ದಾರೆ.
ಇತ್ತೀಚೆಗೆ ಲೇಖಕ ಕೆ.ಎಸ್ ಭಗವಾನ್ ‘ರಾಮ ಮಂದಿರ ಏಕೆ ಬೇಡ’ ಎಂಬ ಕೃತಿಯಲ್ಲಿ ರಾಮನ ಕುರಿತು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಶಿವಮೊಗ್ಗ ಜಿಲ್ಲೆಯ ಸಾಗರದ ಜೆಎಮ್‌ಎಫ್‌ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಡಿಸೆಂಬರ್ 19ರಂದು ಜಾಮೀನು ಪಡೆದು ಹೊರ ಬಂದಿದ್ದರು.




