Friday, September 20, 2024

ಪ್ರಾಯೋಗಿಕ ಆವೃತ್ತಿ

ದೃಶ್ಯ ಮಾಧ್ಯಮದ ಹಾವಳಿಯಿಂದ ಜಾನಪದ ನೇಪಥ್ಯಕ್ಕೆ: ಚುಕ್ಕಿ ನಂಜುಂಡಸ್ವಾಮಿ

ನಮ್ಮ ಬದುಕಿನ ಜೀವಸೆಲೆಯಾಗಿರುವ ಜಾನಪದ ಕಲೆಗಳು ಇಂದು ದೃಶ್ಯ ಮಾಧ್ಯಮದ ಹಾವಳಿಯಿಂದಾಗಿ ನೇಪಥ್ಯಕ್ಕೆ ಸರಿದು ಕಣ್ಮರೆಯಾಗುತ್ತಿವೆ. ನಮ್ಮ ಜೀವನದ ಪ್ರತಿಬಿಂಬ ವಾಗಿರುವ ಜಾನಪದ ಕಲೆಗಳ ಸಂರಕ್ಷಣೆಯು ಇಂದಿನ ಅಗತ್ಯವಾಗಿದೆ ಎಂದು ರೈತನಾಯಕಿ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.

ಕೆ.ಆರ್.ಪೇಟೆ ಪಟ್ಟಣದ ಎಸ್.ಎಂ.ಲಿಂಗಪ್ಪ ಶಿಕ್ಷಣ ಮಹಾ ವಿದ್ಯಾಲಯದ ಸಭಾಂಗಣದಲ್ಲಿ
ತಾಲೂಕು ಜಾನಪದ ಪರಿಷತ್ ಘಟಕದ ವತಿಯಿಂದ ವಿಶ್ವ ಜಾನಪದ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೊಬೈಲ್ ಫೋನುಗಳು, ಪೇಸ್‌ಬುಕ್, ವ್ಯಾಟ್ಸಫ್, ಟಿವಿ ಹಾಗೂ ದೃಶ್ಯಮಾಧ್ಯಮಗಳ ಹಾವಳಿಯಿಂದಾಗಿ ನಮ್ಮ ಹಿರಿಯರಿಂದ ನಮಗೆ ಬಳುವಳಿಯಾಗಿ ಬಂದಿರುವ ಜಾನಪದ ಕಲೆಗಳು ಇಂದು ಕಣ್ಮರೆಯಾಗಿ ನೇಪಥ್ಯಕ್ಕೆ ಸರಿಯುತ್ತಿವೆ. ಮೌಢ್ಯವಿಲ್ಲದ ನಮ್ಮ ಜೀವನದ ಜೀವಸೆಲೆಯಾಗಿರುವ ಜಾನಪದ ಕಲೆಗಳನ್ನು ಉಳಿಸಿ ನಮ್ಮ ಮುಂದಿನ ತಲೆಮಾರಿಗೆ ಜೋಪಾನ ಮಾಡಬೇಕಾಗಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದ್ದ ಮದುವೆ, ನಾಮಕರಣ, ಹಸೆಮಣೆ, ಸುಗ್ಗಿಪೂಜೆ, ದೇವರ ಪೂಜಾ ಸಮಾರಂಭಗಳಲ್ಲಿ ಸೋಬಾನೆ ಹಾಡುಗಳು ಹಾಗೂ ಜಾನಪದ ಕಲಾಪ್ರಕಾರಗಳ ಹಾಡುಗಳನ್ನು ಹಾಡದಿದ್ದರೆ ಆ ಕಾರ್ಯಕ್ರಮಗಳಿಗೆ ಬಣ್ಣ ಬಂದು ವಿಶೇಷವಾದ ಕಳೆಯೇ ಕಟ್ಟುತ್ತಿರಲಿಲ್ಲ, ಆದರೆ ಜಾಗತಿಕ ಜಗತ್ತಿನ ಸ್ಪರ್ಧಾ ಪ್ರಪಂಚದ ಇಂದಿನ ದಿನ ಮಾನದಲ್ಲಿ ಜಾನಪದ ಹಾಡುಗಾರರು, ಕೊರವಂಜಿಗಳು, ಸೋಬಾನೆ ಪದಗಳನ್ನು ಹಾಡುವವರನ್ನು ಹುಡುಕಿದರೂ ಸಿಗುತ್ತಿಲ್ಲ ಎಂದು ಹೇಳಿದರು.

ಕರ್ನಾಟಕ ರಾಜ್ಯ ಜಾನಪದ ಪರಿಷತ್ ಅಧ್ಯಕ್ಷ ಡಾ.ಹಿ.ಶಿ.ರಾಮಚಂದ್ರೇಗೌಡ ಮಾತನಾಡಿ, ನಮ್ಮ ಗ್ರಾಮೀಣ ಜನರ ಜೀವನಾನುಭವಗಳೇ ಜಾನಪದ ಹಾಡುಗಳಾಗಿ ಹೊರಹೊಮ್ಮುತ್ತಿದ್ದವಲ್ಲದೇ ನಮ್ಮ ಬದುಕಿನ ಜೀವಸೆಲೆ ಯಾಗಿ ಸ್ಪೂರ್ತಿಯ ಚಿಲುಮೆಗಳಾಗಿದ್ದವು. ಇಂದು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಹಾಗೂ ದೃಶ್ಯಮಾಧ್ಯಮಗಳ ಹಾವಳಿ ಯಿಂದಾಗಿ ಜಾಪಪದ ಕಲೆಗಳು ಕಣ್ಮರೆಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಹೆಚ್.ಟಿ.ಮಂಜು ಮಾತನಾಡಿ, ಜಾನಪದ ಕಲೆಗಳ ಮಹತ್ವ ಹಾಗೂ ಜೋಪಾನ ಮಾಡುವ ಬಗ್ಗೆ ಜಾನಪದ ಪರಿಷತ್ ಯುವಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಪರಿಷತ್ ಹಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಶ್ಲಾಘಿಸಿದರು.

ಮಂಡ್ಯ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಿ.ಪಿ.ಸ್ವಾಮಿ, ಕಾರ್ಯದರ್ಶಿ ಕೀಲಾರ ಕೃಷ್ಣೇಗೌಡ, ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಜಯರಾಂ, ರೈತ ನಾಯಕ ಮುದುಗೆರೆ ರಾಜೇಗೌಡ, ಪ್ರಾಂಶುಪಾಲ  ಮಂಜುನಾಥ್, ಗ್ರಾಮಭಾರತಿ ಸಮೂಹಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್.ಸಿ.ಕಿರಣಕುಮಾರ್,
ರೈತ ಮುಖಂಡರಾದ ಮರುವನಹಳ್ಳಿ ಶಂಕರ್, ಪಿ.ಬಿ.ಮಂಚನಹಳ್ಳಿ ನಾಗಣ್ಣಗೌಡ, ಕೆ.ಆರ್.ಪೇಟೆ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕತ್ತರಘಟ್ಟ ವಾಸು, ನಿಕಟಪೂರ್ವ ಅಧ್ಯಕ್ಷ ಕೆ.ಎಸ್.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!