Friday, September 20, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್‌ ಸಿದ್ಧಾಂತ ಒಪ್ಪಿಕೊಂಡು ಬರುವ ಎಲ್ಲರಿಗೂ ಸ್ವಾಗತ- ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ನಾಯಕರು ಮರಳಿ ಕಾಂಗ್ರೆಸ್‌ ಸೇರ್ಪಡೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, “ನಮ್ಮ ಪಕ್ಷ ಬಿಟ್ಟವರು ಮಾತ್ರವಲ್ಲ, ಕಾಂಗ್ರೆಸ್‌ ಸಿದ್ಧಾಂತ ಒಪ್ಪಿಕೊಂಡು ಬರುವ ಎಲ್ಲರಿಗೂ ನಾನು ಸ್ವಾಗತಿಸುತ್ತೇನೆ” ಎಂದು ಮುಕ್ತ ಆಹ್ವಾನ ನೀಡಿದರು.

“ರಾಜ್ಯದಲ್ಲಿ ಬಿಜೆಪಿ ಎಲ್ಲಿದೆ? ಪೂರ್ತಿ ದಿವಾಳಿಯಾಗಿದೆ. ಈವರೆಗೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿಗೆ ಸಾಧ್ಯವಾಗಿಲ್ಲ. ಹೊಸ ಸರ್ಕಾರ ರಚನೆಯಾಗಿ 100 ದಿನ ಕಳೆಯಿತು. ಆದರೂ ವಿರೋಧ ಪಕ್ಷದ ನಾಯಕ ಇಲ್ಲ ಅಂದರೆ ಯೋಚನೆ ಮಾಡಿ. ರಾಜ್ಯದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ರಾಜ್ಯದಲ್ಲಿ ಬಿಜೆಪಿ ಇನ್ನೂ ದಿವಾಳಿ ಆಗಲಿದೆ” ಎಂದು ಭವಿಷ್ಯ ನುಡಿದರು.

“ಪ್ರಧಾನಿ ನರೇಂದ್ರ ಮೋದಿ ಅವರೇ ಭೇಟಿಗೆ ಬರಬೇಡಿ ಎಂದಿದ್ದರು. ಆ ಪ್ರಕಾರ ನಾವು ನಡೆದುಕೊಂಡಿದ್ದೇವೆ. ಬಿಜೆಪಿಯವರಿಗೆ ಕೆಲಸವಿಲ್ಲ, ಸುಕಾಸುಮ್ಮನೇ ಆರೋಪಗಳನ್ನು ಮಾಡುತ್ತಾರೆ” ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

“ಮೂರು ದಿನ ಮೈಸೂರು ಪ್ರವಾಸ ಕೈಕೊಂಡಿರುವೆ. ಕೆಡಿಪಿ ಸಭೆ ಇದೆ. ನಾಳೆ ಸುತ್ತೂರಿನಲ್ಲಿ ಒಂದು ಕಾರ್ಯಕ್ರಮವಿದೆ. ಹಾಗೆಯೇ ನಾಲ್ಕನೇ ಗ್ಯಾರಂಟಿ ‘ಗೃಹಲಕ್ಷ್ಮಿ’ ಅನುಷ್ಠಾನ ಕಾರ್ಯಕ್ರಮ ಮೈಸೂರಿನಲ್ಲಿದೆ. ನಮ್ಮ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಾನು ಅಧ್ಯಕ್ಷತೆ ವಹಿಸಿಕೊಳ್ಳುವೆ. ರಾಹುಲ್‌ ಗಾಂಧಿ ಉಪಸ್ಥಿತಿ ಇರಲಿದ್ದಾರೆ” ಎಂದು ತಿಳಿಸಿದರು.

“ದೇಶದಲ್ಲೇ ದೊಡ್ಡ ಕಾರ್ಯಕ್ರಮ ಗೃಹಲಕ್ಷ್ಮಿ. ಸುಮಾರು 32 ಸಾವಿರ ಕೋಟಿ ರೂ. ಒಂದು ವರ್ಷಕ್ಕೆ ಖರ್ಚು ಆಗಲಿದೆ. ಈ ವರ್ಷ 18 ಸಾವಿರ ಕೋಟಿ ರೂ. ಖರ್ಚು ಆಗುತ್ತಿದೆ. 1.33 ಕೋಟಿ ಕುಟುಂಬದ ಯಜಮಾನಿಗೆ 2000 ರೂ. ಕೊಡುತ್ತಿದ್ದೇವೆ. ಐದು ಕಾರ್ಯಕ್ರಮ ಜಾರಿಯಾದ ಮೇಲೆ 4-5 ಸಾವಿರ ರೂ. ಒಂದು ಕುಟುಂಬಕ್ಕೆ ಲಾಭವಾಗಲಿದೆ. ಅವರ ಕೈಯಲ್ಲಿ ದುಡ್ಡು ಆಡುವುದರಿಂದ ಆರ್ಥಿಕ ಚಟುವಟಿಕೆ ಜಾಸ್ತಿ ಆಗಲಿದೆ. ಜೊತೆಗೆ ಉದ್ಯೋಗ ಸೃಷ್ಟಿಯಾಗಲಿದೆ” ಎಂದರು.

ರಾಜ್ಯ ಸರ್ಕಾರದ ಕಾರ್ಯಕ್ರಮವಾಗಿ ಗೃಹಲಕ್ಷ್ಮಿ ಜಾರಿ ಅನುಷ್ಠಾನ ಮೈಸೂರಿನಲ್ಲಿ ನಡೆಯುತ್ತಿದೆ. ನಂತರ ಎಲ್ಲ ಜಿಲ್ಲೆಗಳಲ್ಲೂ ಕಾರ್ಯಕ್ರಮ ನಡೆಯಲಿದೆ. ಬರ ವಿಚಾರವಾಗಿ ಕ್ಯಾಬಿನೆಟ್‌ ಸಬ್‌ ಕಮಿಟಿ ಇದೆ. ಅದರ ವರದಿ ನಂತರ ಬರಗಾಲ ಎಂದು ಘೋಷಿಸುತ್ತೇವೆ. ನಂತರ ಕೇಂದ್ರ ಸರ್ಕಾರದ ಅಧಿಕಾರಿಗಳು ಬಂದು ವೀಕ್ಷಣೆ ಮಾಡುತ್ತಾರೆ. ಬರಗಾಲ ಘೋಷಣೆಯಾದ ಮೇಲೆ ಜನರಿಗೆ ಕೆಲಸ ಕೊಡಲು ಆರಂಭಿಸುತ್ತೇವೆ” ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!