Friday, September 20, 2024

ಪ್ರಾಯೋಗಿಕ ಆವೃತ್ತಿ

ಶೀತಗಾಳಿ| ರಾಜ್ಯದ 22 ಜಿಲ್ಲೆಗಳಲ್ಲಿ ಜ.9ರವರೆಗೆ ಮಳೆ ಸಾಧ್ಯತೆ

ಕರ್ನಾಟಕದಾದ್ಯಂತ ಶೀತಗಾಳಿ ಬೀಸುತ್ತಿದ್ದು, ರಾಜ್ಯದ 22ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜನವರಿ 9ರವರೆಗೆ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದಿನಿಂದ ಐದಾರು ದಿನಗಳ ಕಾಲ ಮಳೆಯಾಗಲಿದೆ. ಇನ್ನು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರದಲ್ಲಿ ಜನವರಿ 7 ರಿಂದ 9 ರವರೆಗೆ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರಿನಲ್ಲಿ ಇಂದು ಮತ್ತು ನಾಳೆ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ,ವಿಜಯನಗರದಲ್ಲಿ ಜನವರಿ 6 ರಿಂದ 3 ದಿನಗಳ ಕಾಲ ಮಳೆಯಾಗಲಿದೆ.

ವಿಜಯಪುರದಲ್ಲಿ 11.1 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಇಂದು ನಸುಕಿನ ವೇಳೆ ಮಳೆ ಸುರಿದಿರುವುದು ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಮುಸ್ಸಂಜೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂದಿತ್ತು. ಕೆಲವೆಡೆ ರಾತ್ರಿಯಿಂದಲೇ ತುಂತುರು ಮಳೆ ಸುರಿದಿದೆ. ಮಂಗಳೂರು ನಗರದಲ್ಲಿ ಬೆಳಗ್ಗೆ ಗುಡುಗು ಸಹಿತ ತುಂತುರು ಮಳೆಯಾಗಿದೆ.

ನಗರ ಹೊರವಲಯದ ಉಳ್ಳಾಲ, ಕೊಣಾಜೆ, ಮುಡಿಪು, ಮಂಜನಾಡಿ ಸೇರಿದಂತೆ ಹಲವೆಡೆ ಇಂದು ಬೆಳಗ್ಗೆ ಉತ್ತಮ ಮಳೆಯಾಗಿರುವುದು ವರದಿಯಾಗಿದೆ.

ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ತಾಲೂಕಿನಾದ್ಯಂತ ಮಳೆ ಸುರಿದಿದೆ. ಬಂಟ್ವಾಳ ತಾಲೂಕಿನ ಹಲವೆಡೆ ಉತ್ತಮ ಮಳೆಯಾಗಿದ್ದರೆ, ಬೆಳ್ತಂಗಡಿಯಲ್ಲಿ ಬೆಳಗ್ಗೆ 9 ಗಂಟೆಯ ಸುಮಾರಿಗೆ ಮಳೆಮಳೆ ಸುರಿಯುತ್ತಿರುವುದು ವರದಿಯಾಗಿದೆ. ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ಮುಂದುವರಿದಿದೆ.

ಉಡುಪಿ ಜಿಲ್ಲೆಯಲ್ಲಿ ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣವಿದ್ದು, ಬಳಿಕ ಹಲವೆಡೆ ತುಂತುರು ಮಳೆ ಸುರಿದಿದೆ. ಬೆಳಗ್ಗೆ 9 ಗಂಟೆ ಕಳೆದರೂ ಮೋಡದ ವಾತಾವರಣ ಮುಂದುವರಿದಿದೆ.

ಕೃಪೆ: ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!