Thursday, July 25, 2024

ಪ್ರಾಯೋಗಿಕ ಆವೃತ್ತಿ

ಟಿ-20 ವಿಶ್ವಕಪ್| ದಕ್ಷಿಣ ಆಫ್ರಿಕಾವನ್ನು ಬಗ್ಗುಬಡಿದ ಭಾರತ ”ಚಾಂಪಿಯನ್’

ಕೊನೆಯ ಓವರ್ ನಲ್ಲಿ ಹಾರ್ದಿಕ್ ಪಾಂಡ್ಯ ಮಾಡಿದ ಮ್ಯಾಜಿಕ್ ಫಲ ನೀಡಿದ ಪರಿಣಾಮ ಭಾರತ ತಂಡ ದಕ್ಷಿಣ ಆಫ್ರಿಕಾ ವನ್ನು ಬಗ್ಗು ಬಡಿದು ಟಿ-20 ವಿಶ್ವಕಪ್ ಮುಡಿಗೇರಿಸಿಕೊಂಡಿತು.

ಬಾರ್ಬಡೋಸ್​ ನ ಕೆನಿಗ್ಸಂಟನ್ ಓವಲ್ ನಲ್ಲಿ ನಡೆದ ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್ ಗಳಿಂದ ಮಣಿಸಿ ಟಿ-20 ವಿಶ್ವಕಪ್ ಜಯಿಸಿತು.

ಕಿಂಗ್ ಕೊಹ್ಲಿಯ ಅಬ್ಬರದ ಅರ್ಧ ಶತಕ (76 ರನ್​,59 ಎಸೆತ) ರನ್ ಹಾಗೂ ಆಲ್​ರೌಂಡರ್ ಅಕ್ಷರ್ ಪಟೇಲ್​ ಅವರ ಸ್ಫೋಟಕ ಬ್ಯಾಟಿಂಗ್​ (47 ರನ್​, 31 ಎಸೆತ, 4 ಸಿಕ್ಸರ್​, 1 ಫೋರ್​) ನೆರವು ಪಡೆದ ಭಾರತ ತಂಡ ಟಿ-20 ವಿಶ್ವ ಕಪ್​ 2024ರ ಫೈನಲ್ ಪಂದ್ಯದಲ್ಲಿ 176 ರನ್​ಗಳ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಿತು.

ಟಾಸ್ ಗೆದ್ದ ಭಾರತದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಮೊದಲ ಓವರ್‌ನಲ್ಲಿ ಮೂರು ಬೌಂಡರಿ ಗಳಿಸಿದ ವಿರಾಟ್ ಕೊಹ್ಲಿ ಉತ್ತಮ ಲಯದಲ್ಲಿ ಕಂಡುಬಂದರು.

ಆದರೆ ಎರಡನೇ ಓವರ್‌ನಲ್ಲಿ ನಾಯಕ ರೋಹಿತ್ ಶರ್ಮಾ (9) ಹಾಗೂ ರಿಷಬ್ ಪಂತ್ (0) ಅವರನ್ನು ಹೊರದಬ್ಬಿದ ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ಡಬಲ್ ಆಘಾತ ನೀಡಿದರು. ಸೂರ್ಯಕುಮಾರ್ ಯಾದವ್ (3) ಸಹ ವೈಫಲ್ಯ ಅನುಭವಿಸಿದರು. ಇದರಿಂದಾಗಿ 34 ರನ್ ಗಳಿಸುವಷ್ಟರಲ್ಲಿ ಭಾರತ ಮೂರು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು.

ಈ ಹಂತದಲ್ಲಿ ಜೊತೆಗೂಡಿದ ಕೊಹ್ಲಿ ಹಾಗೂ ಅಕ್ಷರ್ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾಗುವ ಮೂಲಕ ತಂಡಕ್ಕೆ ಆಸರೆಯಾದರು. ಕೊಹ್ಲಿ-ಅಕ್ಷರ್ ಜೋಡಿ ನಾಲ್ಕನೇ ವಿಕೆಟ್‌ಗೆ 72 ರನ್‌ ಪೇರಿಸಿದರು.

ಆದರೆ 31 ಎಸೆತಗಳಲ್ಲಿ 47 ರನ್ ಗಳಿಸಿದ ಅಕ್ಷರ್ ರನೌಟ್ ಆಗುವ ಮೂಲಕ ಪೆವಿಲಿಯನ್‌ಗೆ ಮರಳಿದರು. ಅಕ್ಷರ್ ನಾಲ್ಕು ಸಿಕ್ಸರ್ ಹಾಗೂ ಒಂದು ಬೌಂಡರಿ ಗಳಿಸಿದರು.

ಮತ್ತೊಂದೆಡೆ ದಕ್ಷಿಣ ಆಫ್ರಿಕಾದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ವಿರಾಟ್, ಟೂರ್ನಿಯಲ್ಲಿ ಮೊದಲ ಅರ್ಧಶತಕದ ಸಾಧನೆ ಮಾಡಿದರು. ಅಲ್ಲದೆ ಒಟ್ಟಾರೆಯಾಗಿ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 38ನೇ ಅರ್ಧಶತಕ ಗಳಿಸಿದರು.

ಅರ್ಧಶತಕದ ಬಳಿಕ ಬಿರುಸಿನ ಬ್ಯಾಟಿಂಗ್ ಮೂಲಕ ಕೊಹ್ಲಿ ಗಮನ ಸೆಳೆದರು. ಅಲ್ಲದೆ ಶಿವಂ ದುಬೆ ಅವರೊಂದಿಗೆ ಕೊಹ್ಲಿ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.

ಕೊಹ್ಲಿ 59 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 76 ರನ್ ಗಳಿಸಿದರು. ಶಿವಂ ದುಬೆ 27 ರನ್‌ಗಳ (16 ಎಸೆತ, 3 ಬೌಂಡರಿ, 1 ಸಿಕ್ಸರ್) ಉಪಯುಕ್ತ ಕಾಣಿಕೆ ನೀಡಿದರು. ಹಾರ್ದಿಕ್ ಪಾಂಡ್ಯ 5* ಹಾಗೂ ರವೀಂದ್ರ ಜಡೇಜ 2 ರನ್ ಗಳಿಸಿದರು.

ದಕ್ಷಿಣ ಆಫ್ರಿಕಾದ ಪರ ಮಹಾರಾಜ್ ಹಾಗೂ ನಾಕಿಯಾ ತಲಾ ಎರಡು ಮತ್ತು ರಬಾಡ ಹಾಗೂ ಜಾನ್ಸೆನ್ ತಲಾ ಒಂದು ವಿಕೆಟ್ ಗಳಿಸಿದರು.

177 ರನ್ ಗಳ ಸವಾಲು ಸ್ವೀಕರಿಸಿದ ದಕ್ಷಿಣ ಆಫ್ರಿಕಾ ಹೆನ್ರಿಕ್ ಕ್ಲಾಸೆನ್ ರವರ 52 ರನ್ ಗಳ ಕೊಡುಗೆಯಿಂದ ಒಂದು ಹಂತದಲ್ಲಿ ವಿಜಯದ ಸಮೀಪ ಬಂದು ನಿಂತಿತ್ತು. ಆದರೆ ಹಾರ್ದಿಕ್ ಪಾಂಡ್ಯ ಹೆನ್ರಿ ಕ್ಲಾಸನ್ ವಿಕೆಟ್ ಪಡೆದ ನಂತರ ಪಂದ್ಯದ ಸಮೀಕರಣ ಬದಲಾಯಿತು. 18ನೇ ಓವರನಲ್ಲಿ ಜಸ್ಪ್ರೀತ್ ಬೂಮ್ರ ಎರಡು ರನ್ ನೀಡಿ ಯಾನ್ಸನ್ ಅವರ ವಿಕೆಟ್ ಪಡೆದರು. 20ನೇ ಓವರ್ ನಲ್ಲಿ ಹಾರ್ದಿಕ್ ಪಾಂಡ್ಯ 2 ವಿಕೆಟ್ ಗಳಿಸುವುದರೊಂದಿಗೆ ಭಾರತ ತಂಡಕ್ಕೆ ಟಿ 20 ವಿಶ್ವಕಪ್ ಮುಡಿಗೇರಿಸಿದರು.

ಟಿ-20ಗೆ ಕೊಹ್ಲಿ ವಿದಾಯ

ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ ವಿರಾಟ್ ಕೊಹ್ಲಿ ಇದು ನನ್ನ ಕೊನೆಯ ಟಿ-20 ವಿಶ್ವಕಪ್ ಎಂದು ವಿದಾಯ ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!