ಕೃಷ್ಣರಾಜಪೇಟೆ ತಾಲ್ಲೂಕಿನಾದ್ಯಂತ ಮೋಟಾರ್ ಬೈಕಿನಲ್ಲಿ ಬಂದು ಒಂಟಿ ಮಹಿಳೆಯರ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದ ಕುಖ್ಯಾತ ಸರಗಳ್ಳ ತಾಲ್ಲೂಕಿನ ಕ್ಯಾತನಹಳ್ಳಿಯ ಸುರೇಶ್(32) ಪಟ್ಟಣ ಪೋಲಿಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
2022ರ ಮಾರ್ಚ್ 3ರಂದು ಕೈಗೋನಹಳ್ಳಿ ಗ್ರಾಮದ ಮಂಜೇಗೌಡರ ಪತ್ನಿ ಲತಾಮಣಿ ಅವರ ಕತ್ತಿನಲ್ಲಿದ್ದ 45 ಗ್ರಾಂ ತೂಕದ 1,65,000 ರೂ ಬೆಲೆ ಬಾಳುವ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಕ್ಯಾತನಹಳ್ಳಿ ಸುರೇಶ್ ಕೆ.ಆರ್.ಪೇಟೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸರಗಳ್ಳತನ ಮಾಡಲು ವಿಫಲಯತ್ನ ನಡೆಸಿದ್ದ.
ಇತ್ತೀಚೆಗೆ ಪುರಸಭಾ ಸದಸ್ಯ ಡಿ.ಪ್ರೇಮಕುಮಾರ್ ಅವರ ಸಹೋದರಿ ಶಿಕ್ಷಕಿ ಡಿ.ಜ್ಯೋತಿ ಅವರ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆಸಿದ್ದ. ಸಿಸಿ ಟಿವಿ ಚಿತ್ರಣದ ಆಧಾರದ ಮೇರೆಗೆ ಕೆ.ಆರ್.ಪೇಟೆ ಪಟ್ಟಣ ಠಾಣೆಯ ಪೋಲಿಸ್ ಇನ್ಸ್ ಪೆಕ್ಟರ್ ಎಂ.ಕೆ.ದೀಪಕ್ ಮತ್ತು ಸಬ್ ಇನ್ಸ್ ಪೆಕ್ಟರ್ ಎಸ್.ಪಿ.ಸುನೀಲ್ ಮತ್ತು ತಂಡವು ಆರೋಪಿಯನ್ನು ಹಿಡಿಯಲು ಕಾರ್ಯಾಚರಣೆ ಕೈಗೊಂಡಿತ್ತು.ಅದರಲ್ಲಿ ಯಶಸ್ವಿಯಾಗಿರುವ ಅವರು ಕಳ್ಳತನ ಮಾಡಲು ಬಳಸಿದ್ದ ಹೀರೋ ಹೋಂಡ ಫ್ಯಾಷನ್ ಮತ್ತು ಯಮಹಾ ಆರ್ ಎಕ್ಸ್ ಬೈಕಿನ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಖ್ಯಾತ ಸರಗಳ್ಳ ಸುರೇಶ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿ, ಕೆ.ಆರ್.ಪೇಟೆ ಪಟ್ಟಣದ ಜನತೆಯ ಆತಂಕವನ್ನು ದೂರ ಮಾಡಿರುವ ಪಟ್ಟಣ ಠಾಣೆಯ ಪೋಲಿಸ್ ಇನ್ಸ್ ಪೆಕ್ಟರ್ ಎಂ.ಕೆ.ದೀಪಕ್ ಮತ್ತು ಸಬ್ ಇನ್ಸ್‌ಪೆಕ್ಟರ್ ಎಸ್.ಪಿ.ಸುನೀಲ್ ಮತ್ತು ಪೋಲಿಸರ ತಂಡದ ಕಾರ್ಯದಕ್ಷತೆಯನ್ನು ಮಂಡ್ಯ ಜಿಲ್ಲಾ ಎಸ್.ಪಿ ಡಾ.ಎನ್.ಯತೀಶ್, ಎ.ಎಸ್.ಪಿ ವೇಣುಗೋಪಾಲ್, ನಾಗಮಂಗಲ ಡಿ.ವೈ.ಎಸ್.ಪಿ ನವೀನ್ ಕುಮಾರ್ ಅಭಿನಂದಿಸಿದ್ದಾರೆ.