Thursday, September 19, 2024

ಪ್ರಾಯೋಗಿಕ ಆವೃತ್ತಿ

ಲೈಂಗಿಕ ದೌರ್ಜನ್ಯ ಪ್ರಕರಣ| ಹೆಚ್.ಡಿ ರೇವಣ್ಣಗೆ ಷರತ್ತುಬದ್ಧ ಜಾಮೀನು

ಮನೆ ಕೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ.

“ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ”ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ.ಪ್ರೀತ್ ಅವರ ಪೀಠವು ಈ ಕುರಿತು ಅರ್ಜಿಯನ್ನು ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು. ಹಾಸನದ ಹೊಳೆನರಸೀಪುರದಲ್ಲಿ ದಾಖಲಾಗಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಲಕ್ಷ ರೂ. ಬಾಂಡ್, ತನಿಖೆಗೆ ಸಹಕರಿಸಬೇಕೆಂಬ ಷರತ್ತು ವಿಧಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಮನೆ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಕಿಡ್ನಾಪ್ ಮಾಡಿದ್ದ ಕೇಸ್‍ನಲ್ಲಿ ಕಳೆದ ವಾರವಷ್ಟೇ ಮಧ್ಯಂತರ ಜಾಮೀನಿನಲ್ಲಿ ರೇವಣ್ಣ ಜೈಲಿನಿಂದ ಬಿಡುಗಡೆಯಾಗಿದ್ದರು. ಇದೇ ನ್ಯಾಯಾಲಯ ನೀಡಿದ್ದ ಮಧ್ಯಂತರ ಜಾಮೀನಿಗೆ ಪ್ರಾಸಿಕ್ಯೂಷನ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಕುರಿತ ವಾದ-ಪ್ರತಿವಾದ ಆಲಿಸಿ ಆದೇಶವನ್ನು ಕಾಯ್ದಿರಿಸಲಾಗಿತ್ತು.

ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಹಾಸನದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ವಿಡಿಯೋ ವೈರಲ್‌ ಆಗಿತ್ತು. ಇದಾದ ಬಳಿಕ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ರೇವಣ್ಣ ಮತ್ತು ಪುತ್ರ ಪ್ರಜ್ವಲ್‌ ವಿರುದ್ದ ಎಫ್‌ಐಆರ್‌ ದಾಖಲಾಗಿತ್ತು. ಕೇಸ್‌ ದಾಖಲಾಗುತ್ತಿದ್ದಂತೆ ಪ್ರಜ್ವಲ್‌ ದೇಶ ತೊರೆದಿದ್ದರು. ಪ್ರಕರಣದ ತನಿಖೆಯನ್ನು ಎಸ್‌ಐಟಿ ಅಧಿಕಾರಿಗಳು ನಡೆಸುತ್ತಿದ್ದಾರೆ. ಪ್ರಜ್ವಲ್‌ ಬಂಧನಕ್ಕೆ ಈಗಾಗಲೇ ವಾರೆಂಟ್ ಜಾರಿ ಮಾಡಲಾಗಿದೆ. ರೇವಣ್ಣ ಅವರ ಮನೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವರ ಅಪಹರಣ ನಡೆದಿತ್ತು. ಮಹಿಳೆಯ ಪುತ್ರನ ದೂರಿನ ಆಧಾರದ ಮೇಲೆ 66 ವರ್ಷದ ರೇವಣ್ಣ ಮತ್ತು ಅವರ ಆಪ್ತ ಸತೀಸ್‌ ಬಾಬಣ್ಣ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ರೇವಣ್ಣ ತನ್ನ ತಾಯಿಯನ್ನು ಅಪಹರಿಸಿ ಅಕ್ರಮವಾಗಿ ದಿನಗಟ್ಟಲೆ ಬಂಧಿಸಿದ್ದಾರೆ ಎಂದು ಅವರು ಆರೋಪಿಸಿದ್ದರು. ಆ ಬಳಿಕ ಮಹಿಳೆಯನ್ನು ಪೊಲೀಸರು ರಕ್ಷಿಸಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು.

ಮೈಸೂರು ಜಿಲ್ಲೆಯ ಹುಣಸೂರಿನಲ್ಲಿರುವ ಹೆಚ್ ಡಿ ರೇವಣ್ಣ ಅವರ ಸಹಾಯಕರ ನಿವಾಸದಿಂದ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಹಿಳೆಯನ್ನು ರಕ್ಷಿಸಿದ ಒಂದು ವಾರದ ನಂತರ ಮಹಿಳೆ ವಿಡಿಯೋವೊಂದನ್ನು ಕೂಡ ಬಿಡುಗಡೆ ಮಾಡಿದ್ದರು. ಅದರಲ್ಲಿ, ನನ್ನನ್ನು ಯಾರೂ ಅಪಹರಣ ಮಾಡಿಲ್ಲ, ನಾನಾಗಿ ಮನೆಯಿಂದ ಬಂದಿದ್ದೇನೆ. ಭವಾನಿ, ರೇವಣ್ಣ, ಪ್ರಜ್ವಲ್ ಮತ್ತು ಬಾಬಣ್ಣರಿಂದ ಯಾವುದೇ ತೊಂದರೆ ಆಗಿಲ್ಲ ಎಂದು ಹೇಳಲಾಗಿದೆ.

ಇದಲ್ಲದೆ ನಮ್ಮ ಊರಿನವರು ಏನೇನೋ ಮಾತನಾಡಿದ್ದನ್ನು ಕೇಳಿ ಬೇಸರವಾಗಿತ್ತು. ಹೀಗಾಗಿ 4 ದಿನ ಇದ್ದು ಹೋಗೋಣವೆಂದು ನೆಂಟರ ಮನೆಗೆ ಬಂದಿದ್ದೇನೆ. ಸಂಬಂಧಿಕರ ಮನೆಯಲ್ಲಿ ಇದ್ದೇನೆ, 2 ದಿನಗಳ ಬಳಿಕ ನಾನೇ ಬರುತ್ತೇನೆ ಎಂದು ಉಲ್ಲೇಖಿಸಿದ್ದು, ಗಾಬರಿ ಪಡಬೇಡಿ ಏನೂ ತೊಂದರೆ ಆಗಿಲ್ಲ, ಚೆನ್ನಾಗಿ ಇದ್ದೇನೆ ವಾಪಸ್ ಬರುತ್ತೇನೆ. ಯಾರೂ ಏನೆ ಅಂದರು ತಲೆಗೆ ಹಾಕಿಕೊಳ್ಳಬೇಡಿ. ಅವರಿಂದ ನಮಗೆ ತೊಂದರೆ ಆಗಿಲ್ಲ. ಮೊಬೈಲ್‍ಗೂ ನಮಗೂ ಸಂಬಂಧವಿಲ್ಲ. ನಾಲ್ಕು ದಿನ ನೆಂಟರ ಮನೆಗೆ ಹೋಗಿದ್ದೆ, ಈ ಬಗ್ಗೆ ಎಲ್ಲಿ ಬೇಕಾದರೂ ಮಾಹಿತಿ ನೀಡುತ್ತೇನೆ ಎಂದು ಹೇಳಲಾಗಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!