Thursday, September 19, 2024

ಪ್ರಾಯೋಗಿಕ ಆವೃತ್ತಿ

ವಂಚನೆ ಪ್ರಕರಣ| ಚೈತ್ರಾ ಮತ್ತು ಶ್ರೀಕಾಂತ್​ಗೆ ಷರತ್ತುಬದ್ಧ ಜಾಮೀನು: ಇಂದು ಜೈಲಿನಿಂದ ಬಿಡುಗಡೆ

2023ರ ವಿಧಾನಸಭಾ ಚುನಾವಣೆಯಲ್ಲಿ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಸಿಸಿಬಿ ಪೊಲೀಸರ ವಿಚಾರಣೆ ಎದುರಿಸುತ್ತಿದ್ದ ಪ್ರಕರಣದ ಎ1 ಆರೋಪಿ ಚೈತ್ರಾ ಕುಂದಾಪುರ ಮತ್ತು ಎ7 ಆರೋಪಿ ಶ್ರೀಕಾಂತ್‌ಗೆ ಬೆಂಗಳೂರಿನ ಮೂರನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

ಈ ಇಬ್ಬರು ಆರೋಪಿಗಳು ನವೆಂಬರ್ 5ರಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಚೈತ್ರಾ ಸೇರಿದಂತೆ 7 ಆರೋಪಿಗಳಿಗೆ ಸೆ.23 ರಂದು ಮೂರನೇ ಎಸಿಎಂಎಂ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟಿಸಿತ್ತು.

ಕೋಟ್ಯಂತರ ರೂ. ವಂಚನೆ 

ಚೆಫ್ ಟಾಕ್ ಸಂಸ್ಥೆ ಮುಖ್ಯಸ್ಥರಾಗಿರುವ ಗೋವಿಂದ ಬಾಬು ಪೂಜಾರಿ ಎಂಬುವವರು ಬೈಂದೂರು ವಿಧಾನಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದರು. ಕಳೆದ 2023 ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಪೂಜಾರಿ ಅವರಿಗೆ ₹5 ಕೋಟಿ ವಂಚಿಸಿದ್ದರು.

ವಂಚನೆ ಸಂಬಂಧ ಉದ್ಯಮಿ ಗೋವಿಂದಬಾಬು ಪೂಜಾರಿ ಸೆ.8ರಂದು ಬಂಡೇಪಾಳ್ಯ ಠಾಣೆಯಲ್ಲಿ ಚೈತ್ರಾ ಮತ್ತು ಇತರೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹೆಚ್ಚಿನ ತನಿಖೆಗಾಗಿ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು.

ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಚೈತ್ರಾ, ಗಗನ್ ಕಡೂರು, ಹೊಸಪೇಟೆಯ ಹಾಲಶ್ರೀ ಸ್ವಾಮೀಜಿ, ಚನ್ನನಾಯ್ಕ, ಧನರಾಜ್, ಶ್ರೀಕಾಂತ್, ಪ್ರಜ್ವಲ್ ಸೇರಿ 9 ಮಂದಿಯನ್ನು ಬಂಧಿಸಿದ್ದರು.

ಚೈತ್ರಾ ಕುಂದಾಪುರ ಅವರನ್ನು ಸೆಪ್ಟೆಂಬರ್ 13 ರಂದು ಸಿಸಿಬಿ ಪೊಲೀಸರು ಉಡುಪಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಬಂಧಿಸಿದ್ದರು. ರಮೇಶ್, ಧನರಾಜ್, ಶ್ರೀಕಾಂತ್, ಪ್ರಜ್ವಲ್ ಎಂಬುವವರನ್ನು ಉಡುಪಿ ಹಾಗೂ ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದರು.

ಬಳಿಕ, ಆರೋಪಿಗಳನ್ನು ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ನಂತರ, ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು. ಈ ವೇಳೆ ಸಿಸಿಬಿ ಪರ ವಕೀಲರು, “ಬಂಧಿತರಿಂದ ಹಣ ರಿಕವರಿ ಮಾಡಿಕೊಳ್ಳಬೇಕಿದೆ. ಹಾಗಾಗಿ, ಆರೋಪಿಗಳನ್ನು 10 ದಿನ ಪೊಲೀಸ್‌ ಕಸ್ಟಡಿ ವಶಕ್ಕೆ ನೀಡಬೇಕು” ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಇದಕ್ಕೆ ಸಮ್ಮತಿಸಿದ್ದ ನ್ಯಾಯಾಲಯ ಚೈತ್ರಾ ಕುಂದಾಪುರ ಸೇರಿದಂತೆ ಆರು ಮಂದಿಗೆ 14 ದಿನಗಳ ಕಾಲ ಅಂದರೆ, ಸೆ.​23 ರವರೆಗೆ ಸಿಸಿಬಿ ಕಸ್ಟಡಿಗೆ ನೀಡಲು ಬೆಂಗಳೂರಿನ ಎಸಿಎಂಎಂ ಕೋರ್ಟ್‌ ಆದೇಶಿಸಿತ್ತು.

ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ಅಭಿನವ ಹಾಲಶ್ರೀ ಅವರನ್ನು ನವೆಂಬರ್ 19ರಂದು ಒಡಿಶಾದ ಕಟಕ್ ರೈಲ್ವೆ ನಿಲ್ದಾಣದಲ್ಲಿ ಸಿಸಿಬಿ ಪೊಲೀಸರು ಒಡಿಶಾ ಪೊಲೀಸರ ಸಹಕಾರದೊಂದಿಗೆ ಬಂಧಿಸಿ, ಬೆಂಗಳೂರಿಗೆ ಕರೆತಂದಿದ್ದರು. ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ತಾನು ಧರಿಸಿದ್ದ ಕಾವಿಯನ್ನು ತೆಗೆದು, ಟೀ ಶರ್ಟ್ ಧರಿಸಿ ಕಾಶಿಯತ್ತ ಪ್ರಯಾಣ ಬೆಳೆಸಿದ್ದರು.

ಗೋವಿಂದಬಾಬು ಅವರ ಬಳಿಯಿಂದ ಚೈತ್ರಾ ಒಟ್ಟು ₹4 ಕೋಟಿ ಹಣ ಪಡೆದಿದ್ದಳು. ಆದರೆ ಗೋವಿಂದಬಾಬು ಪೂಜಾರಿ ಅವರಿಗೆ ಟಿಕೆಟ್​ ಸಿಗಲಿಲ್ಲ. ಬಳಿಕ ಗೋವಿಂದಬಾಬು ಕೊಟ್ಟ ಹಣವನ್ನು ವಾಪಸ್‌ ಕೇಳಿದ್ದಾರೆ. ಆದರೆ ಚೈತ್ರಾ ಮತ್ತು ಗ್ಯಾಂಗ್ ಹಣ ನೀಡದೇ ವಂಚನೆ ಮಾಡಿತ್ತು.

ಎಷ್ಟು ಹಣ ಜಪ್ತಿ?

ಸಿಸಿಬಿ ಪೊಲೀಸರು ಚೈತ್ರಾ ಸೇರಿದಂತೆ ಆರೋಪಿಗಳ ಬಂಧನದ ಬಳಿಕ ಆಸ್ತಿಯನ್ನು ವಶಕ್ಕೆ ಪಡೆದಿದ್ದರು. ಚೈತ್ರಾ ಬಳಿ ₹81 ಲಕ್ಷ ನಗದು ಹಾಗೂ ₹23 ಲಕ್ಷ ಮೌಲ್ಯದ ಚಿನ್ನಾಭರಣ, ಸಹಕಾರಿ ಬ್ಯಾಂಕ್‌ನಲ್ಲಿ ₹1.08 ಕೋಟಿ ಮೌಲ್ಯದ ಭದ್ರತಾ ಠೇವಣಿ ಜತೆಗೆ ₹12 ಲಕ್ಷ  ಮೌಲ್ಯದ ಕಿಯಾ ಕಾರನ್ನು ವಶಪಡಿಸಿಕೊಂಡಿದ್ದರು.

ಚೈತ್ರಾ ಸಹಚರರಾದ ಗಗನ್ ಕಡೂರ್, ಧನರಾಜ್ ರಮೇಶ್ ಅವರಿಂದ ₹26 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಅಭಿನವ ಹಾಲಾಶ್ರೀ ಬಳಿ ₹56 ಲಕ್ಷ ನಗದು, ₹25 ಲಕ್ಷ ಮೌಲ್ಯದ ಕಾರು ಜಪ್ತಿ ಮಾಡಲಾಗಿತ್ತು.

ಈ ಹಿಂದೆ ಹೊಸಪೇಟೆಯ ಹಾಲಶ್ರೀ ಸ್ವಾಮೀಜಿಗೆ ಜಾಮೀನು ಸಿಕ್ಕಿತ್ತು. ಈ ಮೂಲಕ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಂತಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!