Thursday, September 19, 2024

ಪ್ರಾಯೋಗಿಕ ಆವೃತ್ತಿ

ನಟ ದರ್ಶನ್ ಗ್ಯಾಂಗ್ ಕೊಲೆ ಪ್ರಕರಣ| ಹಾಸ್ಯನಟ ಚಿಕ್ಕಣ್ಣಗೆ ಮತ್ತೆ ಸಂಕಷ್ಟ?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹಾಸ್ಯನಟ ಚಿಕ್ಕಣ್ಣಗೆ ಮತ್ತೆ ಸಂಕಷ್ಟ ಎದುರಾಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ನಟ ದರ್ಶನ್‌ ಮತ್ತವನ ಗ್ಯಾಂಗ್‌ ವಿರುದ್ಧ ಪ್ರಮುಖ ಸಾಕ್ಷಿಯಾಗಿರುವ ಚಿಕ್ಕಣ್ಣ ಸೆಕ್ಷನ್ ಸಿಆರ್‌ಪಿಸಿ 164ರ ಅಡಿಯಲ್ಲಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ ಬೆನ್ನಲ್ಲೇ ಜೈಲಿನಲ್ಲಿರುವ ನಟ ದರ್ಶನ್‌ ಭೇಟಿ ಮಾಡಿದ್ದಾರೆ.

ಸಾಧಾರಣವಾಗಿ ಪ್ರಕರಣವು ತನಿಖಾ ಹಂತದಲ್ಲಿರುವಾಗ ಸಾಕ್ಷಿಯಾದ ವ್ಯಕ್ತಿ ಜೈಲಿನಲ್ಲಿ ಆರೋಪಿಯನ್ನು ಭೇಟಿ ಮಾಡುವುದಿಲ್ಲ. ಆದರೆ ತನಿಖಾ ಹಂತದಲ್ಲಿರುವಾಗಲೇ ಚಿಕ್ಕಣ್ಣ ದರ್ಶನ್‌ ಅವರನ್ನು ಭೇಟಿ ಮಾಡಿದ್ದಕ್ಕೆ ಪಶ್ಚಿಮ ವಿಭಾಗದ ಪೊಲೀಸರು ಶೀಘ್ರವೇ ನೋಟಿಸ್‌ ನೀಡುವ ಸಾಧ್ಯತೆಯಿದೆ.

ಯಾವ ಉದ್ದೇಶಕ್ಕೆ ಆರೋಪಿಯನ್ನು ಭೇಟಿಯಾಗಿದ್ದೀರಿ? ಆರೋಪಿ ಬಳಿ ಏನು ಮಾತನಾಡಿದ್ದೀರಿ ಎಂದು‌ ಚಿಕ್ಕಣ್ಣ ಅವರನ್ನು ಪೊಲೀಸರು ಪ್ರಶ್ನಿಸಬಹುದು. ಇದರ ಜೊತೆಯಲ್ಲಿ ಸಾಕ್ಷಿ-ಆರೋಪಿ ಭೇಟಿ ಬಗ್ಗೆ ಜೈಲಾಧಿಕಾರಿಗಳ ಬಳಿಯೂ ಮಾಹಿತಿ ಪಡೆಯಬಹುದು. ಅಷ್ಟೇ ಅಲ್ಲದೇ ಸಾಕ್ಷಿಗಳ ಭೇಟಿಯನ್ನ ತಡೆಯಲು ನ್ಯಾಯಾಲಯದಲ್ಲಿ ಎಸ್‌ಐಟಿ ಮನವಿ ಮಾಡುವ ಸಾಧ್ಯತೆಯಿದೆ.

ಕಳೆದ ಜೂನ್ 8 ರಂದು ಸ್ಟೋನಿ ಬ್ರೂಕ್‌ ಪಬ್‌ನಲ್ಲಿ ನಡೆದಿದ್ದ ಪಾರ್ಟಿಯಲ್ಲಿ ದರ್ಶನ್ ಜೊತೆ ಚಿಕ್ಕಣ್ಣ ಭಾಗಿಯಾಗಿದ್ದರು. ಪಾರ್ಟಿ ಬಳಿಕ ದರ್ಶನ್ ಪಟ್ಟಣಗೆರೆ ಶೆಡ್‌ಗೆ ಹೋಗಿದ್ದರೆ ಚಿಕ್ಕಣ್ಣ ಮನೆಗೆ ತೆರಳಿದ್ದರು.

ಚಿಕ್ಕಣ್ಣ ಪ್ರಮುಖ ಸಾಕ್ಷಿ

ಯಾವುದೇ ಪ್ರಕರಣದಲ್ಲಿ ಪೊಲೀಸರು ಠಾಣೆಗೆ ಕರೆಸಿ ಸಾಕ್ಷಿಗಳನ್ನು ವಿಚಾರಣೆ ನಡೆಸುತ್ತಾರೆ. ಆದರೆ ಪ್ರಕರಣ ಒಂದರಲ್ಲಿ ಆ ವ್ಯಕ್ತಿಯ ಹೇಳಿಕೆ ಪ್ರಮುಖ ಸಾಕ್ಷಿ ಆಗಲಿದೆ ಎಂದಾದರೆ ಮಾತ್ರ ಆ ವ್ಯಕ್ತಿಯನ್ನು ಜಡ್ಜ್‌ ಮುಂದೆ ಹಾಜರು ಪಡಿಸಿ ಹೇಳಿಕೆ ನೀಡಲಾಗುತ್ತದೆ.

ನಟ ಚಿಕ್ಕಣ್ಣ ಅವರ ಹೇಳಿಕೆಯನ್ನು ಸಿಆರ್‌ಪಿಸಿ 164ರ ಅಡಿಯಲ್ಲಿ ನ್ಯಾಯಾಧೀಶರ ಎದುರು ಪೊಲೀಸರು ದಾಖಲಿಸಿದ್ದಾರೆ. ಚಿಕ್ಕಣ್ಣ ಅವರ ಹೇಳಿಕೆಯನ್ನು ಪ್ರಮುಖ ಸಾಕ್ಷಿಯನ್ನಾಗಿ ಪರಿಗಣಿಸಲೆಂದೇ ಪೊಲೀಸರು ಜಡ್ಜ್‌ ಮುಂದೆ ಹೇಳಿಕೆ ದಾಖಲು ಮಾಡಿದ್ದಾರೆ ಎನ್ನಲಾಗಿದೆ.

ರೇಣುಕಾಸ್ವಾಮಿ ಕೊಲೆ ನಡೆದ ದಿನ ದರ್ಶನ್ ಅವರ ಜೊತೆ ಚಿಕ್ಕಣ್ಣ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಚಿಕ್ಕಣ್ಣ ಠಾಣೆಗೆ ಬಂದು ಪೊಲೀಸರು ಕೇಳಿದ ವಿವರಗಳನ್ನು ನೀಡಿದ್ದರೂ ಮುಂದೆ ಚಿಕ್ಕಣ್ಣ ಏನಾದರೂ ತಮ್ಮ ಹೇಳಿಕೆಯನ್ನು ಬದಲಿಸಿದರೆ ವಿಚಾರಣೆಗೆ ಹಿನ್ನಡೆಯಾಗಬಹುದು ಎಂಬ ಕಾರಣಕ್ಕೆ ಅವರ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆಯೇ ಪಡೆದುಕೊಳ್ಳಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!