Tuesday, May 14, 2024

ಪ್ರಾಯೋಗಿಕ ಆವೃತ್ತಿ

ದೆಹಲಿ ಸಿಎಂ ಕೇಜ್ರಿವಾಲ್ ಬಂಧನ| ದೇಶವ್ಯಾಪಿ ಬಿಜೆಪಿ ಕಚೇರಿಗಳ ಮುಂದೆ ಪ್ರತಿಭಟನೆಗೆ ಆಪ್ ಕರೆ

ಆಪಾದಿತ ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವುದನ್ನು ಖಂಡಿಸಿ ಆಮ್ ಆದ್ಮಿ ಪಕ್ಷ (ಎಎಪಿ) ಇಂದು (ಮಾ.22) ರಾಷ್ಟ್ರವ್ಯಾಪಿ ಬಿಜೆಪಿ ಕಚೇರಿಗಳ ಬಳಿ ಪ್ರತಿಭಟನೆಗೆ ಕರೆ ನೀಡಿದೆ.

ಕೇಜ್ರಿವಾಲ್ ಅವರ ಬಂಧನದ ವಿರುದ್ಧದ ಎಎಪಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.

ಕೇಜ್ರಿವಾಲ್ ಅವರ ಮನೆಗೆ ನಿನ್ನೆ (ಮಾ.21) ಸಂಜೆ ಇಡಿ ಅಧಿಕಾರಿಗಳು ಆಗಮಿಸಿದಾಗಲೇ ಅವರನ್ನು ಬಂಧಿಸಲಿದ್ದಾರೆ ಎಂಬುವುದು ಎಎಪಿ ನಾಯಕರಿಗೆ ಖಚಿತವಾಗಿತ್ತು. ಹಾಗಾಗಿ, ರಾತ್ರಿಯೇ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ತುರ್ತು ಅರ್ಜಿ ವಿಚಾರಣೆಗೆ ಮನವಿ ಮಾಡಿದ್ದರು. ಆದರೆ, ಸುಪ್ರೀಂ ಕೋರ್ಟ್‌ ತುರ್ತು ವಿಚಾರಣೆಗೆ ನಿರಾಕರಿಸಿದೆ.

ಪ್ರಸ್ತುತ ಬಂಧನದಲ್ಲಿರುವ ಕೇಜ್ರಿವಾಲ್ ಅವರನ್ನು ಇಂದು ಇಡಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ.

ಲೋಕಸಭೆ ಚುನಾವಣೆಗೆ ಕೆಲವೇ ದಿನಗಳಿರುವಾಗ ಕೇಜ್ರಿವಾಲ್ ಅವರನ್ನು ಬಂಧಿಸಿರುವುದು ಎಎಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ವಿವಿಧ ಪಕ್ಷಗಳ ನಾಯಕರು ಕೇಜ್ರಿವಾಲ್ ಬಂಧನ ಕೇಂದ್ರದ ಬಿಜೆಪಿ ಸರ್ಕಾರ ಪಿತೂರಿಯ ಭಾಗ ಎಂದಿದ್ದಾರೆ.

ಎಎಪಿ ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷವಾಗಿರುವ ಹಿನ್ನೆಲೆ, ಕಾಂಗ್ರೆಸ್ ಸಂಪೂರ್ಣವಾಗಿ ಕೇಜ್ರಿವಾಲ್ ಬೆಂಬಲಕ್ಕೆ ನಿಂತಿದೆ. ಇಂದು ರಾಹುಲ್ ಗಾಂಧಿಯವರು ಕೇಜ್ರಿವಾಲ್ ಕುಟುಂಬಸ್ಥರನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಕೇಜ್ರಿವಾಲ್ ಜೈಲಿನಿಂದಲೇ ಮುಖ್ಯಮಂತ್ರಿ ಹುದ್ದೆಯನ್ನು ನಿರ್ವಹಿಸಲಿದ್ದಾರೆ ಎಂದು ಎಎಪಿ ಹೇಳಿದೆ. ಆದರೆ, ಇದು ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ.

ಆಪಾದಿತ ದೆಹಲಿ ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರ ಬಂಧನವಾಗಿದೆ. ಈ ಪ್ರಕರಣ ಸಂಬಂಧ ಇಡಿ ಕೇಜ್ರಿವಾಲ್ ಅವರಿಗೆ ಈ ಹಿಂದೆ 8-9 ಸಮನ್ಸ್‌ಗಳನ್ನು ನೀಡಿತ್ತು. ಆದರೆ, ಅವುಗಳನ್ನು ತಿರಸ್ಕರಿಸಿದ್ದ ಕೇಜ್ರಿವಾಲ್ ವಿಚಾರಣೆಗೆ ಗೈರಾಗಿದ್ದರು.

ಹೈಕೋರ್ಟ್‌ ಇಡಿಯ ಬಲವಂತದ ಕ್ರಮದಿಂದ ಕೇಜ್ರಿವಾಲ್‌ಗೆ ರಕ್ಷಣೆ ಒದಗಿಸಲು ನಿನ್ನೆ (ಮಾ.21) ನಿರಾಕರಿಸಿತ್ತು. ಈ ಬೆನ್ನಲ್ಲೇ ಕೇಜ್ರಿವಾಲ್ ನಿವಾಸಕ್ಕೆ ಆಗಮಿಸಿದ ಇಡಿ ತಂಡ ಅವರನ್ನು ಬಂಧಿಸಿದೆ.

ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ತೆಲಂಗಾಣದ ಮಾಜಿ ಸಿಎಂ ಕೆಸಿಆರ್ ಅವರ ಪುತ್ರಿ ಕವಿತಾ ಕಲ್ವಕುಂಟ್ಲ ಅವರನ್ನು ಇಡಿ ಬಂಧಿಸಿದೆ. ಇದೇ ಪ್ರಕರಣದಲ್ಲಿ ಮೂವರು ಎಎಪಿ ನಾಯಕರಾದ ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಈಗಾಗಲೇ ಜೈಲಿನಲ್ಲಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!