Friday, September 20, 2024

ಪ್ರಾಯೋಗಿಕ ಆವೃತ್ತಿ

ನಟ, ಹೋರಾಟಗಾರ ಚೇತನ್‌ ಅಹಿಂಸಾಗೆ ಜಾಮೀನು : ಬಿಡುಗಡೆ ಸಾಧ್ಯತೆ

ಕಲ್ಪಿತ ಇತಿಹಾಸ ಸೃಷ್ಟಿಗೆ ಕಾರಣವಾಗಿದ್ದ ಉರಿಗೌಡ, ನಂಜೇಗೌಡ ಎಂಬ ಪಾತ್ರಗಳ ಕುರಿತು ಉಲ್ಲೇಖಿಸುತ್ತಾ, ‘ಹಿಂದುತ್ವವನ್ನು ಸುಳ್ಳಿನ ಮೇಲೆ ಕಟ್ಟಲಾಗಿದೆ’ ಎಂದು ಪೋಸ್ಟ್‌ ಮಾಡಿದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಅವರಿಗೆ ಗುರುವಾರ ಜಾಮೀನು ದೊರೆತಿದೆ.

ಬೆಂಗಳೂರು ಮ್ಯಾಜಿಸ್ಟ್ರೇಟ್‌ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಸುನಿಲ್ ಗುನ್ನಾಪುರ ಮತ್ತು ವಕೀಲರ ತಂಡ ಚೇತನ್‌ ಪರವಾಗಿ ವಾದ ಮಂಡಿಸಿದ್ದಾರೆ. “ಜಾಮೀನು ಪ್ರಕ್ರಿಯೆಗಳು ಮುಗಿದಿದ್ದು, ಇಂದು ರಾತ್ರಿ ಚೇತನ್‌ ಅವರು ಬಿಡುಗಡೆಯಾಗುವ ಸಾಧ್ಯತೆ ಇದೆ” ಎಂದು ಮೂಲಗಳು ತಿಳಿಸಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಸಂಘಪರಿವಾರದ ವಿರುದ್ಧ ಪೋಸ್ಟ್ ಹಾಕಿದ್ದರೆಂಬ ಆರೋಪದ ಮೇಲೆ ಚೇತನ್ ಅವರನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದರು. ಬಳಿಕ ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಚೇತನ್‌ ಅವರನ್ನು ಒಪ್ಪಿಸಲಾಗಿತ್ತು.

ಹಿಂದುತ್ವದ ಕುರಿತು ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದಾರೆ ಎಂದು ಶಿವಕುಮಾರ್ ಎಂಬುವವರು ದೂರು ನೀಡಿದ್ದರು. ಆ ದೂರಿನ ಮೇರೆಗೆ ಸೋಮವಾರ ರಾತ್ರಿ ಶೇಷಾದ್ರಿಪುರಂ ಪೊಲೀಸರು ಚೇತನ್ ವಿರುದ್ಧ ಐಪಿಸಿ ಸೆಕ್ಷನ್ 295A, 505B ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಇಂದು ಬೆಳಿಗ್ಗೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಚೇತನ್‌ ಮೇಲಿನ ಆರೋಪವೇನು 

“ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ. ಸಾವರ್ಕರ್ ಹೇಳಿಕೆ : ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಭಾರತೀಯ ‘ರಾಷ್ಟ್ರ’ ಪ್ರಾರಂಭವಾಯಿತು. ಇದು ಒಂದು ಸುಳ್ಳು. 1992ರಲ್ಲಿ: ಬಾಬರಿ ಮಸೀದಿ ‘ರಾಮನ ಜನ್ಮಭೂಮಿ’. ಇದು ಒಂದು ಸುಳ್ಳು. ಈಗ 2023 ರಲ್ಲಿ : ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂದರು’ – ಇದು ಕೂಡ ಒಂದು ಸುಳ್ಳು. ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು. ಸತ್ಯವೇ ಸಮಾನತೆ” ಎಂದು ಚೇತನ್‌ ಪೋಸ್ಟ್ ಮಾಡಿದ್ದರು.

ಬಂಧನಕ್ಕೆ ವ್ಯಾಪಕ ವಿರೋಧ

ಚೇತನ್‌ ಅವರ ಬಂಧನವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

ವಕೀಲರಾದ ಜಿ.ಟಿ.ನರೇಂದ್ರಕುಮಾರ್‌ ಪ್ರತಿಕ್ರಿಯಿಸಿ, “ವ್ಯಕ್ತಿಯೊಬ್ಬನ ವಿರುದ್ಧ ದೂರು ನೀಡಿದಾಕ್ಷಣ ಪೊಲೀಸರು ಬಂಧಿಸುವುದು ಮತ್ತು ದಂಡಾಧಿಕಾರಿಗಳ ನ್ಯಾಯಾಲಯಗಳು ತಮ್ಮ ವಿವೇಚನಾಧಿಕಾರವನ್ನು ಬಳಸದೆ ಜೇಲಿಗಟ್ಟುವುದು- ಇವುಗಳಿಗೆ ಸುಪ್ರೀಂ ಕೋರ್ಟ್ ಅಂಕುಶ ಹಾಕಬೇಕು, ಸ್ಪಷ್ಟ ನಿರ್ದೇಶನಗಳನ್ನು ರೂಪಿಸಬೇಕು. ಇಲ್ಲದಿದ್ದರೆ ಸಂವಿಧಾನಾತ್ಮಕವಾಗಿ ಭಾರತೀಯ ಪ್ರಜೆಗಳಿಗೆ ನೀಡಲಾಗಿರುವ ಅನೇಕ ಮೂಲಭೂತ ಹಕ್ಕುಗಳಿಗೆ ಬೆಲೆ ಇಲ್ಲದಂತಾಗಿ ಮತ್ತೆ 1975 – 77 ರ ನಡುವಿನ ತುರ್ತು ಪರಿಸ್ಥಿತಿಯತ್ತ ದೇಶ ಜಾರುವ ಆತಂಕವಿದೆ” ಎಂದು ಎಚ್ಚರಿಸಿದ್ದಾರೆ.

ಹಿರಿಯ ವಕೀಲರಾದ ಸಿ.ಎಸ್‌.ದ್ವಾರಕನಾಥ್‌ ಪ್ರತಿಕ್ರಿಯಿಸಿ, “ಚೇತನ್ ಹೇಳಿರುವುದರಲ್ಲಿ ಬಂಧಿಸುವಂತದ್ದು ಏನಿದೆ? ನಾನು ಎಫ್‌ಐಆರ್‌‌ ನೋಡಿದೆ, ಅದರಲ್ಲಿ ಏನೂ ಹುರುಳಿಲ್ಲ. ಇಂತದ್ದೇ ಕ್ಷುಲ್ಲಕ ಕಾರಣಗಳಿಗೆ ಬಂಧಿಸುವುದಾದರೆ ಇಡೀ ಕರ್ನಾಟಕವನ್ನೇ ಒಂದು ಬಂದೀಖಾನೆಯಾಗಿ ಪರಿವರ್ತಿಸಬೇಕಾಗುತ್ತದೆ” ಎಂದು ಟೀಕಿಸಿದ್ದಾರೆ.

ಮುಂದುವರಿದು, “ಇದು ಭಾರತ ಸಂವಿಧಾನದ ಅನುಚ್ಛೇದ 19(1)(a) ಅನ್ನ ಸ್ಪಷ್ಟವಾಗಿ ಉಲ್ಲಂಘಿಸಿದೆ. ಇಲ್ಲಿ ಸ್ಪಷ್ಟವಾಗಿ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ. ನಟ ಚೇತನ್ ಕುರಿತು ನಮ್ಮ ವ್ಯಕ್ತಿಗತ ಭಿನ್ನಾಭಿಪ್ರಾಯಗಳು ಏನೇ ಇರಬಹುದು, ಆದರೆ ಈ‌ ಸಂದರ್ಭದಲ್ಲಿ ಎಲ್ಲಾ ಪ್ರಜಾಪ್ರಭುತ್ವವಾದಿಗಳು, ಸಂವಿಧಾನದಲ್ಲಿ ನಂಬಿಕೆಯಿರುವವರು ಚೇತನ್‌ ಜೊತೆಯಲ್ಲಿ ನಿಲ್ಲಬೇಕಿದೆ. ಸಂವಿಧಾನದ ಆಶಯಗಳನ್ನು‌ ಉಳಿಸಿಕೊಳ್ಳಬೇಕಿದೆ ಮತ್ತು ಸರ್ಕಾರದ ಸಂವಿಧಾನ ವಿರೋಧಿ ಪ್ಯಾಸಿಸಂ ಧೋರಣೆಯನ್ನು ಖಂಡಿಸಬೇಕಿದೆ” ಎಂದು ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!