ಕಾವೇರಿ ನೀರಿನ ಹಂಚಿಕೆ ವಿಷಯದಲ್ಲಿ ದೇವೇಗೌಡರು ಮಾಡಿದ ಹೋರಾಟದ ಫಲವಾಗಿ 14.75 ಟಿಎಂಸಿ ಹೆಚ್ಚವರಿ ನೀರು ರಾಜ್ಯಕ್ಕೆ ಸಿಗುವಂತಾಯಿತು ಎಂದು ಸಿ.ಎಸ್.ಪುಟ್ಟರಾಜು ತಿಳಿಸಿದರು. ಶ್ರೀರಂಗಪಟ್ಟಣ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾವೇರಿ ನೀರಿನ ವಿಚಾರದಲ್ಲಿ ದೇವೇಗೌಡರು ಮಾಡಿದ ಹೋರಾಟದ ಬಗ್ಗೆ ರಾಜ್ಯದ ಜನತೆಗೆ ಗೊತ್ತಿದೆ.ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ದೇವೇಗೌಡರಿಗೆ ಇರುವಷ್ಟು ಮಾಹಿತಿ ಅಗಾಧವಾದುದು.ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ಸಿಗಲು ದೇವೇಗೌಡರು ವಿಧಾನಸೌಧ ದಲ್ಲಿರುವ ಗಾಂಧಿ ಪ್ರತಿಮೆಯ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿದರು. ನದಿ ನೀರಿನ ವಿಚಾರದಲ್ಲಿ ಅವರ ಬದ್ಧತೆ ದೊಡ್ದದು. ನೀರಾವರಿ ವಿಚಾರದಲ್ಲಿ ಅನ್ಯಾಯವಾದರೆ ಅದರ ಪರಿಣಾಮ ನಮ್ಮ ರಾಜ್ಯದ ರೈತರ ಮೇಲಾಗುತ್ತದೆ ಎಂಬುದು ದೇವೇಗೌಡರಿಗೆ ಚೆನ್ನಾಗಿಯೇ ಅರಿವಿದ್ದರಿಂದ ರಾಜ್ಯಕ್ಕೆ ನದಿ ನೀರಿನ ವಿಚಾರದಲ್ಲಿ ಅನ್ಯಾಯವಾದಾಗಲೆಲ್ಲ ಸಂಸತ್ತಿನಲ್ಲಿ, ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದಾರೆ ಎಂದರು.
ದೇವೇಗೌಡರು ಈ ಇಳಿವಯಸ್ಸಿನಲ್ಲಿಯೂ ರೈತರ ಪರ ಸಕ್ರಿಯರಾಗಿ ಹೋರಾಟ ನಡೆಸುತ್ತಿದ್ದಾರೆ.ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅವರು ದೇಶಕ್ಕೆ,ರೈತರಿಗೆ ನೀಡಿದ ಕಾರ್ಯಕ್ರಮಗಳನ್ನು ಉತ್ತರ ಭಾರತದ ಜನರು ಈಗಲೂ ನೆನಪಿಸಿ ಕೊಳ್ಳುವುದನ್ನ ನಾನು ಸಂಸದನಾಗಿದ್ದಾಗ ಬಹಳ ಹತ್ತಿರದಿಂದ ನೋಡಿದ್ದೇನೆ. ಆ ಭಾಗದ ದೊಡ್ಡ ರಾಜಕಾರಣಿಗಳ ಮಕ್ಕಳು ಸಂಸತ್ ಸದಸ್ಯರಾಗಿ ಲೋಕಸಭೆಗೆ ಬಂದಾಗ ದೇವೇಗೌಡರು ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದನ್ನು ನಾನು ನೋಡಿದ್ದೇನೆ ಎಂದು ಬಣ್ಣಿಸಿದರು.