Friday, September 20, 2024

ಪ್ರಾಯೋಗಿಕ ಆವೃತ್ತಿ

ಸಂವಿಧಾನ ಓದಿ ಆರ್ಥೈಸಿಕೊಳ್ಳಿ, ನೂತನ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಸಲಹೆ

ಸಂಸದೀಯ ಪ್ರಜಾಪ್ರಭುತ್ವದ ದೇಗುಲ ವಿಧಾನಸಭೆ. ಇಲ್ಲಿ ಜನರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರಸ್ತಾಪಿಸಿ ಪರಿಹಾರ ಪಡೆದುಕೊಳ್ಳುವ ಮನಸ್ಥಿತಿಯನ್ನು ಪ್ರತಿಯೊಬ್ಬ ಶಾಸಕ ಬೆಳೆಸಿಕೊಳ್ಳಬೇಕು. ಯಾರು ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳುವುದಿಲ್ಲವೋ ಅವರು ಉತ್ತಮ ಶಾಸಕರಾಗಲು, ಸಂಸದರಾಗಲು ಸಾಧ್ಯವಿಲ್ಲ. ಆದ್ದರಿಂದ ಮೊದಲು ಸಂವಿಧಾನವನ್ನು ಓದಿ ಅದರ ಮೂಲಭೂತ ತತ್ವ ಮತ್ತು ಉದ್ದೇಶಗಳನ್ನು ಅರಿತುಕೊಳ್ಳಬೇಕೆಂದು ಸಿಎಂ ಸಿದ್ದರಾಮಯ್ಯ ಹೇಳಿದರು.

16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಶಾಸಕರುಗಳ ತರಬೇತಿ ಶಿಬಿರವನ್ನು ಮುಖ್ಯಮಂತ್ರಿ ಅವರು ಉದ್ಘಾಟಿಸಿ ಅವರು ಮಾತನಾಡಿದರು.

ಸದನದ ನಿಯಮಾವಳಿಗಳನ್ನು ನಾವೇ ಮಾಡಿದ್ದೇವೆ. ಅದನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡರೆ ಜನರ ಸಮಸ್ಯೆಗಳನ್ನು ನಿಯಮಬದ್ಧವಾಗಿ ಸದನದ ಮುಂದೆ ಮಂಡಿಸಬಹುದು. ಸಂವಿಧಾನಕ್ಕೆ ವಿರುದ್ಧವಾದ ಕಾನೂನು-ಕಾಯ್ದೆಗಳನ್ನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸಂವಿಧಾನದ ಓದು ಅತ್ಯಗತ್ಯ ಎಂದರು.

nudikarnataka.com

ಶಾಸಕರು, ಸಂಸದರು ಬಜೆಟ್ ಅಂದರೆ ಏನೆಂದು ಅರ್ಥ ಮಾಡಿಕೊಳ್ಳಬೇಕು. 12ನೇ ಶತಮಾನದಲ್ಲಿ ಕಾಯಕಯೋಗಿ ಬಸವಣ್ಣನವರು ಬಜೆಟ್ ಬಗ್ಗೆ ಹೇಳಿದ್ದಾರೆ. ಕಾಯಕ ಮತ್ತು ದಾಸೋಹ ಬಜೆಟ್ ನ ಪ್ರಮುಖ ಸಂಗತಿಗಳು. ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ಹಂಚಿಕೆ. ಬಜೆಟ್ ಅಂದರೆ ಇಷ್ಟೆ, ಎಲ್ಲಿಂದ ಉತ್ಪಾದನೆ ಬರುತ್ತದೆ ಅದನ್ನು ಸಮಾಜದ ಯಾರಿಗೆ ಹಂಚುತ್ತೇವೆ ಎನ್ನುವುದೇ ಬಜೆಟ್ ನ ಮೌಲ್ಯ ಎಂದು ವಿವರಿಸಿದರು.

ನಾನು ಮೊದಲ ಬಾರಿ ಹಣಕಾಸು ಸಚಿವನಾದಾಗ “ನೂರು ಕುರಿ ಎಣಿಸಲು ಬಾರದವನು ಬಜೆಟ್ ಹೇಗೆ ಮಾಡ್ತಾನೆ?” ಎಂದು ಪತ್ರಿಕೆಯೊಂದು ಟೀಕಿಸಿತ್ತು. ಟೀಕೆಯನ್ನು ನಾನು ಸವಾಲಾಗಿ ಸ್ವೀಕರಿಸಿ ನಿರಂತರ ವಿಷಯ ತಜ್ಞರ ಜತೆ ಚರ್ಚಿಸಿ ಬಜೆಟ್ ಮಂಡಿಸಿದೆ. ಮರುದಿನ  “THE HINDU” ಪತ್ರಿಕೆ ನನ್ನ ಬಜೆಟ್ ಅನ್ನು ಅತ್ಯುತ್ತಮ ಎಂದು ಶ್ಲಾಘಿಸಿ ಸಂಪಾದಕೀಯ ಬರೆಯಿತು. ಹೀಗಾಗಿ ಜ್ಞಾನ ದಾಹ ಮತ್ತು ಅಧ್ಯಯನಶೀಲತೆಯನ್ನು ಬೆಳೆಸಿಕೊಂಡರೆ ಸವಾಲನ್ನು ಗೆದ್ದು ಏನನ್ನಾದರೂ ಸಾಧಿಸಬಹುದು ಎಂದರು.

ನಾನು, ನನ್ನಂಥವರು ಶಾಸಕರಾಗಲು, ಮುಖ್ಯಮಂತ್ರಿ ಆಗಲು ಡಾ.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಕಾರಣ. ಸಂವಿಧಾನ ಇಲ್ಲದಿದ್ದರೆ ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ, ನಾನು ಸಹ ಎಲ್ಲೋ ಕುರಿ, ಹಸು ಕಾಯುತ್ತಾ ಇರಬೇಕಾಗಿತ್ತು. ಆದ್ದರಿಂದ ದೇಶದ ಪ್ರತಿಯೊಬ್ಬರು ಸಂವಿಧಾನದ ಮೌಲ್ಯ ಅರಿತುಕೊಳ್ಳಬೇಕು ಎಂದು ನುಡಿದರು.

ಶಾಂತವೇರಿ ಗೋಪಾಲಗೌಡರನ್ನು ಇವತ್ತಿಗೂ ಇಡೀ ನಾಡು ಯಾಕೆ ಸ್ಮರಿಸುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ. ವಾಟಾಳ್ ನಾಗರಾಜ್ ಅವರು ಒಬ್ಬ ಮಾದರಿ ಶಾಸಕರಾಗಿದ್ದರು. ಅಧಿವೇಶನದ ಬೆಲ್ ಆಗುತ್ತಿದ್ದಂತೆ ಸದನದ ಒಳಗೆ ಬಂದು ಕೂರುತ್ತಿದ್ದರು. ಅಧಿವೇಶನ ಮುಗಿಯುವವರೆಗೂ ಅಲುಗಾಡದೆ ಕೂರುತ್ತಿದ್ದರು. ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು ಶಾಸಕರಿಗೆ ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಹೆಚ್.ಕೆ.ಪಾಟೀಲ್, ಜಮೀರ್ ಅಹಮದ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!