Saturday, May 18, 2024

ಪ್ರಾಯೋಗಿಕ ಆವೃತ್ತಿ

ನಾನೊಬ್ಬ ಬೌದ್ದ ಎಂದು ಸ್ವಾಮಿ ವಿವೇಕಾನಂದರು ಹೇಳಿಕೊಂಡಿದ್ದರು: ಪ್ರೊ.ಕೆ.ಎಸ್ ಭಗವಾನ್

ಸ್ವಾಮಿ ವಿವೇಕಾನಂದ ಅವರನ್ನು ಹಿಂದೂ ಧರ್ಮದ ಪ್ರದೀಪಕರು ಎಂದು ಕೆಲವು ಬಲಪಂಥೀಯರು ಬಿಂಬಿಸಲು ಹೊರಟಿದ್ದಾರೆ, ಆದರೆ ಅವರು ವಾಸ್ತವದಲ್ಲಿ ಮೇಲು ಕೀಳಿನಿಂದ ಕೂಡಿದ್ದ, ಅಸಮಾನತೆಯ ಹಿಂದೂ ಧರ್ಮದ ಕಟು ಟೀಕಾಕಾರರಾಗಿದ್ದರು, ಅವರು ನಾನೊಬ್ಬ ಬೌದ್ಧ ಎಂದು ಹೇಳಿಕೊಂಡಿದ್ದರು, ನನ್ನದು ಸಂಕುಚಿತ ಹಿಂದೂ ಧರ್ಮವಲ್ಲ, ಬದಲಾಗಿ ಮಾನವ ಧರ್ಮ ಎಂದು ಸಾರಿದ್ದರು ಎಂದು ಸಾಹಿತಿ ಪ್ರೊ ಕೆ.ಎಸ್ ಭಗವಾನ್ ಹೇಳಿದರು.

ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಡಾ.ಬಿ.ಆರ್ ಅಂಬೇಡ್ಕರ್ ರವರ 67ನೇ ಮಹಾ ಪರಿನಿಬ್ಬಾಣ ದಿನದ ಅಂಗವಾಗಿ  ಆಯೋಜಿಸಿದ್ದ ದಲಿತ, ಶೋಷಿತ ಸಮುದಾಯದ ಅಭ್ಯುದಯಕ್ಕಾಗಿ ”ಸಾಮಾಜಿಕ ನ್ಯಾಯಕ್ಕಾಗಿ ಜನಾಗ್ರಹ ಸಮಾವೇಶ” ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ ಸ್ವಾಮಿ ವಿವೇಕಾನಂದ ಜಯಂತಿಯನ್ನು ಆಚರಣೆ ಮಾಡಲಾಗುತ್ತಿತ್ತು, ಆದರೆ ವಿವೇಕಾನಂದರು ಹಿಂದೂ ಧರ್ಮದ ಕಟು ಟೀಕಾಕಾರರು ಎಂಬ ವಾಸ್ತವ ವಿಚಾರ ಗೊತ್ತಾದ ಮೇಲೆ ರಾಷ್ಟ್ರೀಯ ಸ್ವಯಂಸೇವಕ ಸಂಘ ವಿವೇಕಾನಂದರ ಜಯಂತಿ ಆಚರಣೆ ಮಾಡುವುದನ್ನು ನಿಲ್ಲಿಸಿದೆ, ಇತಿಹಾಸದಲ್ಲಿ ಮರೆ ಮಾಚುವುದರಲ್ಲಿ ಆರ್ ಎಸ್ ಎಸ್ ಕುತಂತ್ರ ನಡೆಸುತ್ತದೆ, ಆರ್ ಎಸ್ ಎಸ್ ಅನ್ನು ರಾಷ್ಟ್ರೀಯ ಸುಳ್ಳುಗಾರರ ಸಂಘ ಎಂದು ಕರೆಯಬೇಕು ಎಂದು ಕಿಡಿಕಾರಿದರು.

ಇತಿಹಾಸ ಮರೆಮಾಚಲಾಗಿದೆ

ಕೇರಳ ರಾಜ್ಯದಲ್ಲಿ ದಲಿತರ ಶೋಚನೀಯ ಸ್ಥಿತಿ ಕಂಡು ಮುರುಗಿದ್ದ ಸ್ವಾಮಿ ವಿವೇಕಾನಂದರು ಇಂಡಿಯಾದಲ್ಲಿ ಕೇರಳ ಹುಚ್ಚಾಸ್ಪತ್ರೆ ಎಂದು ಕರೆದಿದ್ದರು, ಅದೇ ರೀತಿ ಬೆಳಗಾಂನಲ್ಲಿ ದಲಿತರ ಪರಿಸ್ಥಿತಿ ನೋಡಿ ಕಣ್ಣೀರು ಹಾಕಿದ್ದರು. ಭಾರತದಲ್ಲಿ ಬೌದ್ಧ ಧರ್ಮ ಪ್ರಬಲವಾಗಿತ್ತು, ಅದರ ವಿರುದ್ಧ ಧಮನಕಾರಿ ನೀತಿ ಅನುಸರಿಸಲಾಯಿತು, ಬೌದ್ಧ ಧರ್ಮ ಶಿಥಿಲಗೊಳಿಸಲು ಸಾವಿರ ವರ್ಷಗಳ ಇತಿಹಾಸವನ್ನೇ ದೇಶದಲ್ಲಿ ಮರಮಾಚಲಾಗಿದೆ, ಬುದ್ಧ ಮಣ್ಣಿನ ಮಗ, ಬೌದ್ಧ ಪರಂಪರೆ ನೆಲದ ಸಂಸ್ಕೃತಿ, ಬಾಬಾ ಸಾಹೇಬರು ಸಂಶೋಧನೆ ಮೂಲಕ ಎಲ್ಲಾ ವಿಚಾರವನ್ನು ಬಯಲುಗೊಳಿಸಿದ್ದಾರೆ, ಅಂಬೇಡ್ಕರ್ ತೋರಿಸಿರುವ ಮಾರ್ಗದಲ್ಲಿ ಭಾರತದ ಇತಿಹಾಸ ಮರು ರಚನೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಮನುಸ್ಮೃತಿ ಶೂದ್ರರನ್ನ ಗುಲಾಮ ಎಂದಿದೆ, ಶೂದ್ರ ಎಂದರೆ ಸೂಳೆಮಕ್ಕಳು ಅಂತ, ಈ ಹಿಂದೆ ಶೂದ್ರ ಮುಂಡೆವ ಎಂದು ಕರೆಯುತ್ತಿದ್ದನ್ನು ನೀವು ಕಣ್ಣಾರೆ ನೋಡಿದ್ದೀರಾ, ಶ್ರೇಣಿಕೃತ ವ್ಯವಸ್ಥೆ ರೂಪಿಸಿ ನಿರಂತರ ಶೋಷಣೆ ನಡೆಸಲಾಗಿದೆ ಎಂದು ಹೇಳಿದರು.

ಬ್ರಾಹ್ಮಣರಲ್ಲಿ ಮಹಿಳೆಯರಿಗೆ ಉಪನಯನ ಇಲ್ಲ

ರಾಷ್ಟ್ರಕವಿ ಕುವೆಂಪು ಕಾನೂನು ಹೆಗ್ಗಡತಿ ಹಾಗೂ ಮಲೆಗಳಲ್ಲಿ ಮದುಮಗಳು ಕೃತಿಯಲ್ಲಿ ಹಿಂದೂ ಧರ್ಮವನ್ನು ಸಿಗಿದು ತೋರಣ ಕಟ್ಟಿದ್ದಾರೆ, ಅದೇ ರೀತಿ ಸರ್ವಶ್ರೇಷ್ಠರು ಎಂದು ಹೇಳಿಕೊಳ್ಳುವ ಬ್ರಾಹ್ಮಣರಲ್ಲಿ ಮಹಿಳೆಯರಿಗೆ ಉಪನಯನ ಇಲ್ಲ, ಜನಿವಾರ ಧರಿಸುವಂತಿಲ್ಲ ಎಂದರು.

ಪೆರಿಯಾರ್,ನಾರಾಯಣಗುರು, ಅಂಬೇಡ್ಕರ್ ಹಿಂದೂ ಧರ್ಮದಲ್ಲಿನ ಮೌಢ್ಯ, ಅಂಧಕಾರ, ಶೋಷಣೆ ವಿರುದ್ಧ ನಿರಂತರ ಹೋರಾಟ ನಡೆಸಿದ್ದಾರೆ, ಹಾಗಾಗಿ ಬುದ್ಧ, ಅಶೋಕ, ಬಸವಣ್ಣ, ಸ್ವಾಮಿ ವಿವೇಕಾನಂದರ ಜೊತೆಗೆ ಇಂತಹ ಮಹನೀಯರ ಅಧ್ಯಯನ ಮಾಡಬೇಕು, ಅಂಬೇಡ್ಕರ್ ನಮ್ಮವರು ಎಂದರೆ ಬಲ ಬರಲ್ಲ, ಬದಲಾಗಿ ಅವರ ಬದುಕು -ಬರಹ ಮತ್ತು ವಿಚಾರದ ಪುಸ್ತಕಗಳನ್ನು ಓದಬೇಕು, ವಿಶೇಷವಾಗಿ ಜಾತಿ ವಿನಾಶ ಸಂಪುಟವನ್ನು ಓದಿ ಎಂದು ತಿಳಿಸಿದರು.

ಬುದ್ಧಿ ಶಕ್ತಿ ಜೊತೆಗೆ ಆರ್ಥಿಕವಾಗಿ ಸಬಲರಾಗಿ

ಹೊಸ ಮನಸ್ಸು ಸೃಷ್ಟಿಯಾಗಬೇಕು ಇದಕ್ಕೆ ಓದು ಅವಶ್ಯಕ, ಮನಸ್ಸು ಪರಿವರ್ತನೆಯಾದರೆ ಬದಲಾವಣೆಗೆ ಮೂಲ. ಹಾಗಾಗಿ ಮನಸ್ಸಿನ ಪರಿವರ್ತನೆಗೆ ಮುಂದಾಗಿ, ಯಾರ ಮುಂದೆಯೂ ತಲೆ ಬಾಗಿಸಬೇಡಿ, ಪ್ರೀತಿ ಗೌರವ ದಿಂದ ಕಾಣುವವರನ್ನು ನೀವು ಅದೇ ಮಾದರಿಯಲ್ಲಿ ಕಾಣಿ, ಬುದ್ಧಿ ಶಕ್ತಿ ಜೊತೆಗೆ ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.

ಅಂಬೇಡ್ಕರ್ ಕಾಲವಾದ ನಂತರ ಅಷ್ಟೇನು ಬದಲಾವಣೆ ಕಂಡಿಲ್ಲ, ಹಾಗಾಗಿ ಅವರು ಸಮಾಜವನ್ನು ಜಾಗೃತಿಗೊಳಿಸಿದಂತೆ ಅಧ್ಯಯನ ಶಿಬಿರಗಳು ನಡೆಯಬೇಕು. ಯುವ ಸಮೂಹವನ್ನು ಜಾಗೃತಗೊಳಿಸಬೇಕು, ಆ ನಿಟ್ಟಿನಲ್ಲಿ ಸಂಘಟನೆಗಳು ಮುಂದಾಗಬೇಕು ಎಂದು ಹೇಳಿದರು.

ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಅಧ್ಯಕ್ಷತೆ ವಹಿಸಿದ್ದರು, ರಾಜ್ಯ ಸಂಪನ್ಮೂಲ ಕೇಂದ್ರದ ಮಾಜಿ ನಿರ್ದೇಶಕ ಡಾ.ಎಸ್.ತುಕಾರಾಂ, ವಿಚಾರವಾದಿ ಮಾಯಿಗೌಡ ಸೇರಿದಂತೆ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!