ಸಮಾಜದಲ್ಲಿರುವ ಅಂಕು-ಡೊಂಕುಗಳನ್ನು ತಿದ್ದುವ ಕೆಲಸ ಚುಟುಕು ಸಾಹಿತ್ಯದಿಂದ ಹೊರಹೊಮ್ಮಲಿ ಎಂದು ಪಾಂಡವಪುರ ತಹಶೀಲ್ದಾರ್ ಎಸ್.ಸಂತೋಷ್ ಅಭಿಪ್ರಾಯಪಟ್ಟರು.
ಪಾಂಡವಪುರದ ಲಕ್ಷ್ಮೀ ನಾರಾಯಣಸ್ವಾಮಿ ಸಭಾಂಗಣದಲ್ಲಿ ಚುಟುಕು ಸಾಹಿತ್ಯ ಪರಿಷತ್, ಪಾಂಡವಪುರ ಘಟಕ ಮತ್ತು ಪ್ರಗತಿ ಸೇವಾ ಟ್ರಸ್ಟ್ ಪಾಂಡವಪುರ ಸಹಯೋಗದಲ್ಲಿ ಚುಸಾಪ ನೂತನ ಅಧ್ಯಕ್ಷ ಡಾ.ನಾಗೇಶ್ ರಾಗಿಮುದ್ದನಹಳ್ಳಿ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚುಟುಕು ಸಾಹಿತ್ಯ ಕವನ,ಕಾವ್ಯ,ಕಾದಂಬರಿ ರಚಿಸಲು ಮೂಲ ಅನಿಸುತ್ತದೆ.ವಿದ್ಯಾರ್ಥಿ ದಿಸೆಯಲ್ಲಿಯೇ ಚುಟುಕು ಸಾಹಿತ್ಯ ಅಭ್ಯಾಸ ಮಾಡಿಕೊಂಡರೆ ಇತರೆ ಸಾಹಿತ್ಯ ರಚನೆ ಮಾಡಲು ಸ್ಪೂರ್ತಿ ಸಿಗುತ್ತದೆ.ಸಮಾಜದಲ್ಲಿರುವ ವಿಷಯಗಳನ್ನು ಚುಟುಕು ಸಾಹಿತ್ಯದಲ್ಲಿ ಅಳವಡಿಸಿಕೊಂಡು ಸಮಾಜ ತಿದ್ದುವ ಕೆಲಸವನ್ನು ಚುಟುಕು ಸಾಹಿತ್ಯದ ಮೂಲಕ ಮಾಡಬೇಕಿದೆ.ವ್ಯಕ್ತಿಯ ಮನಪರಿವರ್ತನೆ ಕೂಡ ಮಾಡಲು ಸಾಧ್ಯ ಎಂದರು.

ಓದು ಮತ್ತು ಬರಹ ಉತ್ತಮವಾದ ಅಭ್ಯಾಸ. ಮನಸ್ಸು ಹಗುರಾಗಲು ಮತ್ತು ಉಲ್ಲಾಸ ಭರಿತವಾಗಿರಲು ಚುಟುಕು ಸಾಹಿತ್ಯ ಸಹಕರಿಸುತ್ತದೆ. ಕಡಿಮೆ ಸಾಲುಗಳಲ್ಲಿ ಜೀವನ ಮೌಲ್ಯಗಳನ್ನು ಹೇಳುತ್ತ ವ್ಯಕ್ತಿ ಮತ್ತು ಸಮಾಜವನ್ನು ತಿದ್ದುವ ಕೆಲಸವನ್ನು ಮಾಡುತ್ತದೆ. ಇಂತಹ ಚುಟುಕು ಸಾಹಿತ್ಯ ಪರಿಷತ್ ಘಟಕಕ್ಕೆ ಡಾ.ನಾಗೇಶ್ ರಾಗಿಮುದ್ದನಹಳ್ಳಿ ಅಧ್ಯಕ್ಷರಾಗಿರುವುದು ಅತ್ಯಂತ ಸೂಕ್ತ ಎನಿಸುತ್ತದೆ. ಬಹುಮುಖ ಪ್ರತಿಭೆಯುಳ್ಳ ಇವರು ಚುಟುಕು ಸಾಹಿತ್ಯ ಪರಿಷತ್ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ನಡೆಸಿ, ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡುತ್ತಾರೆ ಎಂಬ ನಂಬಿಕೆಯಿದೆ ಎಂದರು.
ಚುಸಾಪ ನೂತನ ಅಧ್ಯಕ್ಷ ಡಾ.ನಾಗೇಶ್ ರಾಗಿಮುದ್ದನಹಳ್ಳಿ ಮಾತನಾಡಿ, ಹೊಸ ಜವಾಬ್ದಾರಿಯನ್ನು ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿಸಿ, ಘಟಕಕ್ಕೆ ಉತ್ತಮ ಹೆಸರು ತರಲು ಪ್ರಯತ್ನಿಸುವುದಾಗಿ ತಿಳಿಸಿದರು.
ವೇದಿಕೆಯಲ್ಲಿ
ಗೌರವಾಧ್ಯಕ್ಷ ಹಾರೋಹಳ್ಳಿ ಧನ್ಯಕುಮಾರ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಸ್ವಾಮಿ, ಮಾತನಾಡಿದರು.
ತಾಲ್ಲೂಕು ವೈದ್ಯಕೀಯ ವಿಭಾಗದ ಆಡಳಿತಾಧಿಕಾರಿ ಡಾ.ಅರವಿಂದ್ ಶುಭ ಕೋರಿದರು.
ಕಾಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚಲುವೇಗೌಡ, ಎಸ್. ರವಿಕುಮಾರ್, ಶಿವಣ್ಣ ಮಂಗಲ, ವೆಂಕಟೇಶ, ಸಹಕಾರ ಕೇತ್ರದಿಂದ ಎಂ.ಡಿ. ರಾಜೇಗೌಡ,ಕ್ರೀಡಾ ಕ್ಷೇತ್ರದಿಂದ ಚಂದ್ರಕಲಾ ,ಕೃಷಿ ಕ್ಷೇತ್ರದಿಂದ ಮಂಜು, ಸಮಾಜ ಸೇವೆಗಾಗಿ ಪ್ರಭುಸ್ವಾಮಿಗೆ ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚುಟುಕು ಕವಿಗೋಷ್ಠಿಯಲ್ಲಿ 18 ಮಂದಿ ಕವಿಗಳು ಚುಟುಕು ಕವನ ವಾಚಿಸಿದರು.
ಶಿಕ್ಷಕ ಡಾ.ಬಿ.ಸಿ. ವಿಜಯಕುಮಾರ್ ಬಲ್ಲೇನಹಳ್ಳಿ , ರೂಪ ಹೊಸಹಳ್ಳಿ, ಶೀಲಾವತಿ, ಗೌರಮ್ಮ,ಶಶಿರೇಖಾ ರಾಜು, ಶ್ರೀರಂಗಪಟ್ಟಣ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕದಲಗೆರೆ ಜೆ.ಜಯರಾಂ ಹಾಜರಿದ್ದರು.




