Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ಕಣಿವೆ ರೈತರ ಹಿತ ಕಾಪಾಡಲು ಸರ್ಕಾರ ಬದ್ಧ- ಸಿಎಂ ಸಿದ್ದರಾಮಯ್ಯ

ಕಾವೇರಿ ವಿಚಾರದಲ್ಲಿ ರಾಜ್ಯದ ರೈತರ ಹಿತ ಕಾಪಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ, ಸಂಕಷ್ಟ ಕಾಲದಲ್ಲಿ ಸರ್ಕಾರ ಏನೇನು ಮಾಡಲು ಸಾಧ್ಯವಿದೆ ಅದನ್ನೆಲ್ಲ ಮಾಡುತ್ತಿದೆ, ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕದ ಹಿತ ಕಾಪಾಡುವ ಯೋಗ್ಯ ತೀರ್ಮಾನ ಮಾಡಲಿದ್ದೇವೆ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಮಂಡ್ಯನಗರಕ್ಕೆ ಭೇಟಿ ನೀಡಿದ್ದ ಅವರು ನಗರದ ಸರ್ ಎಂ ವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಿರಂತರ ಧರಣಿ ಸ್ಥಳಕ್ಕೆ ಭೇಟಿಯಾಗಿ ಕಾವೇರಿ ಹೋರಾಟಗಾರರ ಅಹವಾಲು ಸ್ವೀಕರಿಸಿ ಮಾತನಾಡಿದರು.

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಅಧಿಕಾರದ ಆಸೆಗಾಗಿ ರೈತರ ಹಿತ ಬಲಿಕೊಡುವುದಿಲ್ಲ, ನಿಮ್ಮೆಲ್ಲರ ಹಿತ ಕಾಪಾಡಲು ಬದ್ಧನಾಗಿದ್ದೇನೆ. ಕನ್ನಡ ನಾಡಿನ ಹಿತ ಕಾಯಲು ಸರ್ಕಾರ ಹಿಂದೆ ಬೀಳೊಲ್ಲ, ಅಧಿಕಾರಕ್ಕೆ ಅಂಟಿಕೊಳ್ಳುವುದಿಲ್ಲ, ರೈತರು ಬೆಳೆದಿರುವ ಬೆಳೆಗಳನ್ನು ಉಳಿಸಿಕೊಳ್ಳಬೇಕಾಗಿದೆ, ಅದೇ ರೀತಿ ಕುಡಿಯುವ ನೀರಿಗೆ ಪ್ರಮುಖ ಆದ್ಯತೆ ನೀಡಬೇಕಾಗಿದೆ, ಇವೆರಡಕ್ಕೂ ಆದ ನಂತರ ಉಳಿದ ನೀರನ್ನು ತಮಿಳುನಾಡಿಗೆ ಹರಿಸುವ ಕೆಲಸ ಮಾಡಬೇಕಾಗಿದೆ ಇದೆಲ್ಲರ ನಿರ್ವಹಣೆಯನ್ನು ಸರ್ಕಾರ ಮಾಡಲಿದೆ ಎಂದರು.

ಕುಡಿಯುವ ನೀರಿಗೆ ಆದ್ಯತೆ

ನಾನು ಕೂಡ ರೈತನ ಮಗ, ನಮಗೂ ರೈತರ ಕಷ್ಟದ ಅರಿವು ಇದೆ, ರೈತರ ಜಮೀನಿನಲ್ಲಿ ಬೆಳೆದಿರುವ ಬೆಳೆಯನ್ನ ರಕ್ಷಿಸಲು ಮುಂದಾಗ ಬೇಕಾಗಿದೆ, ಮಳೆ ಕೊರತೆ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮತ್ತೊಂದು ಬೆಳೆಯನ್ನು ಬೆಳೆಯಲು ಕಷ್ಟದ ಕೆಲಸ, ಮಳೆ ಬರಲಿ ಎಂದು ಪ್ರಾರ್ಥಿಸೋಣ, ಜಮೀನಿನಲ್ಲಿರುವ ಬೆಳೆ ರಕ್ಷಣೆ, ಕುಡಿಯುವ ನೀರಿಗೆ ಆದ್ಯತೆ ನೀಡುವ ಕೆಲಸ ಆಗಬೇಕಾಗಿದೆ ಎಂದರು.

ಕಾವೇರಿ ಕಣಿವೆ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಿಡಲಿಲ್ಲ, ಮುಂಗಾರು ಆರಂಭದ ಜೂನ್ ನಲ್ಲಿ ಮಳೆ ಇಲ್ಲ, ಜುಲೈನಲ್ಲಿ ವಾಡಿಕೆ ಮಳೆ ಬಿತ್ತು, ಆಗಸ್ಟ್ ನಲ್ಲಿ ಮಳೆಯ ಸುಳಿವು ಇಲ್ಲ, ಸೆಪ್ಟಂಬರ್ ನಲ್ಲಿ ಸ್ವಲ್ಪ ಮಳೆ, ಅಕ್ಟೋಬರ್ ನಲ್ಲಿ ಏನು ಇಲ್ಲ, ಇದರಿಂದ ಕಾವೇರಿ ಕೊಳ್ಳದ ಜಲಾಶಯಗಳು ಭರ್ತಿಯಾಗಲಿಲ್ಲ ಹಾಗಾಗಿ ಸಂಕಷ್ಟ ವರ್ಷ ಎದುರಾಗಿದೆ, ಸಂಕಷ್ಟಕಾಲದಲ್ಲಿ ಸರ್ಕಾರ ಏನು ಮಾಡಲು ಸಾಧ್ಯ ಎಂಬುದರ ಬಗ್ಗೆ ಚರ್ಚೆ ನಡೆಸಬೇಕು, ಕಾವೇರಿ ವಿಚಾರ ರೈತರ ಸಮಸ್ಯೆ ಮಾತ್ರವಲ್ಲದೆ ನಾಡಿನ ಸಮಸ್ಯೆ ಯಾಗಿದೆ, ಆ ಹಿನ್ನೆಲೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆಸುವುದಾಗಿ ಹೇಳಿದರು.

ಕಾವೇರಿ ನದಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯ ಸರ್ಕಾರ ಸಮರ್ಥವಾದ ಮಂಡಿಸಿ ಕಾವೇರಿ ಕೊಳ್ಳದ ಜಲಾಶಯದಲ್ಲಿ ನೀರು ಇಲ್ಲದಿರುವುದರಿಂದ ತಮಿಳುನಾಡಿಗೆ ನೀರು ಕೊಡಲು ಆಗಲ್ಲ ಎಂದು ಸಮರ್ಥ ವಾದ ಮಂಡಿಸಿದ್ದೇವೆ ಆದರೂ ಸಹ ನೀರು ಬಿಡಲು ಆದೇಶ ಬಂದಿವೆ.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ, ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ, ಗಣಿಗ ರವಿಕುಮಾರ್, ರಮೇಶ್ ಬಾಬು ಬಂಡಿಸಿದ್ದೇಗೌಡ, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಾಜಿ ಸಚಿವ ಎಂ ಎಸ್ ಆತ್ಮಾನಂದ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಮತ್ತಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!