Friday, November 20, 2026

ಪ್ರಾಯೋಗಿಕ ಆವೃತ್ತಿ

ಮನುಷ್ಯ ವಿರೋಧಿ ಕೃತ್ಯ ಮಾಡಿ ದೇವರನ್ನು ಅರಸಿದರೆ ಪ್ರಯೋಜನವಿಲ್ಲ: ಸಿಎಂ ಸಿದ್ದರಾಮಯ್ಯ

ದೇವರನ್ನು ಪೂಜಿಸುವವರಿಗೆ ಆಷಾಡಭೂತಿತನ ಇರಬಾರದು. ಮಾಡಬಾರದ್ದನ್ನೆಲ್ಲಾ ಮಾಡಿ ದೇವರ ಪೂಜೆ ಮಾಡಿದ ತಕ್ಷಣ ಪಾಪಕಾರ್ಯ ಹೋಗಲ್ಲ. ಮನುಷ್ಯ ಪ್ರೀತಿ ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ದೊಡ್ಡಬಾಲ ಗ್ರಾಮದಲ್ಲಿ 39 ವರ್ಷಗಳ ಬಳಿಕ ನಡೆಯುತ್ತಿರುವ ಹುಚ್ಚಪ್ಪಸ್ವಾಮಿಯ ಹಾಗೂ ಹದಿನಾಲ್ಕು ಕೂಟದ ದೇವರುಗಳ ಜಾತ್ರಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಮಾಡಬಾರದ ಪಾಪಗಳನ್ನು, ಮನುಷ್ಯ ವಿರೋಧಿ ಕೃತ್ಯಗಳನ್ನು ಮಾಡಿ ದೇವರನ್ನು ಅರಸಿ ಹೋಗುವುದರಿಂದ ಪ್ರಯೋಜನ ಇಲ್ಲ. ಮನುಷ್ಯ ಮನುಷ್ಯ ಪ್ರೀತಿಸಬೇಕು. ಸಹಿಷ್ಣತೆ ಇರಬೇಕು ಎಂದರು.

ಸಮಾಜದಲ್ಲಿ ಎಲ್ಲಾ ಜಾತಿ, ಎಲ್ಲಾ ಧರ್ಮದವರಿಗೂ ಬೇರೆ ಬೇರೆ ನಂಬಿಕೆಗಳಿರುತ್ತವೆ. ಒಬ್ಬರ ನಂಬಿಕೆ ಬಗ್ಗೆ ಉಳಿದವರೆಲ್ಲರಿಗೂ ಗೌರವ ಇರಬೇಕು. ಪರಸ್ಪರ ಗೌರವಗಳಿಂದ ಎಲ್ಲರ ನಂಬಿಕೆಗಳನ್ನು ಕಾಣಬೇಕು ಎಂದು‌ ಕರೆ ನೀಡಿದರು.

ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನ ಎಲ್ಲರ ನಂಬಿಕೆಗಳ ಆಚರಣೆಗೆ ಅವಕಾಶ ಇದೆ. ಸಂವಿಧಾನ ಕೊಟ್ಟ ಅವಕಾಶದಿಂದ ನಾನು ಶಿಕ್ಷಣ ಪಡೆದು ಮುಖ್ಯಮಂತ್ರಿಯಾದೆ. ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಪ್ರಥಮ ಆಧ್ಯತೆ ನೀಡಿದ್ದಾರೆ. ಅದ್ದರಿಂದ ಪ್ರತಿಯೊಬ್ಬರೂ ಇದನ್ನು ಪಾಲಿಸಬೇಕು ಎಂದರು.

ಜಾತಿ ವ್ಯವಸ್ಥೆಗೆ ಚಾಲನೆ ಇಲ್ಲ. ಆರ್ಥಿಕ ಶಕ್ತಿ ಬಂದಾಗ, ಸಾಮಾಜಿಕ ಶಕ್ತಿ ಬಂದಾಗ ಚಲನೆ ಸಿಗುತ್ತದೆ ಎಂದರು.

ಸಂಸ್ಕೃತ ಕಲಿಯುವ ಶೂದ್ರರ ಕಿವಿಗೆ ಕಾದ ಸೀಸವನ್ನು ಸುರಿಯುತ್ತಿದ್ದರು. ಸಂವಿಧಾನದ ಕಾರಣದಿಂದ ಇಂಥಾ ಸ್ಥಿತಿ ಹೋಗಿ ನಮಗೆಲ್ಲಾ ಶಿಕ್ಷಣ ಸಿಕ್ಕಿದೆ ಎಂದರು.

ವೇದಿಕೆಯಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಶಾಸಕ ಕೆ.ಎಂ.ಉದಯ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಉಪಾಧ್ಯಕ್ಷ ಸ್ಟಾರ್ ಚಂದ್ರು, ಮಾಜಿ ಶಾಸಕರಾದ ಎಲ್.ಆರ್.ಶಿವರಾಮೇಗೌಡ, ಎನ್.ಅಪ್ಪಾಜಿಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ, ಜಿಲ್ಲಾ ಕುರುಬರ ಸಂಘ ಅಧ್ಯಕ್ಷ ಸುರೇಶ್, ಮುಖಂಡರಾದ ಎಲ್.ಎಸ್.ಚೇತನ್ ಗೌಡ, ಹುಚ್ಚೇಗೌಡ, ಮಂಜೇಗೌಡ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ