Thursday, September 19, 2024

ಪ್ರಾಯೋಗಿಕ ಆವೃತ್ತಿ

ಉಡುಪು- ಊಟ ಅವರವರ ಇಷ್ಟ; ಹಿಜಾಬ್ ನಿಷೇಧ ವಾಪಸ್: ಸಿಎಂ ಸಿದ್ದರಾಮಯ್ಯ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿನ ಹಿಜಾಬ್ ನಿಷೇಧ ಆದೇಶವನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದಲ್ಲಿ ನಿನ್ನೆ (ಡಿ.22) ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರ ಸ್ಪಷ್ಟಪಡಿಸಿದ್ದಾರೆ. “ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದು ತಿಳಿಸಿದ್ದಾರೆ.

ಹಿಜಾಬ್ ನಿಷೇಧ ಈಗ ಇಲ್ಲ, ಅದನ್ನು ವಾಪಸ್ ಪಡೆಯಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಉಡುಪು ಧರಿಸುವುದು, ಊಟ ಮಾಡುವುದು ಜನರ ವೈಯುಕ್ತಿಕ ವಿಚಾರ. ನಾನು ಧೋತಿ, ಶರ್ಟ್ ಧರಿಸುತ್ತೇನೆ. ನೀನು ನಿನಗಿಷ್ಟ ಬಂದ ಡ್ರೆಸ್ ಹಾಕು. ಪ್ಯಾಂಟ್ ಶರ್ಟ್‌ ಏನು ಬೇಕಾದರೂ ಹಾಕು. ಉಡುಪು, ಊಟ ಅವರವರ ಇಚ್ಛೆಗೆ ಸೇರಿದ್ದು. ಅದಕ್ಕೆ ನಾನೇಕೆ ಅಡ್ಡಿ ಪಡಿಸಬೇಕು? ಎಂದು ಸಿಎಂ ಪ್ರಶ್ನಿಸಿದ್ದಾರೆ.

ಮತಕ್ಕಾಗಿ ರಾಜಕಾರಣ ಮಾಡಬಾರದು. ನಾವು ಯಾವುದೇ ಜಾತಿ, ಧರ್ಮ ತಾರತಮ್ಯ ಮಾಡುವುದಿಲ್ಲ. ನಮ್ಮ ಸರ್ಕಾರ ಸಮಾಜದಲ್ಲಿನ ಬಡವರು, ದಲಿತರು, ಹಿಂದುಳಿದವರಿಗೆ ನ್ಯಾಯ ಕೊಡುವ ಕೆಲಸ ಮಾಡಲಿದೆ. ಈ ವಿಚಾರದಲ್ಲಿ ವಿಚಲಿತರಾಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

“>

ಬಿಜೆಪಿಯವರು ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್ ಎಂದು ಹೇಳ್ತಾರೆ. ಆದ್ರೆ ಗಡ್ಡದವರು, ಟೋಪಿ, ಬುರ್ಕಾ ಧರಿಸಿರುವವರನ್ನು ಹತ್ತಿರ ಬರಬೇಡಿ ಎನ್ನುತ್ತಾರೆ. ಹೀಗಿರುವಾಗ ಎಲ್ಲಿದೆ ಸಬ್‌ ಕಾ ವಿಕಾಸ್?. ನಾವು ಹಾಗಿಲ್ಲ, ನಾವು ಎಲ್ಲಾ ಜಾತಿ, ಧರ್ಮ, ಪಕ್ಷದವರಿಗೂ ಸಹಾಯ ಮಾಡುತ್ತೇವೆ ಎಂದು ಸಿಎಂ ಹೇಳಿದ್ದಾರೆ.

ಏನಿದು ಪ್ರಕರಣ?

ಜನವರಿ 2022ರಲ್ಲಿ ಉಡುಪಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿ ಪ್ರವೇಶಿಸುವುದಕ್ಕೆ ನಿರ್ಬಂಧ ಹೇರಲಾಗಿತ್ತು. ಹಿಜಾಬ್ ಧರಿಸಿ ತರಗತಿ ಪ್ರವೇಶಕ್ಕೆ ಅನುಮತಿ ನೀಡುವಂತೆ ಐವರು ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನ ಮುಂದೆ ವಾರಗಳ ಕಾಲ ಪ್ರತಿಭಟಿಸಿದ್ದರು.

ಈ ವೇಳೆ ಹಿಂದುತ್ವ ವಿದ್ಯಾರ್ಥಿ ಸಂಘಟನೆ ಎಬಿಪಿವಿ ನೇತೃತ್ವದಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ವಿವಿಧ ಕಾಲೇಜುಗಳಲ್ಲಿ ಹಿಜಾಬ್ ವಿರುದ್ಧ ‘ಕೇಸರಿ ಶಾಲು ಅಭಿಯಾನ’ ಆರಂಭವಾಗಿತ್ತು. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ತರಗತಿ ಪ್ರವೇಶಕ್ಕೆ ಅನುಮತಿ ನೀಡಿದರೆ ನಮಗೆ ಕೇಸರಿ ಶಾಲು ಧರಿಸಲು ಅವಕಾಶ ನೀಡಬೇಕು ಎಂದು ಹಿಂದೂ ವಿದ್ಯಾರ್ಥಿಗಳು ಆಗ್ರಹಿಸಿದ್ದರು.

ಈ ನಡುವೆ ಹಿಜಾಬ್ ನಿರ್ಬಂಧ ಪ್ರಶ್ನಿಸಿ ಐವರು ಮುಸ್ಲಿಂ ವಿದ್ಯಾರ್ಥಿನಿಯರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣ ನ್ಯಾಯಾಲಯದಲ್ಲಿದ್ದಾಗಲೇ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಮಾಡಿ ಆದೇಶ ಹೊರಡಿಸಿತ್ತು.

ಬಳಿಕ ವಿದ್ಯಾರ್ಥಿನಿಯರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ರಾಜ್ಯ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು. 2022 ಮಾರ್ಚ್​ 15ರಂದು 10.30ಕ್ಕೆ ಹೈಕೋರ್ಟ್ ಪೂರ್ಣ ಪೀಠದಿಂದ ತೀರ್ಪು ಹೊರ ಬಿದ್ದಿತ್ತು. ಹೈಕೋರ್ಟ್‌ನ ಆಗಿನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರ ಪೂರ್ಣ ಪೀಠವು ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದಕ್ಕೆ ನಿರ್ಬಂಧ ವಿಧಿಸಿ ಸರ್ವಸಮ್ಮತ ತೀರ್ಪು ನೀಡಿತ್ತು.

ಹೈಕೋರ್ಟ್ ತೀರ್ಪಿನ ವಿರುದ್ಧ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸುದೀರ್ಘ ಸಮಯ ವಿದ್ಯಾರ್ಥಿನಿಯರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ, ವಿಭಜಿತ ತೀರ್ಪು ನೀಡಿತ್ತು. ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ದ್ವಿಸದಸ್ಯ ಪೀಠ ತೀರ್ಪು ಪ್ರಕಟಿಸಿತ್ತು. ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ ಅರ್ಜಿಯನ್ನು ವಜಾ ಮಾಡಿದ್ದರೆ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಕರ್ನಾಟಕ ಹೈಕೋರ್ಟ್​ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದ್ದರು. ಇದರಿಂದ ಹಿಜಾಬ್ ಪ್ರಕರಣ ವಿಸ್ಕೃತ ಪೀಠಕ್ಕೆ ವರ್ಗಾವಣೆಯಾಗಿತ್ತು.

2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಡಾ. ಎಂ.ಸಿ ಸುಧಾಕರ್ ಉನ್ನತ ಶಿಕ್ಷಣ ಸಚಿವರಾದರು. ಸಚಿವ ಸುಧಾಕರ್ ಅವರು ಹಿಜಾಬ್ ನಿಷೇಧ ಹಿಂಪಡೆಯುವ ವಿಚಾರ ಸರ್ಕಾರದ ಗಮನದಲ್ಲಿದೆ ಎಂದು 2023ರ ಅಕ್ಟೋಬರ್‌ನಲ್ಲಿ ಸುಳಿವು ನೀಡಿದ್ದರು.

ಹೈಕೋರ್ಟ್ ತೀರ್ಪಿಗೆ ತಡೆ ಇಲ್ಲದಿದ್ದ ಕಾರಣ ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕವೂ ಪರೀಕ್ಷೆಗಳ ವೇಳೆ ಹಿಜಾಬ್ ನಿಷೇಧ ಮುಂದುವರಿಸಲಾಗಿತ್ತು. ಮಾರ್ಚ್, ಏಪ್ರಿಲ್‌ನಲ್ಲಿ ನಡೆದ ಬೋರ್ಡ್‌ ಪರೀಕ್ಷೆಗಳಲ್ಲಿ ಶಾಲಾ, ಕಾಲೇಜು ಈ ನಿಯಮ ಪಾಲಿಸುವಂತೆ ಆದೇಶ ನೀಡಲಾಗಿತ್ತು. ಹಿಜಾಬ್ ಧರಿಸಿ ಬಂದವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ.

ಈ ನಡುವೆ ಸುಪ್ರೀಂ ಕೋರ್ಟ್‌ನ ವಿಸ್ಕೃತ ಪೀಠಕ್ಕೆ ವರ್ಗಾವಣೆಯಾಗಲು ಪ್ರಕರಣ ಬಾಕಿ ಇತ್ತು. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಪ್ರಕರಣದ ವಿಚಾರಣೆ 2023ರ ಮಾರ್ಚ್ 17ರಂದು ನಡೆಸುವುದಾಗಿ ಮಾರ್ಚ್ 3ರಂದು ತಿಳಿಸಿದ್ದರು. ಮಾರ್ಚ್ 9ಕ್ಕೆ ಪರೀಕ್ಷೆ ನಡೆಯಲಿದೆ ಎಂದಾಗ, ಮಾರ್ಚ್ 13ಕ್ಕೆ ನೋಡೋಣ ಎಂದಿದ್ದರು. ಅಲ್ಲದೆ, ಖಚಿತವಾಗಿ ಸಾಂವಿಧಾನಿಕ ಪೀಠ ರಚಿಸುತ್ತೇವೆ ಎಂದು ತಿಳಿಸಿದ್ದರು. ಇನ್ನೂ ಸಾಂವಿಧಾನಿಕ ಪೀಠ ರಚನೆಯಾಗಿ ಪ್ರಕರಣದ ವಿಚಾರಣೆ ಆರಂಭವಾಗಿಲ್ಲ. ಈ ನಡುವೆ ಕರ್ನಾಟಕ ರಾಜ್ಯ ಸರ್ಕಾರ ಹಿಜಾಬ್ ನಿಷೇಧ ವಾಪಸ್ ಪಡೆಯಲು ಮುಂದಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!