Thursday, September 19, 2024

ಪ್ರಾಯೋಗಿಕ ಆವೃತ್ತಿ

ಕನ್ನಡ ನಾಮಫಲಕ ಹೋರಾಟಗಾರರ ಬಂಧನಕ್ಕೆ ಕೆ.ಆರ್.ಎಸ್ ಖಂಡನೆ

ಕಳೆದ ಡಿ.27ರಂದು ಹಲವು ಕನ್ನಡಪರ ಸಂಘಟನೆಗಳಿಂದ ಬೆಂಗಳೂರಿನಾದ್ಯಂತ ನಡೆದ ಜನಜಾಗೃತಿ ಅಭಿಯಾನ ಕನ್ನಡ ಫಲಕಗಳನ್ನು ಅಳವಡಿಸದಿರುವ ಬಗ್ಗೆ ಸಾರ್ವಜನಿಕವಾಗಿ ಪ್ರಶ್ನೆ ಮಾಡುತಿದ್ದಂತಹ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ನಷ್ಟ ಆಗಿದೆ ಅಂತ ಹೇಳಿ, ಕನ್ನಡ ಪರ ಸಂಘಟನೆಗಳು ಸೇರಿದಂತೆ ಹಲವು ಕನ್ನಡ ಸೇನಾನಿಗಳನ್ನ ಬಂಧಿಸಿರುವುದು ಖಂಡನೀಯ ಎಂದು ಕರ್ನಾಟಕ ರಾಷ್ರ್ಟಸಮಿತಿ ಪಕ್ಷದ ರಾಜ್ಶ ಸಂಘಟನಾ ಕಾರ್ಯದರ್ಶಿ ಅರುಣ ಕುಮಾರ ಹೆಚ್ ಎಂ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಯಾವುದೇ ರೀತಿಯ ಅಂಗಡಿ, ವಾಣಿಜ್ಯ ಮಳಿಗೆಗಳು, ಉದ್ಯಮಗಳು, ಕಚೇರಿಗಳು ತೆರದಂತಹ ಸಂದರ್ಭದಲ್ಲಿ ಈ ನೆಲದ ಭಾಷೆ, ಕರ್ನಾಟಕದ ಆಡಳಿತ ಭಾಷೆ ಕನ್ನಡಕ್ಕೆ ಮಾನ್ಯತೆ ಸಿಗಬೇಕು ಎನ್ನುವ ನಿಟ್ಟಿನಲ್ಲಿ, ಈ ರಾಜ್ಯದಲ್ಲಿ 1963 ನೇ ಇಸವಿಯ ನಂತರದಲ್ಲೇ ಕನ್ನಡ ನಾಮ ಫಲಕಗಳನ್ನ ಅಳವಡಿಸುವ ವಿಚಾರದಲ್ಲಿ ಕಡ್ಡಾಯವಾಗಿ ಶೇಕಡಾ 60% ರಷ್ಟು ಕನ್ನಡ, 40% ರಷ್ಟು ಇಂಗ್ಲಿಷ್ ಬಳಸುವಂತೆ ನಿಯಮ, ಕಾನೂನಿದೆ, ಈ ಕಾನೂನು ರಾಜ್ಯದಲ್ಲಿ ಪಾಲನೆಯಾಗದಿರುವುದಕ್ಕೆ ಇದುವರೆಗೆ ಆಡಳಿತ ನಡೆಸಿದ ರಾಜ್ಯ ಸರ್ಕಾರಗಳೇ ಕಾರಣವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ದೂರಿದ್ದಾರೆ.

ಬೆಂಗಳೂರಿನಲ್ಲಿ ವಲಸಿಗ ಉದ್ಯಮಿಗಳಿಗೆ 60% ಕನ್ನಡ ನಾಮಫಲಕ ಕಡ್ಡಾಯ ವಿಚಾರವಾಗಿ ಮನವರಿಕೆ ಮಾಡುವಂತಹ ಸಂದರ್ಭದಲ್ಲಿ ಕೆಲ ವಲಸಿಗ ಉದ್ಯಮಿಗಳು ಬೇಜವಾಬ್ದಾರಿತನದಿಂದ ವರ್ತಿಸಿ “ನೀವು ಬೆಂಗಳೂರಿನಲ್ಲಿ 30% ಕನ್ನಡಿಗರಿದ್ದೀರಾ ನಿಮ್ಮ ಕೈಯಲ್ಲಿ ಏನ್ ಮಾಡೋಕೆ ಆಗುತ್ತೆ ಅಂತೆಲ್ಲ ಹೇಳಿ, ನಾವು ಉಳಿದ ಭಾಷಿಕರೆಲ್ಲ ಸೇರಿ, ನಮ್ಮ ನಿಯೋಗ ದೆಹಲಿಗೆ ತಲುಪಿ ಪ್ರದಾನಿಯವರನ್ನ ಭೇಟಿಮಾಡಿ ಬೆಂಗಳೂರನ್ನ ಕೇಂದ್ರ ಆಡಳಿತ ಪ್ರದೇಶವನ್ನಾಗಿ ಮಾಡಲು ಒತ್ತಾಯವನ್ನ ಮಾಡುತ್ತೇವೆ” ಅಂತ ಹೇಳಿ ಧಮಕಿ ಹಾಕಿರುವುದು ಖಂಡನೀಯ. ಮೊದಲು ಅವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಎಲ್ಲ ಘಟನೆಗಳು ಸಂಭವಿಸಿದ ನಂತರ ರಾಜ್ಯದ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯನವರು ಸುಗ್ರೀವಾಜ್ಞೆ ಹೊರಡಿಸಿ, ನಿಯಮದ ಪ್ರಕಾರ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇಕಡಾ 60% ಕನ್ನಡವನ್ನ ಬಳಸಲಿಕ್ಕೆ ಫೆಬ್ರವರಿ 28, 2024 ರವರೆಗೆ ಗಡುವನ್ನ ಕೊಟ್ಟಿರುವುದು ಶ್ಲಾಘನೀಯ. ಕರ್ನಾಟಕದಲ್ಲಿ ಉದ್ಯಮ ನಡೆಸುವವರು ಯಾರೇ ಇರಲಿ, ಅವರು ಕಡ್ಡಾಯವಾಗಿ ನಾಡಿನ ಮಣ್ಣಿನ ಭಾಷೆಗೆ ಮಾನ್ಯತೆ ಕೊಡಬೇಕು, ಕನ್ನಡ ಬರಿ ನಾಮ ಫಲಕಕ್ಕೆ ಸೀಮಿತವಾಗದೆ, ಅಂಗಡಿಗಳು, ವಾಣಿಜ್ಯ ಮಳಿಗೆಗಳು, ಮಾಲ್ ಗಳ ಒಳಗೆ, ಹೋಟೆಲ್ ಮೆನು ಕಾರ್ಡ್ಗಳಲ್ಲಿ, ಕರ್ನಾಟಕದಲ್ಲಿ ಮಾರಾಟವಾಗುವ ಯಾವುದೇ ಪದಾರ್ಥಗಳ ಮೇಲೆ ಅದರಲ್ಲೂ ದಿನ ಬಳಕೆ, ಗೃಹಉಪಯೋಗಿ ಪದಾರ್ಥಗಳ ಮೇಲೆ, ಸರ್ಕಾರಿ ಕಚೇರಿಗಳು ಸೇರಿದಂತೆ ಎಲ್ಲೆಡೆ ಕನ್ನಡ ರಾರಾಜಿಸುವಂತಾಗಬೇಕು ಎಂದು ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!