Thursday, September 19, 2024

ಪ್ರಾಯೋಗಿಕ ಆವೃತ್ತಿ

ತೈಲ ಬೆಲೆ ಗುಜರಾತ್, ಮಧ್ಯಪ್ರದೇಶಗಿಂತ ಕಡಿಮೆ ಇದೆ : ಸಿಎಂ ಸಿದ್ದರಾಮಯ್ಯ

ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು 29.84% ಗೆ ಹಾಗೂ ಡೀಸೆಲ್‌ ಮೇಲಿನ ತೆರಿಗೆಯನ್ನು 18.44% ಗೆ ಹೆಚ್ಚಳ ಮಾಡಿದೆ. ಈ ಏರಿಕೆಯ ನಂತರವೂ ಕರ್ನಾಟಕವು ತೈಲೋತ್ಪಾನ್ನಗಳ ಮೇಲೆ ವಿಧಿಸುತ್ತಿರುವ ತೆರಿಗೆಯು ದಕ್ಷಿಣ ಭಾರತದ ರಾಜ್ಯಗಳಿಗಿಂತ ಹಾಗೂ ನಮ್ಮ ರಾಜ್ಯದ ಆರ್ಥಿಕತೆಯ ಗಾತ್ರಕ್ಕೆ ಹೋಲುವ ಮಹಾರಾಷ್ಟ್ರ ರಾಜ್ಯಕ್ಕಿಂತಲೂ ಕಡಿಮೆಯಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಮೇಲೆ ಮೌಲ್ಯವರ್ಧಿತ ತೆರಿಗೆ ( ವ್ಯಾಟ್ ) 25% ಜೊತೆಗೆ ಹೆಚ್ಚುವರಿ ತೆರಿಗೆ ರೂ. 5.12 ಇದೆ. ಹಾಗೂ ಡೀಸೆಲ್‌ ಮೇಲೆ 21% ಇದೆ. ಇದಕ್ಕೆ ಹೋಲಿಸಿದರೆ ರಾಜ್ಯದ ಪರಿಷ್ಕೃತ ದರ ಕೂಡ ಜನರಿಗೆ ಹೊರೆಯಾಗದಂತಿದೆ. ಮೌಲ್ಯವರ್ಧಿತ ತೆರಿಗೆ ಹೆಚ್ಚಳದ ಹೊರತಾಗಿಯೂ, ರಾಜ್ಯದಲ್ಲಿ ಡೀಸೆಲ್‌ ಬೆಲೆ ಗುಜರಾತ್ ಹಾಗೂ ಮಧ್ಯಪ್ರದೇಶಗಳಿಗಿಂತ ಕಡಿಮೆಯಿದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿಯ ಡಬ್ಬಲ್ ಇಂಜಿನ್ ಸರ್ಕಾರದ ಅವಧಿಯಲ್ಲಿ ರಾಜ್ಯದ ಸಂಪನ್ಮೂಲಗಳನ್ನು ಇತರೆ ರಾಜ್ಯಗಳಿಗೆ ಹಂಚಿಕೆ ಮಾಡುವ ದುರುದ್ದೇಶದಿಂದ ಕೇಂದ್ರ ಸರ್ಕಾರ ರಾಜ್ಯದ ಬಿಜೆಪಿ ಸರ್ಕಾರವನ್ನು ಬಳಸಿಕೊಂಡು ಕರ್ನಾಟಕದಲ್ಲಿ ಮೌಲ್ಯವರ್ಧಿತ ತೆರಿಗೆ ದರವನ್ನು ಕಡಿತಗೊಳಿಸುವಂತೆ ಮಾಡಿ, ತನ್ನ ಪಾಲಿನ ತೆರಿಗೆ ಹೆಚ್ಚಳ ಮಾಡುವ ಮೂಲಕ ಲಕ್ಷಾಂತರ ಕೋಟಿ ಸಂಗ್ರಹಿಸಿತ್ತು. ಈ ಅನರ್ಥ ನೀತಿಯಿಂದಾಗಿ ರಾಜ್ಯದ ರಾಜಸ್ವ ಸಂಗ್ರಹಕ್ಕೆ ದೊಡ್ಡ ಹೊಡೆತ ಬಿದ್ದರೆ, ಇದೇ ವೇಳೆ ಕೇಂದ್ರವು ಕನ್ನಡಿಗರಿಗೆ ದ್ರೋಹ ಬಗೆದು ಭರಪೂರ ತೆರಿಗೆ ಸಂಗ್ರಹಿಸಿತ್ತು ಎಂದು ಅವರು ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿದ್ದಾರೆ.

ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ರೂ. 9.21 ರಿಂದ ರೂ. 32.98 ಗೆ ಹಾಗೂ ಡೀಸೆಲ್‌ ಮೇಲೆ ರೂ. 3.45 ರಿಂದ ರೂ. 31.84 ಕ್ಕೆ ಹೆಚ್ಚಳ ಮಾಡಿತ್ತು. ಇದು ನಿಜವಾಗಿಯೂ ಜನರ ಮೇಲಿನ ಹೊರೆ. ಆಗಾಗ್ಗೆ ಕೇಂದ್ರ ಸರ್ಕಾರವು ತೆರಿಗೆ ಕಡಿತಗೊಳಿಸಿದ ಹೊರತಾಗಿಯೂ ಈಗಿನ ಅಬಕಾರಿ ಸುಂಕವು ಪೆಟ್ರೋಲ್ ಮೇಲೆ ರೂ. 19.9 ಹಾಗೂ ಡೀಸೆಲ್‌ ಮೇಲೆ ರೂ. 15.8 ಇದೆ. ನರೇಂದ್ರ ಮೋದಿ ಅವರ ಸರ್ಕಾರ ಜನಹಿತದ ದೃಷ್ಟಿಯಿಂದ ಈ ತೆರಿಗೆಯನ್ನು ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರದ ಮೌಲ್ಯವರ್ಧಿತ ತೆರಿಗೆಯಲ್ಲಾದ ಬದಲಾವಣೆಯಿಂದ ಸಂಗ್ರಹವಾಗುವ ಹಣವು ನಾಡಿನ ಜನರ ಮೂಲಭೂತ ಸೇವೆಗಳು ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಬಳಸಲ್ಪಡುತ್ತದೆ ಎಂಬ ಗ್ಯಾರಂಟಿಯನ್ನು ನಾನು ನೀಡುತ್ತೇನೆ. ನಾವು ಸರ್ವರ ಹಿತಕಾಯಲು ಮತ್ತು ಜವಾಬ್ದಾರಿಯುತ ಸರ್ಕಾರವಾಗಿ ಮುನ್ನಡೆಯಲು ಬದ್ಧರಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!