ಮಂಡ್ಯ ತಾಲ್ಲೂಕಿನ ಬೂದನೂರಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನೆಹರು ಯುವ ಕೇಂದ್ರ, ವಾರ್ತಾ ಮತ್ತು ಪ್ರಚಾರ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಮಹಿಳಾ ಸರ್ಕಾರಿ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ವತಿಯಿಂದ ಆಯೋಜಿಸಿದ್ದ ”ಸ್ವಚ್ಛತೆಯೇ ಸೇವೆ ತ್ಯಾಜ್ಯ ಮುಕ್ತ ಭಾರತ” ಕಾರ್ಯಕ್ರಮಕ್ಕೆ ಶಾಸಕ ರವಿಕುಮಾರ್ ಗಣಿಗ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಹುತೇಕ ಹಳ್ಳಿಗಳಲ್ಲಿ ಮನೆಯಿಂದ ಹೊರ ಹೋಗುತ್ತಿರುವ ಕಲುಷಿತ ನೀರು ಸ್ವಚ್ಚವಾದ ಕೆರೆಗೆ ತಲುಪಿ ಕೆರೆ ನೀರು ಹಾಳಾಗುತ್ತಿದೆ, ಇದನ್ನು ತಡಗಟ್ಟಬೇಕಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 2 ರವರೆಗೆ ಸ್ವಚ್ಛತೆಯೇ ಸೇವೆ-ತ್ಯಾಜ್ಯ ಮುಕ್ತ ಭಾರತ ಎಂಬ ಘೋಷಣೆ ವಾಕ್ಯದಡಿಯಲ್ಲಿ ಬೂದನೂರಿನ ಗ್ರಾಮ ಪಂಚಾಯತಿ ಕೆರೆ ಅಭಿವೃದ್ಧಿಗೆ 40 ಲಕ್ಷ ರೂ. ಗಳನ್ನು ಬಿಡುಗಡೆ ಮಾಡಿದ್ದು,ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯ ಎಲ್ಲಾ ಕೆರೆಗಳ ಪುನಶ್ಚೇತನಕ್ಕೆ ತಯಾರಿ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಬೂದನೂರಿನ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾನಸ, ಉಪಾಧ್ಯಕ್ಷೆ ಜಯಲಕ್ಷ್ಮೀ, ಬೂದನೂರು ಗ್ರಾ. ಪಂ. ಮಾಜಿ ಸದಸ್ಯ ಸತೀಶ್, ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ಆರ್. ದಶರಥ, ಎನ್.ಎಸ್.ಎಸ್ ಕಾರ್ಯಕ್ರಮಧಿಕಾರಿಗಳಾದ ಡಾ. ಎಂ ಕೆಂಪಮ್ಮ ಮತ್ತು ಡಾ.ಹೆಚ್.ಎಸ್ ಶಿವರಾಜು, ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿಯ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




