Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ಗ್ಯಾರಂಟಿ ಫಲಾನುಭವಿಗಳಲ್ಲಿ ಬಿಜೆಪಿಯವರೇ ಹೆಚ್ಚು: ಸಿಎಂ ಸಿದ್ದರಾಮಯ್ಯ

4 ಕೋಟಿ 30 ಲಕ್ಷ ಕನ್ನಡಿಗರಿಗೆ ಸರ್ಕಾರದ ಗ್ಯಾರಂಟಿಯ ಫಲ ಪ್ರತೀ ದಿನ-ಪ್ರತೀ ತಿಂಗಳು ತಲುಪುತ್ತಿದೆ. ಈ ಫಲಾನುಭವಿಗಳಲ್ಲಿ BJPಯವರೇ ಹೆಚ್ಚಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಕೆ.ಪಿ.ಸಿ.ಸಿ. ವತಿಯಿಂದ ಬೆಂಗಳೂರಿನ ಇಂದಿರಾಗಾಂಧಿ ಭವನದ ಭಾರತ್ ಜೋಡೋ ಸಭಾಂಗಣದಲ್ಲಿ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ₹ 59 ಸಾವಿರ ಕೋಟಿ ವಾರ್ಷಿಕ ವೆಚ್ಚ ಮಾಡಿ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಇದು ದೇಶದಲ್ಲೇ ಮೊದಲು. ಪ್ರತಿಯೊಬ್ಬ ಕಾರ್ಯಕರ್ತನೂ ಎದೆ ಎತ್ತಿ, ತಲೆ ಎತ್ತಿ ಹೇಳಿ ಎಂದು ಹುರಿದುಂಬಿಸಿದರು.

13 ಸಾವಿರ ಕೋಟಿಗೂ ಅಧಿಕ ಬಿಲ್ ಬಾಕಿ

ಪಕ್ಷದ ಕಾರ್ಯಕರ್ತರೇ ನಮ್ಮ ಬೆನ್ನೆಲುಬು. ನಿಮ್ಮ ಹೋರಾಟದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ. ವಾಮ ಮಾರ್ಗದಲ್ಲಿ ಮೂರೂವರೆ ವರ್ಷ ಅಧಿಕಾರ ನಡೆಸಿದ ಬಿಜೆಪಿ ಮಾಡಬಾರದ್ದನ್ನೆಲ್ಲಾ ಮಾಡಿ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿಟ್ಟು ಹೋಗಿತ್ತು. ನೀರಾವರಿ ಇಲಾಖೆಯೊಂದರಲ್ಲೇ 13 ಸಾವಿರ ಕೋಟಿಗೂ ಅಧಿಕ ಬಿಲ್ ಬಾಕಿ ಉಳಿಸಿದ್ದಾರೆ ಎಂದು ಕುಟುಕಿದರು.

ಲೋಕೋಪಯೋಗಿ ಇಲಾಖೆಯಲ್ಲಿ 9,000 ಕೋಟಿ, ಸಣ್ಣನೀರಾವರಿ ಇಲಾಖೆಯಲ್ಲಿ 2,000 ಕೋಟಿ ರೂಪಾಯಿ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 6,000 ಕೋಟಿ ರೂಪಾಯಿ, ಬೆಂಗಳೂರು ನಗರ 5,000 ಕೋಟಿ ಬಿಲ್ ಬಾಕಿ ಉಳಿಸಿದ್ದಾರೆ. ಹೀಗೆ ರಾಜ್ಯವನ್ನು ಹಾಳುಮಾಡಿ, ರಾಜ್ಯದ ಆರ್ಥಿಕತೆಯನ್ನು ಹಾಳುಗೆಡವಿ ಹೋಗಿದ್ದಾರೆ. ಇಷ್ಟಾದರೂ ನಾವು 59 ಸಾವಿರ ಕೋಟಿ ವಾರ್ಷಿಕ ವೆಚ್ಚ ಮಾಡಿ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಬಿಜೆಪಿಯವರು ಚೆನ್ನಾಗಿ ತಿಂದು, ಸಾವಿರಾರು ಕೋಟಿ ಕೆಲಸ ಶುರು ಮಾಡಿಸಿ ಸುಮಾರು 40 ಸಾವಿರ ಕೋಟಿಗೂ ಹೆಚ್ಚು ಬಿಲ್ ಕೊಡದೆ, ಬಿಲ್ ಬಾಕಿ ಉಳಿಸಿ ಮನೆಗೆ ಹೋಗಿದ್ದಾರೆ. ದುರಾಡಳಿತ ನಡೆಸಿ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಗ್ಯಾರಂಟಿ ಕಾಫಿ

ನಮ್ಮ ಗ್ಯಾರಂಟಿಗಳನ್ನು ಅಣಕಿಸಿ ಈಗ ನಮ್ಮ ಗ್ಯಾರಂಟಿಗಳನ್ನೇ ಕಾಪಿ ಮಾಡಿ ಅದಕ್ಕೆ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಬಿಜೆಪಿಯವರು ಅಷ್ಟು ನಿರ್ಲಜ್ಜರಾಗಿದ್ದಾರೆ. ಸರ್ಕಾರದ ಕೆಲಸಗಳನ್ನು ಪ್ರತಿ ಮನೆಗೆ ತಲುಪಿಸಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರ ಸುಳ್ಳನ್ನು ಸೋಲಿಸಿ ನಮ್ಮ ಸಾಧನೆಗಳನ್ನು ಎತ್ತಿ ಹಿಡಿಯುವ ಮೂಲಕ 28 ಲೋಕಸಭಾ ಸ್ಥಾನಗಳಲ್ಲಿ ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಕಾಂಗ್ರೆಸ್ ನಾಯಕ ಚಂದ್ರಪ್ಪ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!