Sunday, May 19, 2024

ಪ್ರಾಯೋಗಿಕ ಆವೃತ್ತಿ

ಉತ್ತಮ ಕಾರ್ಯಗಳೇ ಹೆಚ್.ಕೆ. ರಾಮು ಅವರಿಗೆ ಶ್ರೀರಕ್ಷೆ

ಮಂಡ್ಯ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹೆಚ್.ಕೆ.ರಾಮು ಅವರು, ಕಳೆದ ಮೂರು ದಶಕಗಳ ಅವಧಿಯಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಅವರ ಶ್ರೇಯೋಭಿವೃದ್ಧಿಗೆ ಹಾಗೂ ವೇತನ ಪರಿಷ್ಕರಣೆಗೆ ದುಡಿದಿರುವ ಉತ್ತಮ ಕಾರ್ಯಗಳೇ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್.ಕೆ.ರಾಮು ಅವರ ಜನ್ಮ ಭೂಮಿ ಮಂಡ್ಯ ಜಿಲ್ಲೆಯಾದರೆ, ಕರ್ಮಭೂಮಿ ಮೈಸೂರು ಜಿಲ್ಲೆಯಾಗಿದೆ. ಕ್ಷೇತ್ರದ ಇತರೆ ಜಿಲ್ಲೆಗಳಲ್ಲಿ ಜೆಡಿಎಸ್ ಪ್ರಾಬಲ್ಯವಿದ್ದು, ರಾಮು ಅವರ ಸ್ನೇಹಪರ ಕೆಲಸಗಳೇ ಅವರ ಗೆಲುವಿಗೆ ಮುನ್ನುಡಿಯಾಗಲಿದೆ ಎಂದರು.

ಸರ್ಕಾರಿ ನೌಕರರ ಶ್ರೇಯೋಭಿವೃದ್ಧಿಗೆ ಹಾಗೂ ವೇತನ ಪರಿಷ್ಕರಣೆಗೆ ದುಡಿದಿರುವ ರಾಮು ಅವರ ಸೇವೆಯನ್ನು ಪರಿಗಣಿಸಿ, ಜನವಿರೋಧಿ ಆಡಳಿತ ಹಾಗೂ ಹಗರಣಗಳ ಪಾರುಪತ್ಯೆ ವಹಿಸಿರುವ ಬಿಜೆಪಿ ಅಭ್ಯರ್ಥಿ ವಿರುದ್ಧ ಜೆಡಿಎಸ್ ಜಯಗಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೋಲಿಸಿದರೆ ದಕ್ಷಿಣ ಪದವೀಧರ ಕ್ಷೇತ್ರದ ಸೂಕ್ತ ಅಭ್ಯರ್ಥಿ ಹೆಚ್.ಕೆ. ರಾಮು. ಹಾಗಾಗಿ ಪದವೀಧರರು ಮೊದಲ ಪ್ರಾಶಸ್ತ್ಯದ ಮತ ನೀಡುವ ಮೂಲಕ ಅವರನ್ನು ಜಯಶೀಲರನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.

ನೀತಿ ಸಂಹಿತೆ ಉಲ್ಲಂಘನೆ:
ಆಡಳಿತ ರೂಢ ಬಿಜೆಪಿ ಸರ್ಕಾರದ ಜನಪ್ರತಿನಿಧಿಗಳು ಕಾಲೇಜುಗಳಲ್ಲಿ ಸಭೆ ಮಾಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು, ಅಧಿಕಾರಿಗಳು ಹಾಗೂ ಪದವೀಧರ ಮತದಾರರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಆಳುವ ಸರ್ಕಾರ ಮುಂದಾಗಿದ್ದು, ಚುನಾವಣಾ ಆಯೋಗ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಉತ್ತಮ ಬೆಂಬಲ
ಹೆಚ್‌ಕೆ.ರಾಮು ಮಾತನಾಡಿ, ದಕ್ಷಿಣ ಪದವೀಧರ ಕ್ಷೇತ್ರದ ನಾಲ್ಕು ಜಿಲ್ಲೆಗಳಲ್ಲಿ ಜೆಡಿಎಸ್ ಪಕ್ಷ ಪ್ರಾಬಲ್ಯವಿದೆ. ಕ್ಷೇತ್ರ ವ್ಯಾಪ್ತಿಯ ಪ್ರಜ್ಞಾವಂತ ಮತದಾರರು ನನ್ನ ಗೆಲುವಿಗೆ ಮುನ್ನುಡಿ ಬರೆಯಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷಾತೀತವಾಗಿ ಮತದಾರರನ್ನು ಭೇಟಿ ಮಾಡಲಿದ್ದೇನೆ. ಹೆಚ್ಚು ಮತದಾರರ ನೋಂದಣಿಗೂ ಮುಂದಾಗಿದ್ದೇವೆ. ಸರ್ಕಾರ ನೌಕರರ 5ಮತ್ತು 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಶ್ರಮಿಸಿದ್ದೇನೆ. ನಿವೃತ್ತ ನೌಕರರಿಗೆ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ಹೋರಾಟ ಮಾಡಲಾಗುತ್ತಿದೆ. ಪದವೀಧರ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡುವ ಉದ್ದೇಶ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿದೆ. ನೆರೆ ಹಾವಳಿಗೆ ನಲುಗಿದ್ದ ಮಡಿಕೇರಿ ಸಂತ್ರಸ್ಥರ ನೆರವಿಗೆ ನೂರು ಕೋಟಿ ರೂ. ವಂತಿಗೆ ಸಂಗ್ರಹಿಸಿ ನೆರವಾಗಿದ್ದೇನೆ. ಈ ಜನಪರ ಕಾರ್ಯಗಳೇ ನನಗೆ ಶ್ರೀರಕ್ಷೆಯಾಗಲಿದೆ ಎಂದರು.

26 ರಂದು ನಾಮಪತ್ರ ಜೂನ್ 13 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿರುವ ಹೆಚ್.ಕೆ.ರಾಮು ಮೇ 26 ರಂದು ಬೆಳಗ್ಗೆ 11 ಗಂಟೆಗೆ ಮೈಸೂರಿನ ಆಯಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ತಿಳಿಸಿದರು.

ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಸಂಸದೀಯ ಮಂಡಳಿ ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು ಹಾಗೂ ಡಿ.ಸಿ.ತಮ್ಮಣ್ಣ ಸೇರಿದಂತೆ ನಾಲ್ಕು ಜಿಲ್ಲೆಗಳ ವ್ಯಾಪ್ತಿಯ ಪಕ್ಷದ ಶಾಸಕರು ಹಾಗೂ ಮುಖಂಡರು ಭಾಗವಹಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರ ಮತದಾರರು ಭಾಗವಹಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷರಾದ ತಿಮ್ಮೇಗೌಡ, ಪೈಲ್ವಾನ್ ಮುಕುಂದ, ಡಿ.ಟಿ.ಶ್ರೀನಿವಾಸ್, ಯೋಗೇಶ್, ಜಾನಕೀರಾಂ, ಚಿಕ್ಕತಿಮ್ಮೇಗೌಡ ಹಾಗೂ ಮಲ್ಲೇಗೌಡ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!