Friday, September 20, 2024

ಪ್ರಾಯೋಗಿಕ ಆವೃತ್ತಿ

ಸಿಎಂ ಚರ್ಚೆಯ ನಡುವೆ ಕರಗಲೇಬೇಕಿದೆ ’ನಮ್ಮ ಮುಜುಗರ’!

✍️ ಮಾಚಯ್ಯ ಎಂ ಹಿಪ್ಪರಗಿ

  • ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದಷ್ಟೇ ಕಾಂಗ್ರೆಸ್ ಪಕ್ಷದ ಉದ್ದೇಶವಾಗಿತ್ತು
  • 2014ರ ಹೊತ್ತಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸೀಟು ಗಳಿಕೆಯಲ್ಲಿ ಕುಸಿಯುವಂತೆ ಮಾಡುವಲ್ಲಿ ಈ ಕೋಮುವಾದಿ ಒಕ್ಕೂಟ ಯಶಸ್ವಿಯಾಗಿತ್ತು
  • ಪ್ರಜಾಪ್ರಭುತ್ವದ ಮಾನದಂಡದಲ್ಲಿ ಕೋಮುವಾದದಷ್ಟೇ, ಜಾತಿವಾದವೂ ಅಪಥ್ಯವಾದುದು

ಮುಂದಿನ ಸಿಎಂ ಯಾರಾಗಬೇಕು? ಸದ್ಯದ ಮಟ್ಟಿಗಂತೂ ಕರ್ನಾಟಕದಲ್ಲಿ ಇದೇ ಬಹುಚರ್ಚಿತ ಪ್ರಶ್ನೆ. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಒಗ್ಗೂಡಿದ್ದವರೆಲ್ಲ ಈ ಒಂದು ಪ್ರಶ್ನೆಯನ್ನಿಟ್ಟುಕೊಂಡು ಹರಿದು ಇಬ್ಭಾಗವಾಗುತ್ತಿದ್ದಾರೆ. ಕಾಂಗ್ರೆಸ್ ಒಂದು ರಾಜಕೀಯ ಪಕ್ಷ. ಹಾಗಾಗಿ ಅಲ್ಲಿರುವ ಕಾರ್ಯಕರ್ತರಿಗೆ, ನಾಯಕರಿಗೆ ಅಧಿಕಾರವೇ ಮುಖ್ಯ. ಇದು ಎಲ್ಲಾ ರಾಜಕೀಯ ಪಕ್ಷಗಳಿಗೂ ಅನ್ವಯಿಸುತ್ತದೆ. ಬಹುಮತ ಪಡೆದ ಒಂದು ಪಕ್ಷದೊಳಗೆ ಇಂತಹ ಪ್ರಶ್ನೆಗಳು ಭುಗಿಲೇಳುವುದು ಸಹಜ.

ಆದರೆ, ಕರ್ನಾಟಕದಲ್ಲಿ ನಡೆದ ಈ ಚುನಾವಣೆಯು, ಕೇವಲ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ, ಅಥವಾ ಜೆಡಿಎಸ್ ಮತ್ತಿತರೆ ಸಣ್ಣಪುಟ್ಟ ಪಕ್ಷಗಳಿಗಷ್ಟೇ ಸೀಮಿತವಾಗಿ ನಡೆದ ಚುನಾವಣೆಯಲ್ಲ. ಸ್ವತಃ ಕಾಂಗ್ರೆಸ್ ಪಕ್ಷ ಕೂಡ ಆರಂಭದಿಂದಲೂ ಹೇಳಿಕೊಂಡು ಬಂದಂತೆ, ಪ್ರಜಾಪ್ರಭುತ್ವದ ಅನುಯಾಯಿಗಳು ಮತ್ತು ಸಂವಿಧಾನ-ವಿರೋಧಿಗಳ ನಡುವಿನ ಹೋರಾಟವಾಗಿತ್ತು. ಯಾಕೆಂದರೆ ಈ ಚುನಾವಣೆಯು, ಸಂವಿಧಾನದ ಆಶಯಗಳಿಗೆ ಕುತ್ತು ತರಬಲ್ಲಂತಹ ಫ್ಯಾಸಿಸ್ಟ್ ಸರ್ವಾಧಿಕಾರದ ಆಳ್ವಿಕೆಯಿಂದ ಭಾರತವನ್ನು ಬಚಾವು ಮಾಡಲು, ಜಾತ್ಯತೀತ ಮನಸುಗಳಿಗೆ ಬೇಕಿದ್ದ ಭರವಸೆ, ವಿಶ್ವಾಸ ಮತ್ತು ಆತ್ಮಸ್ಥೈರ್ಯವನ್ನು ತುಂಬಬಲ್ಲ ಒಂದು ಅವಕಾಶವೂ (ಮುಂದಿನ ವರ್ಷ ಲೋಕಸಭಾ ಚುನಾವಣೆ ಇರುವುದನ್ನು ಗಮನದಲ್ಲಿಟ್ಟುಕೊಂಡಾಗ) ಆಗಿತ್ತು.

ಆ ಕಾರಣದಿಂದಾಗಿಯೇ, ಕಾಂಗ್ರೆಸ್ ಪಕ್ಷದ ಬಗ್ಗೆ ಹಲವು ಅಪಸ್ವರಗಳಿದ್ದಾಗ್ಯೂ, ನೂರಾರು ಪ್ರಗತಿಪರ ಸಂಘಟನೆಗಳು, ಶೋಷಿತ ಸಮುದಾಯದ ಒಕ್ಕೂಟಗಳು, ಸಾಮಾಜಿಕ ಕಾರ್ಯಕರ್ತರು ತಮ್ಮೆಲ್ಲಾ ಗೊಂದಲಗಳನ್ನು ಪರಿಹರಿಸಿಕೊಂಡು, ಬಿಜೆಪಿಯನ್ನು ಸೋಲಿಸುವ ಏಕೈಕ ಅಜೆಂಡಾದಿಂದ ಕಾಂಗ್ರೆಸ್‌ನ ಜೊತೆಗೆ ನಿಂತರು. ಈ ಎಲ್ಲಾ ಒಗ್ಗೂಡುವಿಕೆಯ ಫಲವೇ ಇವತ್ತು ನಮಗೆ ದಕ್ಕಿರುವ ಚುನಾವಣಾ ಫಲಿತಾಂಶ.

ಸಿದ್ದರಾಮಯ್ಯನವರ ಜನಪ್ರಿಯತೆಗೆ ಸಾಕ್ಷಿಯಾದ ಸಿದ್ದರಾಮೋತ್ಸವದ ಒಂದು ಫೋಟೊ

ಈ ಹಿನ್ನೆಲೆಯಿಂದ ನೋಡಿದಾಗ, ಈ ಫಲಿತಾಂಶವು ಸಿಎಂ ಯಾರಾಗಬೇಕು? ಎಂಬ ರಾಜಕೀಯ ಪ್ರಶ್ನೆಯ ಜೊತೆಗೆ, ಸಿಎಂ ಆದವರು ಹೇಗೆ ಆಡಳಿತ ನಡೆಸಬೇಕಿದೆ? ಎಂಬ ಹೊಣೆಗಾರಿಕೆಯ ಪ್ರಶ್ನೆಯನ್ನೂ ಮುಂದಿಡುತ್ತದೆ. ಈ ಎರಡನೆಯ ಪ್ರಶ್ನೆಯನ್ನು ಆಧಾರವಾಗಿಸಿಕೊಂಡೇ ನಾವು ಮೊದಲನೇ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕಿದೆ. ಯಾಕೆಂದರೆ, ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದಷ್ಟೇ ಕಾಂಗ್ರೆಸ್ ಪಕ್ಷದ ಉದ್ದೇಶವಾಗಿತ್ತು. ಅದೊಂದು ಅಧಿಕಾರ ಕೇಂದ್ರಿತ ಉದ್ದೇಶ. ಆದರೆ ಕಾಂಗ್ರೆಸ್‌ಗೆ ಜೊತೆಗೂಡಿದ ಸಾಮಾಜಿಕ ಸಂಘಟನೆ ಮತ್ತು ಕಾರ್ಯಕರ್ತರ ಉದ್ದೇಶವು ಕೇವಲ ಅದಷ್ಟು ಮಾತ್ರವಲ್ಲದೇ, ಬಿಜೆಪಿಯ ತಳಪಾಯವಾದ ಕೋಮುವಾದಿ ರಾಜಕಾರಣವನ್ನೂ ಸಂಪೂರ್ಣವಾಗಿ ನಿವಾರಿಸುವ ಆಶಯ ಹೊಂದಿತ್ತು. ಈಗ ರಚನೆಯಾಗುವ ಸರ್ಕಾರದ ಆಡಳಿತದ ಮೇಲೆ ಇದು ಅವಲಂಭಿಸಿದೆ. ಯಾಕೆಂದರೆ ಈಗಿನ ಚುನಾವಣಾ ಫಲಿತಾಂಶದಿಂದ ಬಿಜೆಪಿ ಸ್ಥಾನ ಗಳಿಕೆಯಲ್ಲಿ ಕುಸಿದಿರುವುದು ನಿಜವಾದರೂ, ಶೇಕಡಾವಾರು ಮತಗಳಿಕೆ ಪ್ರಮಾಣದಲ್ಲಿ ಅದರ ಸಾಮರ್ಥ್ಯ ಗಣನೀಯವಾಗಿ ಕುಸಿದಿಲ್ಲ (ಬಿಜೆಪಿ ಕಳೆದುಕೊಂಡಿರುವುದು ಕೇವಲ ಶೇ.0.6 ಮತಗಳನ್ನು ಮಾತ್ರ) ಎಂಬುದನ್ನು ಸಾಬೀತು ಮಾಡುತ್ತದೆ.

ಜನರು ನೀಡಿರುವ ಈ ತೀರ್ಪಿನಲ್ಲಿ, ಕೋಮುವಾದಿ ದ್ವೇಷ ರಾಜಕಾರಣ ವಿರುದ್ಧದ ಆಕ್ರೋಶಕ್ಕಿಂತ, ಜಾತಿವಾದದ ಲೆಕ್ಕಾಚಾರ ಮತ್ತು ದುರಾಡಳಿತದ ವಿರುದ್ಧದ ತಾತ್ಕಾಲಿಕ ಸಿಟ್ಟುಗಳಿವೆಯಷ್ಟೆ. ಸಂಪೂರ್ಣ ಮಾಧ್ಯಮ ವ್ಯವಸ್ಥೆಯನ್ನೇ ತನ್ನ ಕೈಗೊಂಬೆಯಾಗಿಸಿಕೊಂಡಿರುವ ಕೋಮುವಾದಿ ರಾಜಕಾರಣಕ್ಕೆ, ಜನರ ಈ ಆಕ್ರೋಶವನ್ನು ಗೊಂದಲಗೊಳಿಸಿ ಕಾಂಗ್ರೆಸ್ ವಿರುದ್ಧವೇ ತಿರುಗುವಂತೆ ಮಾಡುವುದು ದೊಡ್ಡ ಸಂಗತಿಯೇನಲ್ಲ. 2013ರಲ್ಲಿ ಇದೇ ರೀತಿ ಪ್ರಚಂಡ ವಿಜಯ ಸಾಧಿಸಿ, ಜನಪರ ಆಡಳಿತ ನೀಡಿದಾಗಿಯೂ, 2014ರ ಹೊತ್ತಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸೀಟು ಗಳಿಕೆಯಲ್ಲಿ ಕುಸಿಯುವಂತೆ ಮಾಡುವಲ್ಲಿ ಈ ಕೋಮುವಾದಿ ಒಕ್ಕೂಟ ಯಶಸ್ವಿಯಾಗಿತ್ತು ಎಂಬುದನ್ನು ಮರೆಯಲಾದೀತೆ? ಆ ಸಾಮರ್ಥ್ಯ ನಿಜಕ್ಕೂ ಕೋಮುವಾದಿ ಒಕ್ಕೂಟಕ್ಕಿದೆ.

ಪರಿಸ್ಥಿತಿ ಹೀಗಿರುವಾಗ, ಕೋಮುವಾದಿ ರಾಜಕಾರಣವನ್ನು ಹಿಮ್ಮೆಟ್ಟಿಸಬೇಕು ಎಂಬ ಉದ್ದೇಶಕ್ಕಾಗಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿದ ಸಾಮಾಜಿಕ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರಿಗೂ ಸಹಾ ಸಿಎಂ ಯಾರಾಗಬೇಕು? ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಅರ್ಥಾತ್, ಇದು ಕೇವಲ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ವಿಚಾರ ಮಾತ್ರವಲ್ಲ, ಇದು ರಾಜಕೀಯ ಪ್ರಜ್ಞೆಯುಳ್ಳ ಸಾಮಾಜಿಕ ವಿಚಾರವೂ ಹೌದು. ಸಿಎಂ ಆಯ್ಕೆ ಕಾಂಗ್ರೆಸ್‌ನೊಳಗಿನ ವಿಚಾರ ಎಂಬ ಮುಜುಗರವನ್ನು ತೊರೆದು ಪ್ರತಿಕ್ರಿಯಿಸಲು ನಮಗಿರುವ ಬಹುಮುಖ್ಯ ಕಾರಣ ಮತ್ತು ಸಮರ್ಥನೆ ಇದು.

ಕೋಮುವಾದಿ ರಾಜಕಾರಣವನ್ನು ಶಾಶ್ವತವಾಗಿ ಮಟ್ಟಹಾಕಬೇಕೆಂದರೆ, ಸರ್ಕಾರದ ಚುಕ್ಕಾಣಿ ಹಿಡಿಯುವ ನಾಯಕನ ಆಯ್ಕೆಯಲ್ಲಿ ಒಂದು ರಾಜಕೀಯ ಪಕ್ಷ ಇಷ್ಟು ದಿನ ಅನುಸರಿಸಿಕೊಂಡು ಬಂದ ಜಾತಿಬೆಂಬಲ, ಪಕ್ಷ ನಿಷ್ಠೆ, ಜನಬೆಂಬಲ, ಸಮರ್ಥತೆಯಂತಹ ಅರ್ಹತೆಗಳ ಜೊತೆಗೆ ಜಾತ್ಯತೀತ ಸೈದ್ಧಾಂತಿಕ ಸ್ಪಷ್ಟತೆಯೂ ಈ ಸಲ ಬಹುಮುಖ್ಯವಾಗಬೇಕಿದೆ. ಕಾಂಗ್ರೆಸ್ ಮೇಲೆ ಇಂಥಾ ಒತ್ತಡ ತರುವ ಅರ್ಹತೆಯನ್ನು ಈ ಫಲಿತಾಂಶವು ಸಾಮಾಜಿಕ ಸಂಘಟನೆಗಳು, ಕಾರ್ಯಕರ್ತರಿಗೆ ನೀಡಿದೆ. ಚುನಾವಣೆಗು ಮುನ್ನ ನಾವು ಹೇಗೆ, ನಮ್ಮ ಎಲ್ಲಾ ಗೊಂದಲಗಳನ್ನು ನಿವಾರಿಸಿಕೊಂಡು, ಬಿಜೆಪಿಯನ್ನು ಸೋಲಿಸಬೇಕೆಂದರೆ ಕಾಂಗ್ರೆಸ್ ಪರವಾಗಿ ನಿಲ್ಲಬೇಕು ಎಂಬ ನಿಷ್ಠುರ ನಿರ್ಧಾರವನ್ನು ತೆಗೆದುಕೊಂಡೆವೋ, ಹಾಗೆಯೇ ಸಿಎಂ ಆಯ್ಕೆಯಲ್ಲೂ ನಾವು ಮುಜುಗರವನ್ನು ಮೀರಿ ನಿಂತು, ಕಾಂಗ್ರೆಸ್‌ಗೆ ಕಿವಿಮಾತು ಹೇಳುವ ಅಗತ್ಯವಿದೆ ಮತ್ತು ಆ ಅರ್ಹತೆಯೂ ನಮಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವೆ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಅವರ ಪರವಾಗಿ ಈಗಾಗಲೇ ಒಕ್ಕಲಿಗ ಮಠಾಧೀಶರಿಂದ ಜಾತಿ ರಾಜಕಾರಣ ಶುರುವಾಗಿದೆ. ’ಪ್ರಜಾಪ್ರಭುತ್ವವನ್ನು ಉಳಿಸೋಣ’ ಎಂಬ ಯಾವ ಸಂಕಲ್ಪದಿಂದ ನಾವೆಲ್ಲ ಒಗ್ಗೂಡಿ ಬಿಜೆಪಿಯನ್ನು ಮಣಿಸಿ, ಕಾಂಗ್ರೆಸ್ ಗೆಲ್ಲುವಂತೆ ಮಾಡಿದ್ದೇವೆಯೋ, ಆ ಪ್ರಜಾಪ್ರಭುತ್ವದ ಮಾನದಂಡದಲ್ಲಿ ಕೋಮುವಾದದಷ್ಟೇ, ಜಾತಿವಾದವೂ ಅಪಥ್ಯವಾದುದು. ಆ ಜಾತಿವಾದದ ಲಾಭ ಪಡೆದು ಸಿಎಂ ಕುರ್ಚಿಗೇರುವ ಡಿ.ಕೆ.ಶಿವಕುಮಾರ್ ಅವರಿಂದ ನಮ್ಮ ಆಶಯ ಈಡೇರಬಲ್ಲದೇ? ಈಡೇರದೇ ಹೋದಲ್ಲಿ, ನಮ್ಮ ಈ ಶ್ರಮಕ್ಕೆ ಸಿಕ್ಕ ಪ್ರತಿಫಲವಾದರೂ ಏನು? ನಾವೀಗ ನಿಷ್ಠುರವಾಗದೇ ಹೋದಲ್ಲಿ, ಶೇಕಡಾವಾರು ಮತಗಳಿಕೆಯಲ್ಲಿ ದುರ್ಬಲಗೊಳ್ಳದ ಕೋಮುವಾದಿಗಳ ಮರುಪ್ರವೇಶವನ್ನು ನಮ್ಮಿಂದ ತಡೆಯಲಾದೀತೆ? 2013ರಲ್ಲಿ, ಕಾಂಗ್ರೆಸ್ ಸರ್ಕಾರ ರಚನೆಯಾದಾಗ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಎಚ್.ಎಸ್. ದೊರೆಸ್ವಾಮಿಯವರ ನೇತೃತ್ವದ ನಾಗರಿಕ ಸಂಘಟನೆಯು, ಹಲವಾರು ಅಪಸ್ವರಕ್ಕೆ ತುತ್ತಾಗಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟದಿಂದ ಹೊರಗಿಡುವಂತೆ ಪತ್ರ ಬರೆದಿದ್ದ ದಿಟ್ಟತೆಯಿಂದ ನಾವು ಈಗಲೂ ನಿಷ್ಠುರತೆಯ ಪಾಠ ಕಲಿಯುವುದು ಬೇಡವೇ? (ಆರಂಭದ ಕೆಲ ದಿನಗಳು ಅವರು ಸಂಪುಟದಿಂದ ಹೊರಗುಳಿದಿದ್ದರು).

ಆಡಳಿತ ಪಾರದರ್ಶಕತೆ, ಆರ್ಥಿಕ ಸಮರ್ಥತೆಯನ್ನು ಪಕ್ಕಕ್ಕಿಟ್ಟು ನೋಡಿದರೂ, ಸಿದ್ದರಾಮಯ್ಯನವರಲ್ಲಿರುವ ಸೈದ್ಧಾಂತಿಕ ಸ್ಪಷ್ಟತೆ ಇವತ್ತಿನ ರಾಜಕಾರಣಕ್ಕೆ ತೀರಾ ಅಗತ್ಯವೆನಿಸದೆ ಇರಲಾರದು. ರಾಜಕೀಯ ನಿರ್ಧಾರದಲ್ಲಿ ನಾವು ಮಧ್ಯಪ್ರವೇಶಿಸುವುದು ಹೇಗೆ ಎಂಬ ಮುಜುಗರದಿಂದ ನಾವೇನಾದರು ಈಗ ಸಿಎಂ ಉಮೇದುವಾರಿಕೆಗೆ ಸಿದ್ದರಾಮಯ್ಯನವರ ಬೆನ್ನಿಗೆ ನಿಲ್ಲದೇ ಹೋದರೆ, ಸದ್ಯೋಭವಿಷ್ಯದಲ್ಲಿ ನಮ್ಮ ಪ್ರಗತಿಪರ ಮತ್ತು ಜಾತ್ಯಿತೀತ ಆಶಯಗಳಿಗೆ ಪೂರಕವಾದ ರಾಜಕೀಯ ದನಿಯೊಂದು ಮರಳಿ ನಮಗೆ ದಕ್ಕುವ ಅವಕಾಶವನ್ನು ಕಳೆದುಕೊಂಡಂತಾಗುತ್ತದೆ. ಇಷ್ಟು ಮಾತ್ರ ನಿಷ್ಠುರತೆಯನ್ನು ನಾವೀಗ ತೋರಲೇಬೇಕಿದೆ.

ಕೆಲವೊಮ್ಮೆ, ಒಂದು ನಿರ್ಧಾರ ಬಹಳ ಕಷ್ಟದ್ದೆನಿಸಬಹುದು, ಆದರೆ ಆ ನಿರ್ಧಾರ ಬಹಳಷ್ಟು ವ್ಯತ್ಯಾಸಗಳಿಗೂ ಕಾರಣವಾಗುತ್ತದೆ ಅನ್ನೋದನ್ನು ನಾವು ಮರೆಯಬಾರದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!