Thursday, September 19, 2024

ಪ್ರಾಯೋಗಿಕ ಆವೃತ್ತಿ

ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ‘ಸುಗಮ ಸಂಗೀತ’ ಕಡೆಗಣನೆ : ಕಸಾಪ ಅಧ್ಯಕ್ಷರ ಸರ್ವಾಧಿಕಾರಿ ಧೋರಣಿಗೆ ಖಂಡನೆ

ಇತ್ತೀಚೆಗೆ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ “ಕಾವ್ಯ-ಗಾಯನ” ಕ್ಷೇತ್ರ ಹಾಗೂ ಸಂಪೂರ್ಣವಾಗಿ ಕಡೆಗಣಿಸಲಾಗಿದ್ದು, ಇದಕ್ಕೆ ಕೇಂದ್ರ ಕಸಾಪ ಅಧ್ಯಕ್ಷರ ಸರ್ವಾಧಿಕಾರಿ ಧೋರಣಿಯೇ ಕಾರಣವಾಗಿದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಖಂಡನೆ ವ್ಯಕ್ತಪಡಿಸಿದೆ.

ಸುಗಮ ಸಂಗೀತ ಪರಿಷತ್ತಿನ ರಾಜ್ಯಾಧ್ಯಕ್ಷರು ಹಲವಾರು ಬಾರಿ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರೊಡನೆ ಚರ್ಚಿಸಲು ಪ್ರಯತ್ನಿಸಿದ್ದು, ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಆಕಸ್ಮಿಕವಾಗಿ ಸಿಕ್ಕಾಗ ಈ ಬಾರಿ ಸಮ್ಮೇಳನಾಧ್ಯಕ್ಷರಾಗಿರುವ ನಾಡಿನ ಹೆಸರಾಂತ ಕವಿ ಡಾ.ದೊಡ್ಡರಂಗೇಗೌಡ ರಚಿತ ಕವಿಚಿತ್ರ ಗೀತೆಗಳು ಹಾಗೂ ಭಾವಗೀತೆಗಳ ಗಾಯನ ಗೋಷ್ಠಿಗೆ ಅವಕಾಶ ಕಲ್ಪಿಸಿಕೊಡಲು ಪ್ರಸ್ತಾಪಿಸಿದಾಗ ಒಪ್ಪಿಕೊಂಡಿದ್ದವರು, ನಂತರ ಆ ಪ್ರಸ್ತಾವನೆಯನ್ನು ಕೈಬಿಟ್ಟರು ಎಂದು ಸುಗಮ ಸಂಗೀತ ಪರಿಷತ್ ಆಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾತೃಸಂಸ್ಥೆಗೆ ಕನ್ನಡ ಜನತೆಯಿಂದ ಆಯ್ಕೆ ಆದವರು ಈ ರೀತಿ ಸರ್ವಾಧಿಕಾರಿ ಧೋರಣೆ ತಳೆಯುವುದು ಸಮಂಜಸವೇ? ಕಡಿವಾಣ ಹಾಕಲು ಇವರಿಗೆ ಏನು ಅಧಿಕಾರ? ಇವರೇನು ಗೀತಗಾಯನ ಪ್ರವೀಣರೇ? ಎಂದು ಪ್ರಶ್ನಿಸಿರುವ ಅವರು, ಇಡೀ ಭಾರತೀಯ ಸಾಹಿತ್ಯ ಚಳವಳಿಯಲ್ಲಿ ಕನ್ನಡ ಕಾವ್ಯವನ್ನು ಸುಗಮ ಸಂಗೀತದ ಮೂಲಕ ಮೂಲೆ ಮೂಲೆಗೂ ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಹೀಗಿರುವಲ್ಲಿ ಸಮ್ಮೇಳನದ ಕಾರ್ಯಕ್ರಮಗಳನ್ನು ಅದರಲ್ಲೂ ಗೋಷ್ಠಿಗಳನ್ನು ರೂಪಿಸುವಾಗ ಸುಗಮ ಸಂಗೀತ ಸಮಾಲೋಚಿಸುವ ಕನಿಷ್ಠ ಸೌಜನ್ಯವನ್ನೂ ತೋರಿಸದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ವರ್ತನೆ ಖಂಡನಾರ್ಹ ಎಂದಿದ್ದಾರೆ.

ಇದು ಕಾವ್ಯ ಗಾಯನ ಕ್ಷೇತ್ರದ ಕಲಾವಿದರಿಗೆ ಮಾಡಿರುವ ಅವಮಾನ. ಉದ್ದೇಶಪೂರ್ವಕವಾಗಿ ಸಾಹಿತ್ಯ ಪರಿಷತ್ತು ತೆಗೆದುಕೊಂಡಿರುವ ಇಂತಹ ನಿಲುವು ಹಾಗೂ ವರ್ತನೆಯನ್ನು ಕರ್ನಾಟಕ ಸುಗಮ ಸಂಗೀತ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ ಎಂದು ಸುಗಮ ಸಂಗೀತ ಪರಿಷತ್ತಿನ ಕಾರ್ಯಾಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಉಡುಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!