ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗುತ್ತಿದ್ದು,ಬಾಲ್ಯವಿವಾಹ ತಡೆಗಟ್ಟುವುದು ಎಲ್ಲರ ಜವಾಬ್ದಾರಿ ಎಂದು ಶಾಸಕ ಡಿ.ಸಿ.ತಮ್ಮಣ್ಣ ಸಲಹೆ ನೀಡಿದರು.
ಮದ್ದೂರು ತಾಲ್ಲೂಕಿನ ದೊಡ್ಡರಸಿನಕೆರೆಯ ಎಸ್ ವೈ ಎಸ್ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಇವರ ಸಂಯುಕ್ತ ಆಶ್ರಯದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ ಹಾಗೂ ಇಲಾಖೆ ಯೋಜನೆಗಳ ಕುರಿತು ಸ್ವಸಹಾಯ ಸಂಘ, ಶ್ರೀ ಶಕ್ತಿ ಸಂಘ ಹಾಗು ಮಹಿಳ ಸಂಘದ ಸದಸ್ಯರುಗಳಿಗೆ ಆಯೋಜಿಸಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಂದೆ -ತಾಯಂದಿರು ತಮ್ಮ ಮಕ್ಕಳನ್ನು ನಿರ್ಲಕ್ಷ್ಯತನದಿಂದ ಹಾಗು ಮಕ್ಕಳ ಬಗ್ಗೆ ಯಾವುದೇ ರೀತಿಯಲ್ಲೂ ನಿಗಾವಹಿಸದೆ ಇರುವುದರಿಂದ ಮಕ್ಕಳು ಪ್ರೀತಿ,ಪ್ರೇಮದ ಸುಳಿಯಲ್ಲಿ ಬಿದ್ದು ಬಾಲ್ಯ ವಿವಾಹ ವಾಗುತ್ತಿರುವುದು ಕಂಡು ಬರುತ್ತಿದೆ. ಮಕ್ಕಳ ಪ್ರೀತಿಯ ವಿಷಯ ಪೋಷಕರಿಗೆ ಗೊತ್ತಾದಾಗ ಮರ್ಯಾದೆ ಗೋಸ್ಕರ ಬಾಲ್ಯ ವಿವಾಹಗಳನ್ನು ಮಾಡಲು ಮುಂದಾಗುತ್ತಿದ್ದಾರೆ ಎಂದರು.
ಈ ಬಾಲ್ಯ ವಿವಾಹಗಳು ನಿಲ್ಲಬೇಕಾದರೆ ತಂದೆ- ತಾಯಂದಿರು ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಿ ಅವರನ್ನು ಪ್ರೀತಿ, ವಾತ್ಸಲ್ಯದಿಂದ ಹಾಗೂ ನಂಬಿಕೆಯಿಂದ ನೋಡಿಕೊಂಡಾಗ ಮಾತ್ರ ಬಾಲ್ಯ ವಿವಾಹಗಳು ನಿರ್ಮೂಲನೆ ಆಗಲು ಸಾಧ್ಯವಾಗುತ್ತದೆ. ಹಾಗೆ ಮಕ್ಕಳು ಸಹ ನಮ್ಮ ತಂದೆ- ತಾಯಿಯರು ನಮಗಾಗಿ,ನಮ್ಮ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿದು ಶಿಕ್ಷಣದ ಕಡೆ ಹೆಚ್ಚು ಗಮನ ಕೊಟ್ಟಾಗ ಮಾತ್ರ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಂ.ಎನ್. ಚೇತನ್ ಕುಮಾರ್ ಅವರು,ಪೋಕ್ಸೋ ಕಾಯ್ದೆ ಅಡಿ ಇರುವ ಕಾನೂನು ಕ್ರಮಗಳ ಬಗ್ಗೆ ಹಾಗೂ ಇಲಾಖೆಯಲ್ಲಿ ಮಕ್ಕಳಿಗಾಗಿ ಇರುವ ವಿವಿಧ ಯೋಜನೆಗಳ ಕುರಿತು ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ರಕ್ಷಣಾಧಿಕಾರಿ ರಾಜೇಂದ್ರ , ಕಾನೂನು ಪರಿವೀಕ್ಷಣಾಧಿಕಾರಿ ಶೈಲಜಾ, ಮದ್ದೂರು ತಾಲ್ಲೂಕಿನ ಸಹಾಯಕ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಭಾಗ್ಯ, ಮೇಲ್ವಿಚಾರಕರಾದ ಶೋಭಾ, ಜಯಲಕ್ಷ್ಮಿ, ರಾಜೇಶ್ವರಿ, ಭಾಗ್ಯ, ಲತಾ, ಉಮಾ, ಸ್ವಾತಿ, ಅಮೃತ್ ಸಂಜೀವಿನಿ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು




