ನಾನು ದೆಹಲಿಗೆ ತೆರಳಿದ್ದು, ಖಾಸಗಿ ಕೆಲಸಕ್ಕಷ್ಟೇ. ನಮ್ಮ ಪಕ್ಷದ ನಾಯಕರನ್ನು ಭೇಟಿ ಮಾಡಿ ಮಂಡ್ಯ ಜಿಲ್ಲೆಗೆ ಹೆಚ್ಚುವರಿ ಸಚಿವ ಸ್ಥಾನವನ್ನು ಕೇಳಿದ್ದೇವೆ ಹೊರತು, ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿ ಎಂಬ ಬೇಡಿಕೆ ಇಟ್ಟಿಲ್ಲ ಎಂದು ಶಾಸಕ ರವಿಕುಮಾರ್ ಗಣಿಗ ಸ್ಪಷ್ಟಪಡಿಸಿದರು.
ಶನಿವಾರ ಮಂಡ್ಯ ನಗರದ ಬಂದೀಗೌಡ ಬಡಾವಣೆಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ನಲ್ಲಿ ನನ್ನ ವೈಯಕ್ತಿಕ ಪ್ರಕರಣಕ್ಕೆ ಸಂಬಂಧಿಸಿದದಂತೆ ನಾನು ದೆಹಲಿಗೆ ತೆರಳಬೇಕಿತ್ತು. ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಕೇಂದ್ರ ಕೃಷಿ ಸಚಿವರು ಹಾಗೂ ಇನ್ನಿತರೆ ಅಧಿಕಾರಿಗಳನ್ನ ಭೇಟಿ ಮಾಡಬೇಕಿತ್ತು. ಹಾಗಾಗಿ ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಸಭೆ ಮುಗಿಸಿ ಇಬ್ಬರು ಜೊತೆಯಲ್ಲೇ ದೆಹಲಿಗೆ ಹೋದೆವು. ಆದರೆ ಅಕ್ಕಪಕ್ಕ ಜಿಲ್ಲೆಯ ಕೆಲ ಶಾಸಕರು ಸಹ ನಮ್ಮೊಂದಿಗೆ ದೆಹಲಿಗೆ ಬಂದಿದ್ದಾರೆಂಬುದು ಕೇವಲ ಊಹಾಪೋಹ. ಒಂದು ವೇಳೆ ಅವರು ದೆಹಲಿಗೆ ಬಂದಿದ್ದರೆ ನಮ್ಮ ಸಂಪರ್ಕದಲ್ಲಿರಲಿಲ್ಲ ಎಂದು ತಿಳಿಸಿದರು.
ನಾಳೆ ಕೆರಗೋಡಿನಲ್ಲಿ ಗಣೇಶಮೂರ್ತಿ ವಿಸರ್ಜನೆ
ಕೆರಗೋಡಿನ ಪಡುವಲಬಾಗಿಲು ಆಂಜನೇಯ ದೇಗುಲದ ಬಳಿ ಪ್ರತಿಷ್ಟಾಪಿಸಿರುವ ಗಣೇಶಮೂರ್ತಿ ವಿಸರ್ಜನೆಯನ್ನು ನಾಳೆ ವಿಜೃಂಭಣೆಯಿಂದ ಆಯೋಜಿಸಲಾಗಿದ್ದು, ನಾನು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭಾಗಿಯಾಗಲಿದ್ದೇವೆ ಎಂದು ಹೇಳಿದರು.
ನಾಳೆ ಸಂಜೆ ಮಂಡ್ಯ ನಗರದ ಕಾಳಿಕಾಂಭ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾನು ಮತ್ತು ಚಲುವರಾಯಸ್ವಾಮಿ ಅವರು ಬೈಕ್ ರ್ಯಾಲಿ ಮೂಲಕ ಕೆರಗೋಡು ತಲುಪಲಿದ್ದು, ಅಲ್ಲೂ ಸಹ ಕರ್ನಾಟಕದ ನಂ. 1 ಡಿಜೆ ಸೇರಿದಂತೆ ಆಂಜನೇಯ ಮೂರ್ತಿ ಮೆರವಣಿಗೆ, ಹತ್ತಾರು ಕಲಾತಂಡದೊಂದಿಗೆ ಸಂಜೆ 4 ಗಂಟೆಗೆ ಆರಂಭವಾಗಲಿರುವ ಮೆರವಣಿಗೆ ರಾತ್ರಿಯವರೆಗೂ ಕೆರಗೋಡಿನ ಪ್ರತಿ ಬೀದಿಯಲ್ಲೂ ಸಂಚರಿಸಲಿದೆ ಎಂದು ತಿಳಿಸಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೆರಗೋಡಿನಲ್ಲಿ ಸಾಮೂಹಿಕ ಗಣಪತಿ ವಿಸರ್ಜನೆಗೆ ಭಾಗಿಯಾಗಿದ್ದಕ್ಕೆ ಪ್ರತಿಯಾಗಿ ಈ ಕಾರ್ಯಕ್ರಮ ಆಯೋಜಿಸಿಲ್ಲ, ವಿಜಯಪುರದ ಯತ್ನಾಳ್ ಮಂಡ್ಯದಲ್ಲಿ ಕಾರ್ಯಕ್ರಮಕ್ಕೆ ಭಾಗಿಯಾಗುತ್ತಾರೆಂದರೆ ನಮ್ಮೂರಿನಲ್ಲಿ ನಾವು ಧಾರ್ಮಿಕ ಕಾರ್ಯಕ್ರಮ ಮಾಡಬಾರದೇ ಎಂದು ಪ್ರಶ್ನಿಸಿದ ಅವರು, ಯತ್ನಾಳ್ ಸೇರಿದಂತೆ ಬಿಜೆಪಿಯವರು ದೇವರನ್ನು ಬೀದಿಗೆ ತಂದು ರಾಜಕಾರಣ ಮಾಡುತ್ತಿದ್ದಾರೆ. ನಾವು ಸಹ ಮನೆಯಲ್ಲಿ ದೇವರನ್ನು ಆರಾಧಿಸುತ್ತಿದ್ದೆವು. ನಾವು ಹಿಂದುಗಳಾಗಿ ಬಹಿರಂಗವಾಗಿ ಧಾರ್ಮಿಕ ಕಾರ್ಯಕ್ರಮ ಮಾಡುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು.
ದೆಹಲಿಗೆ ಹೋದಂತಹ ಸಂದರ್ಭದಲ್ಲಿ ನಮ್ಮ ನಾಯಕರನ್ನು ಭೇಟಿ ಮಾಡುವುದು ನಮ್ಮ ಕರ್ತವ್ಯ. ಆ ಪ್ರಕಾರವಾಗಿ ಕೆಲ ನಾಯಕರನ್ನು ಭೇಟಿ ಮಾಡಿದ್ದು, ಮಂಡ್ಯ ಜಿಲ್ಲೆಗೆ ಈಗಾಗಲೇ ಓರ್ವರನ್ನು ಸಚಿವರನ್ನಾಗಿ ನೇಮಿಸಲಾಗಿದೆ. ಸಚಿವರಾಗಿರುವ ಎನ್.ಚಲುವರಾಯಸ್ವಾಮಿ ಅವರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಪುಟ ವಿಸ್ತರಣೆಯಾದರೆ ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ಸ್ಥಾನಬೇಕೆಂದು ಬೇಡಿಕೆ ಇಟ್ಟಿದ್ದೇವೆ. ನನಗಾಗಲಿ, ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡರಿಗಾಗಲಿ ಅಥವಾ ಮದ್ದೂರು ಶಾಸಕ ಉದಯ್ ಅವರಿಗಾಗಲಿ ಸಚಿವ ಸ್ಥಾನ ಕೊಡಿ ಎಂದು ಒತ್ತಾಯ ಮಾಡಿ ಬಂದಿದ್ದೇವೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂಬ ಬಯಸುವವರಲ್ಲಿ ನಾನು ಒಬ್ಬ. ಅವರು ಪಕ್ಷಕ್ಕಾಗಿ ದುಡಿದಿದ್ದಾರೆ. ಪಕ್ಷ ಕಟ್ಟಿದ್ದಾರೆ. ನಾನು ಸೇರಿದಂತೆ ಹಲವರು ಶಾಸಕರಾಗುವಲ್ಲಿ ಡಿಕೆಶಿ ಅವರ ಪಾತ್ರ ದೊಡ್ಡದಿದೆ. ಆದರೆ ಅವರು ಯಾವ ಸನ್ನಿವೇಶದಲ್ಲಿ ಅಥವಾ ಯಾವ ಗಳಿಗೆಯಲ್ಲಿ ಬೇಕಾದರೂ ಮುಖ್ಯಮಂತ್ರಿಯಾಗಬಹುದು. ಆ ಗಳಿಗೆ ನಿರ್ಧರಿಸುವವರು ಹೈಕಮಾಂಡ್ ಮಾತ್ರ ಎಂದು ಸ್ಪಷ್ಟಪಡಿಸಿದರು.




