ಬಿಜೆಪಿ ಸರ್ಕಾರ ಮತ್ತು ಜನಪ್ರತಿನಿಧಿಗಳು ಮಂಡ್ಯದ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಯಶಸ್ವಿಯಾಗಿ ನಡೆಸುವಲ್ಲಿ ವಿಫಲವಾಗಿದ್ದು, ಮುಂಬರುವ ರಾಜ್ಯ ಬಜೆಟ್ ನಲ್ಲಿ ಮೈಷುಗರ್ ಕಾರ್ಖಾನೆಗೆ ₹ 100 ಕೋಟಿ ರೂ.ಗಳನ್ನು ಘೋಷಿಸಬೇಕೆಂದು ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಒತ್ತಾಯಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಕಬ್ಬು ಬೆಳೆಗಾರರ ಸಂಘಟನೆ, ಪ್ರಗತಿ ಪರ ಸಂಘಟನೆ ಹಾಗೂ ಕೆಲ ರಾಜಕೀಯ ಪಕ್ಷಗಳ ಹೋರಾಟಕ್ಕೆ ಮಣಿದು ಬಿಜೆಪಿ ಸರ್ಕಾರ, ಕಾರ್ಖಾನೆಯನ್ನು ಸರ್ಕಾರದ ವತಿಯಿಂದ ನಡೆಸುವುದಾಗಿ ತಿಳಿಸಿತ್ತು. ಆದರೆ ಸಕಾಲದಲ್ಲಿ ಕಾರ್ಖಾನೆ ಪ್ರಾರಂಭ ಮಾಡದೇ ವಿಳಂಬ ಮಾಡಿತು. ಕಾರ್ಖಾನೆ ದುರಸ್ತಿಯನ್ನು ಆರ್.ಬಿ.ಟೆಕ್ ಸಂಸ್ಥೆಯವರಿಗೆ ಗುತ್ತಿಗೆ ಕೊಟ್ಟಿತು. ಈ ಕಂಪನಿಯೂ ಯಾವುದೇ ಪರಿಣಿತಿ ಹೊಂದಿರಲಿಲ್ಲ ಎಂದು ದೂರಿದರು.
ಕಾರ್ಖಾನೆಯನ್ನು ಪ್ರಾರಂಭ ಮಾಡಿದ ಐದು ತಿಂಗಳಲ್ಲಿ ಕೇವಲ 1 ಲಕ್ಷ ಟನ್ ಕಬ್ಬನ್ನಷ್ಟೆ ನುರಿಸಲಾಗಿದೆ, ಇದು ನಾಚಿಕೆಗೇಡಿನ ಸಂಗತಿ. ಅಲ್ಲದೇ ಸಹ ವಿದ್ಯುತ್ ಘಟಕವನ್ನು ಪ್ರಾರಂಭ ಮಾಡದೇ, ಕೆ.ಇ.ಬಿ.ಯಿಂದ ದುಬಾರಿ ಹಣ್ಣಕ್ಕೆ ವಿದ್ಯುತ್ ಅನ್ನು ಖರೀದಿ ಮಾಡಲಾಗಿದೆ. ಕಬ್ಬನ್ನು ಸಕಾಲಕ್ಕೆ ನುರಿಸುವಲ್ಲಿ ವಿಳಂಬವಾದ್ದರಿಂದ ಕ್ವಾಲಿಟಿ ಶುಗರ್ ಅನ್ನು ತೆಗೆಯಲು ಸಾಧ್ಯವಾಗಿಲ್ಲ, ಇದರಿಂದಾಗಿ ಕಾರ್ಖಾನೆಗೆ ಇನ್ನಷ್ಟು ನಷ್ಟವಾಗಿದೆ ಎಂದು ಆರೋಪಿಸಿದರು.
ಮುಂಬರುವ 2023-2024ನೇ ಸಾಲಿನಲ್ಲಾದರೂ ಸರ್ಕಾರವು ಜೂನ್ ತಿಂಗಳಿನಲ್ಲಿಯೇ ಕಾರ್ಖಾನೆಯನ್ನು ಪ್ರಾರಂಭಿಸಿ, ಸಕಾಲಕ್ಕೆ ಕಬ್ಬನ್ನು ಅರೆಯಬೇಕು. ಅಲ್ಲದೆ ಕೋಣನಹಳ್ಳಿ ಕೆರೆಯಿಂದ ನೀರಾವರಿ ಇಲಾಖೆಯು ನೀರು ಒಪ್ಪಂದ ಮಾಡಿಕೊಂಡಿದ್ದು, ಜರೂರಾಗಿ ನೀರನ್ನು ಕಾರ್ಖಾನೆಗೆ ಒದಗಿಸಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಮೈಷುಗರ್ ಮಾಜಿ ಅಧ್ಯಕ್ಷರಾದ ಹಾಲಹಳ್ಳಿ ರಾಮಲಿಂಗಯ್ಯ, ಸಿದ್ಧರಾಮೇಗೌಡ ಉಪಸ್ಥಿತರಿದ್ದರು.




