ಮುಂಬರುವ ಡಿಸೆಂಬರ್ ೨೦,೨೧ ಮತ್ತು ೨೨ ರಂದು ಮಂಡ್ಯದಲ್ಲಿ ನಡೆಯಲಿರುವ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ನೋಂದಣಿ, ವಸತಿ ಹಾಗೂ ಇನ್ನಿತರ ಸಮಿತಿಗಳ ಬೇಡಿಕೆ ಪರಿಶೀಲಿಸಿ ಸುಗಮ ಸಾರಿಗೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮದ್ದೂರು ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಸಾರಿಗೆ ಸಮಿತಿ ಅಧ್ಯಕ್ಷರಾದ ಕೆ.ಎಂ.ಉದಯ್ ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಾರಿಗೆ ಸಮಿತಿ ಸಭೆಯಲ್ಲಿ ಸದಸ್ಯರನ್ನುದ್ದೇಶಿಸಿ ಅವರು ಮಾತನಾಡಿದರು.
ಸಮ್ಮೇಳನಕ್ಕೆ ಆಗಮಿಸುವವರಿಗೆ ಯಾರಿಗೆ, ಯಾವ ರೀತಿಯ ವಾಹನ ನೀಡಬೇಕು. ಸಮ್ಮೇಳನಕ್ಕೆ ಜನರನ್ನು ಕರೆತರಲು ಜಿಲ್ಲೆಯ ಗ್ರಾಮಗಳಿಗೆ ಎಷ್ಟು ಬಸ್ಸನ್ನು ನಿಯೋಜಿಸಬೇಕು. ಸಮ್ಮೇಳನ ಸ್ಥಳ ತಲುಪಲು ಅನುಕೂಲವಾಗುವಂತೆ ಶಾಲಾ-ಕಾಲೇಜುಗಳ ಮಿನಿ ಬಸ್ಗಳನ್ನು ಪಡೆಯುವುದು ಸೇರಿದಂತೆ ವಿವಿಧ ರೀತಿಯ ವಾಹನಗಳನ್ನು ಸಾರಿಗೆ ವ್ಯವಸ್ಥೆಗೆ ಬಳಸಿಕೊಳ್ಳಲಾಗುವುದು ಎಂದರು.
ಮಂಡ್ಯದಲ್ಲಿ ೩೦ ವರ್ಷಗಳ ನಂತರ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಇದನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸುವುದು ನಮ್ಮೆಲ್ಲರ ಸ್ವಾಭಿಮಾನದ ಪ್ರಶ್ನೆಯಾಗಿದೆ. ಅದಕ್ಕಾಗಿ ಏನೇನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಿರ್ಧರಿಸಬೇಕು. ಮುಂದಿನ ಕೆಲವು ದಿನಗಳಲ್ಲಿ ಸಚಿವರ ಸಲಹೆ ಪಡೆದು ನಮ್ಮ ಸಮಿತಿ ಒಂದು ಉತ್ತಮ ತಂಡವಾಗಿ ಕೆಲಸ ಮಾಡಬೇಕು. ಅದಕ್ಕಾಗಿ ಸಮಿತಿಯ ಸದಸ್ಯರೆಲ್ಲರಿಗೂ ನಿರ್ದಿಷ್ಟ ಜವಾಬ್ದಾರಿ ವಹಿಸಲಾಗುವುದು ಎಂದು ತಿಳಿಸಿದರು.
ಸಮ್ಮೇಳನಕ್ಕೆ ಆಗಮಿಸುವ ಗಣ್ಯರು, ಸಾಹಿತಿಗಳು, ಕನ್ನಡಾಭಿಮಾನಿಗಳಿಗೆ ವೇದಿಕೆ ಕಾರ್ಯಕ್ರಮದ ಬಳಿ ಕರೆದುಕೊಂಡು ಹೋಗಲು ಸೂಕ್ತ ವಾಹನಗಳ ವ್ಯವಸ್ಥೆ ಮಾಡಬೇಕು. ವೇದಿಕೆ ಕಾರ್ಯಕ್ರಮದ ಸ್ವಲ್ಪ ದೂರದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡುವುದು ಮುಖ್ಯವಾಗಿದೆ ಎಂದರು.
ಸಭೆಗೆ ಸಮಿತಿಯ ಸದಸ್ಯ ಕಾರ್ಯದರ್ಶಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಸುಧಾಮ ಮಾತನಾಡಿ ಸಾರಿಗೆ ಸಮಿತಿಯ ಧ್ಯೇಯೋದ್ದೇಶಗಳು ಮತ್ತು ಜವಾಬ್ದಾರಿಗಳನ್ನು ಶಾಸಕರ ಗಮನಕ್ಕೆ ತಂದರು. ಜಿಲ್ಲೆಯಲ್ಲಿ ಒಟ್ಟು ೨೪೩ ಗ್ರಾಮ ಪಂಚಾಯಿತಿಗಳಿದ್ದು, ಪ್ರತಿ ಗ್ರಾಮ ಪಂಚಾಯಿತಿಯಿಂದ ೨೦೦ ಮಂದಿ ಸಮ್ಮೇಳನಕ್ಕೆ ಬರುವಂತೆ ತಿಳಿಸಿ ಅವರಿಗೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಸಮ್ಮೇಳನಕ್ಕೆ ಕರೆತರಲು ವ್ಯವಸ್ಥೆ ಮಾಡಬಹುದು ಎಂದರು.
ಸಮಿತಿ ಸಂಚಾಲಕರಾದ ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ ಅವರು ಮಾತನಾಡಿ ಹಾವೇರಿ ಸಮ್ಮೇಳನದಲ್ಲಿ ಬಳಸಿಕೊಂಡ ವಾಹನಗಳ ಸಂಖ್ಯೆ ಮತ್ತು ಜಿಲ್ಲೆಯಲ್ಲಿ ಸಮ್ಮೇಳನಕ್ಕೆ ಬಳಕೆಯಾಗುವ ವಿವಿಧ ರೀತಿಯ ವಾಹನಗಳ ಸಂಖ್ಯೆಯನ್ನು ತಿಳಿಸಿದರು.
ಶಾಲಾ ಮಖ್ಯಸ್ಥರ ಸಭೆ ನಡೆಸಿ
ಸಾಹಿತ್ಯ ಸಮ್ಮೇಳನದ ಸಂಚಾಲಕರಾದ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಸಾರಿಗೆ ಸಮಿತಿಯದ್ದು ವಿಶಿಷ್ಟ ರೀತಿಯ ಜವಾಬ್ದಾರಿಯಾಗಿದ್ದು ಅಗತ್ಯಕ್ಕೆ ತಕ್ಕಂತೆ ಶಾಲಾ ವಾಹನಗಳನ್ನು ಬಳಸಿಕೊಳ್ಳಬಹುದು. ವಿವಿಧ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ಮುಖ್ಯಸ್ಥರ ಸಭೆ ಕರೆದು ವಾಹನಗಳನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿ ಪಡೆಯೋಣ ಎಂದರು. ಸಮ್ಮೇಳನ ನಡೆಯುವ ಸ್ವಲ್ಪ ದೂರದಲ್ಲಿರುವ ಸ್ಥಳಗಳನ್ನು ಗುರುತಿಸಿ ಬಳಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬಹುದು ಎಂದರು.
ಮಂಡ್ಯ ದರ್ಶನಕ್ಕೆ ಅವಕಾಶ ಕಲ್ಪಿಸಿ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌ.ಕಾರ್ಯದರ್ಶಿ ಡಾ.ಹುಸ್ಕೂರು ಕೃಷ್ಣೇಗೌಡ ಮಾತನಾಡಿ, ಶಿಕ್ಷಣ ಸಂಸ್ಥೆಗಳಿಂದ ಉಚಿತ ಬಸ್ ಪಡೆಯಲು ಮನವಿ ಮಾಡಬಹುದು.
ಸಮ್ಮೇಳನದ ಹಿಂದಿನ ದಿನ ರಾಜ್ಯದ ವಿವಿಧೆಡೆಗಳಿಂದ ಪ್ರತಿನಿಧಿಗಳು ಆಗಮಿಸುವುದರಿಂದ ಒಂದು ದಿನ ಮುಂಚೆಯೇ ವಾಹನ ಸೌಲಭ್ಯ ಒದಗಿಸಬೇಕು. ಸಮ್ಮೇಳನಕ್ಕೆ ಬಸ್ ಒದಗಿಸುವುದರ ಜೊತೆಗೆ ಆಸಕ್ತರು ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಮಂಡ್ಯ ದರ್ಶನ ಮಾಡಲು ಅನುಕೂಲವಾಗುವಂತೆ ಒಂದಷ್ಟು ವಾಹನಗಳನ್ನು ನಿಗದಿಗೊಳಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಸಾಪ ಕಾರ್ಯದರ್ಶಿ ಹರ್ಷ ವಿ ಪಣ್ಣೆದೊಡ್ಡಿ ಮಾತನಾಡಿ, ಮಹಿಳೆಯರ ಉಚಿತ ಬಸ್ ಸೌಲಭ್ಯದ ಜೊತೆಗೆ ಮೂರು ದಿನಗಳ ಕಾಲ ಪುರುಷರಿಗೂ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಬೇಕು ಎಂದರು.
ಸಮಿತಿ ಸದಸ್ಯ, ವಕೀಲ ಟಿ.ಎಸ್.ಸತ್ಯಾನಂದ ಸಮ್ಮೇಳನಕ್ಕೆ ಬಳಸಿಕೊಳ್ಳುವ ವಾಹನಗಳ ಚಲನವಲನ ತಿಳಿಯಲು ಕ್ಯೂಆರ್ ಕೋಡ್ ಮತ್ತು ಜಿಪಿಎಸ್ ಬಳಕೆ ಮಾಡಿಕೊಳ್ಳಬಹುದು ಎಂದರು.
ಸಭೆಯಲ್ಲಿ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಸಾರಿಗೆ ಸಮಿತಿಯ ಉಪಾಧ್ಯಕ್ಷ ಎಸ್.ಪಿ.ನಾಗರಾಜು,ಬಿಇಒ ಮಹದೇವು,ಖಾಸಗಿ ವಾಹನಗಳ ಮಾಲೀಕರ ಸಂಘದ ಅಧ್ಯಕ್ಷ ಭಕ್ತವತ್ಸಲ, ವಿಶೇಷಾಧಿಕಾರಿ ಚಂದ್ರಶೇಖರ್, ಜಿಲ್ಲಾ ಕಸಾಪದ ಬಿ.ಎಂ.ಅಪ್ಪಾಜಪ್ಪ, ಸುನಿಲ್ ಕುಮಾರ್, ಹೊಳಲು ಶ್ರೀಧರ್, ಕೃಷ್ಣ,ಚೇತನಕುಮಾರ್, , ಜಿ.ವಿ.ನಾಗರಾಜು,ಕೋಣನಹಳ್ಳಿ ಜಯರಾಮು, ನೀಲಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




