ಪೋಷಕರು ಮಕ್ಕಳನ್ನು ಬಾಲಕಾರ್ಮಿಕರನ್ನಾಗಿಸಿ, ಅವರ ಉಜ್ವಲವಾದ ಭವಿಷ್ಯ ಹಾಳುಮಾಡದೆ ಮಕ್ಕಳ ಪ್ರಗತಿಗೆ ಮುಂದಾಗಬೇಕು ಎಂದು ಜೆ.ಎಂ.ಎಫ್.ಸಿ ಸಿವಿಲ್ ನ್ಯಾಯಾಧೀಶರಾದ ಹೆಚ್.ಓಂಕಾರಮೂರ್ತಿ ಮನವಿ ಮಾಡಿದರು.
ಇಂದು ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಹಕ್ಕುಗಳನ್ನು ಸಂರಕ್ಷಣೆ ಮಾಡಿ ಭವಿಷ್ಯದ ನಾಗರೀಕರನ್ನಾಗಿ ರೂಪಿಸಬೇಕಾಗಿರುವುದುಪೋಷಕರು ಹಾಗೂ ತಂದೆ-ತಾಯಿಗಳ ಆದ್ಯ ಕರ್ತವ್ಯವಾಗಿದೆ. ಆಟವಾಡಿಕೊಂಡು ಶಾಲೆಗೆ ಹೋಗಿ ಪಾಠಪ್ರವಚನಗಳನ್ನು ಕಲಿಯಬೇಕಾದ ಮಕ್ಕಳನ್ನು ಶಾಲೆಗೆ ಹೋಗುವುದನ್ನು ತಪ್ಪಿಸಿ ಕೆಲಸಕ್ಕೆ ಹಚ್ಚಿ ಬಾಲ ಕಾರ್ಮಿಕರನ್ನಾಗಿಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹವಾದ ಅಪರಾಧವಾಗಿದೆ. 15 ವರ್ಷದೊಳಗಿನ ಮಕ್ಕಳ ಹಕ್ಕುಗಳನ್ನು ಸಂರಕ್ಷಣೆ ಮಾಡದೇ ಕೆಲಸಕ್ಕೆ ಕಳಿಸಿ ದುಡಿಮೆ ಮಾಡಿಸಿದರೆ ಮಕ್ಕಳು ಕೆಲಸ ಮಾಡುವ ಹೋಟೆಲ್, ಕ್ಯಾಂಟೀನ್ ಸೇರಿದಂತೆ ಅಂಗಡಿ ಮುಂಗಟ್ಟುಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣವಾದ ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಎಚ್ಚರಿಸಿದರು.
ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತ ದೇಶದ ಸತ್ಪ್ರಜೆಗಳಾದ್ದರಿಂದ ಮಕ್ಕಳಿಗೆ ಶಿಕ್ಷಣದ ಸಂಸ್ಕಾರ ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡುವಂತೆ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು ಎಂದು ಪೋಷಕರಿಗೆ ಕರೆ ನೀಡಿದರು..
ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್ ಮಾತನಾಡಿ, ಮಕ್ಕಳು ದೇವರ ಸ್ವರೂಪವಾಗಿದ್ದಾರೆ. ಮಕ್ಕಳ ಶೈಕ್ಷಣಿಕ ಪ್ರಗತಿ ಸೇರಿದಂತೆ ಆಟೋಟಗಳಲ್ಲಿ ಮಕ್ಕಳು ಭಾಗವಹಿಸದಂತೆ ತಪ್ಪಿಸಿ, ಮಕ್ಕಳ ಸಂವಿಧಾನಬದ್ಧವಾದ ಹಕ್ಕುಗಳನ್ನು ಧಮನ ಮಾಡದೇ ಮಕ್ಕಳ ವಿಕಾಸದಲ್ಲಿ ಪೋಷಕರು ಹಾಗೂ ತಂದೆತಾಯಿಗಳು ಸಂಭ್ರಮಪಡಬೇಕು. ಮಕ್ಕಳನ್ನು ಕಡ್ಡಾಯವಾಗಿ ವಿದ್ಯಾವಂತರನ್ನಾಗಿ ಮಾಡಿಸಿ ದೇಶವನ್ನು ಸುಭದ್ರವಾಗಿ ಕಟ್ಟಲು ಸಹಾಯವಾಗುವಂತೆ ನಿಮ್ಮ ಮಕ್ಕಳನ್ನೇ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು ಎಂದು ರವಿಶಂಕರ್ ಕರೆ ನೀಡಿದರು.
ಅಪರ ಸಿವಿಲ್ ನ್ಯಾಯಾಧೀಶರಾದ ಆರ್.ಶಕುಂತಲಾ, ಹಿರಿಯ ವಕೀಲರಾದ ಬಿ.ಎಲ್.ದೇವರಾಜು, ಬಂಡಿಹೊಳೆ ಗಣೇಶ್, ಹಿರಿಯ ವಕೀಲರಾದ ಬಿ.ಸಿ.ದಿನೇಶ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಕೆ.ರಾಜೇಗೌಡ, ಕಾರ್ಮಿಕ ನಿರೀಕ್ಷಕರಾದ ಎಂ.ಕೃಷ್ಣ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ರವಿಕುಮಾರ್, ಸರ್ಕಾರಿ ಅಭಿಯೋಜಕರಾದ ಬಿ.ಸಿ.ರಾಜೇಶ್, ವಕೀಲರ ಸಂಘದ ಜಂಟಿಕಾರ್ಯದರ್ಶಿ ಸಿ.ನಿರಂಜನ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ಜ್ಞಾನೇಶ್, ನೀಲಾಮಣಿ, ಶಿಕ್ಷಕರಾದ ಎಂ.ಟಿ.ದೇವರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.