ರಾಜ್ಯದ ರಾಜಕೀಯ ಪ್ರಜ್ಞೆಯ ಅಗ್ರಸ್ಥಾನದಲ್ಲಿರುವ ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಸರು ಘೋಷಣೆಯಾಗಿದ್ದು, ಮೇಲುಕೋಟೆ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿದೆ.
ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದ ಸತ್ಯಾಗ್ರಹ ಸೌಧವಿರುವ ಮದ್ದೂರು ವಿಧಾನಸಭಾ ಕ್ಷೇತ್ರದ ‘ಕೈ’ ಅಭ್ಯರ್ಥಿ ಯಾರೆಂಬುದು ಅಧಿಕೃತವಾಗಿ ಪ್ರಕಟವಾಗಿಲ್ಲ. ‘ಕೈ’ ಟಿಕೆಟ್ ಗಾಗಿ ಗುರುಚರಣ್ ಹಾಗೂ ಕದಲೂರು ಉದಯ್ ನಡುವೆ ಬಿಗ್ ಫೈಟ್ ಏರ್ಪಟ್ಟಿದ್ದು,ಕಾಂಗ್ರೆಸ್ ಟಿಕೆಟ್ ಕದಲೂರು ಉದಯ್ ಅವರಿಗೆ ಖಚಿತ ಎಂದೇ ಹೇಳಲಾಗುತ್ತಿದೆ. ಜಿಲ್ಲೆಯ ಆರು ಕ್ಷೇತ್ರಗಳ ಅಭ್ಯರ್ಥಿ ವಿಚಾರವನ್ನು ಇತ್ಯರ್ಥಗೊಳಿಸಿರುವ ಹೈಕಮಾಂಡ್ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ವಿಚಾರ ಬಹಿರಂಗಗೊಳಿಸದೆ ಇರುವುದು ಅಚ್ಚರಿ ಮೂಡಿಸಿದೆ.
ಕಾಂಗ್ರೆಸ್ ವರಿಷ್ಠರ ವಿಳಂಬ ನೀತಿ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡಿದೆ. ಪಕ್ಷದ ಮೂಲಗಳ ಪ್ರಕಾರ ಕದಲೂರು ಉದಯ್ ಹೆಸರು ಅಂತಿಮಗೊಂಡಿದೆ. ಆದರೂ ಕಾಂಗ್ರೆಸ್ನಿಂದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕುಟುಂಬಕ್ಕೆ ಅನ್ಯಾಯವಾಗಿದೆ ಎನ್ನುವ ಸಂದೇಶ ರವಾನೆಯಾಗಬಾರದೆಂಬ ಕಾರಣಕ್ಕೆ ಅಭ್ಯರ್ಥಿ ಘೋಷಣೆ ಮುಂದೂಡಲಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದು, ನಾಳೆ ಅಥವಾ ನಾಳಿದ್ದು ಅಭ್ಯರ್ಥಿ ಹೆಸರು ಘೋಷಣೆಯಾಗಲಿದೆ ಎಂಬ ಮಾಹಿತಿ ವ್ಯಕ್ತವಾಗುತ್ತಿದೆ.
ಸ್ವಯಂಕೃತ ತಪ್ಪಿಗೆ ಬಲಿಪಶು
ಮದ್ದೂರು ಕ್ಷೇತ್ರದಿಂದ ಶಾಸಕ, ತರುವಾಯ ಸಂಸದ, ಸಚಿವ, ಸ್ಪೀಕರ್ ಹಾಗೂ ಮುಖ್ಯಮಂತ್ರಿಯಾಗಿ ರಾಜ್ಯವನ್ನಾಳಿದ ಎಸ್.ಎಂ.ಕೃಷ್ಣ ಅವರ ಸಹೋದರ ಎಸ್.ಎಂ.ಶಂಕರ್ ಪುತ್ರ, ಜಿ.ಪಂ.ಮಾಜಿ ಅಧ್ಯಕ್ಷ ಗುರುಚರಣ್ ಸ್ವಪಕ್ಷದ ಬಿ.ಫಾರಂ ಪಡೆಯಲು ತಿಣುಕಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಅವರು ಮಾಡಿಕೊಂಡ ಸ್ವಯಂಕೃತ ತಪ್ಪುಗಳಿಂದಲೇ ಎಂಬುದು ರಾಜಕೀಯ ವಲಯಗಳಲ್ಲಿ ಚರ್ಚೆಯಾಗುತ್ತಿರುವ ಬಿಸಿ ಬಿಸಿ ಸುದ್ದಿ.

ದೊಡ್ಡಪ್ಪ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಪ್ರಭಾವಳಿ ಸದ್ಬಳಕೆ ಮಾಡಿಕೊಂಡು ಮದ್ದೂರು ಹಾಗೂ ಮಂಡ್ಯ ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ವಿಫುಲವಾಗಿ ಬೆಳೆಯುವ ಅವಕಾಶ ಗುರುಚರಣ್ ಗೆ ಲಭ್ಯವಿತ್ತು.
ಆದರೆ ಗುರುಚರಣ್ ತಮ್ಮ ರಾಜಕೀಯದ ಆರಂಭದ ದಿನದಿಂದಲೂ ‘ಗುರುಮನೆ’ / ಅರಮನೆ ಪ್ರಭಾವಳಿಯಿಂದ ಹೊರ ಬಂದು ಕ್ಷೇತ್ರದ ಜನರೊಂದಿಗೆ ಬೆರೆಯುವ ಪ್ರಯತ್ನ ಮಾಡಲಿಲ್ಲ, ಜಿ.ಪಂ. ಸದಸ್ಯ, ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದ ಗುರುಚರಣ್ ಅಂದಿನಿಂದಲೇ ಸಕ್ರಿಯರಾಗಿ ಜನಪರ ರಾಜಕಾರಣ ಮಾಡಿದ್ದರೆ ಅವರಿಂದು ಕಾಂಗ್ರೆಸ್ ಟಿಕೆಟ್ ಪಡೆಯಲು ಕಷ್ಟ ಪಡಬೇಕಿರಲಿಲ್ಲ.ಆರ್ಥಿಕ ಬಲ ಇರುವಾಗ ಜನ ಬೆಂಬಲಗಳಿಸುವುದು ಇವತ್ತಿನ ರಾಜಕಾರಣದಲ್ಲಿ ಅಸಾಧ್ಯವೇನಲ್ಲ.
ಮದ್ದೂರು ಕ್ಷೇತ್ರಕ್ಕೆ ಅಪರಿಚಿತನಾಗಿದ್ದ ಕದಲೂರು ಉದಯ್ ಹೆಸರು ಇಂದು ಕ್ಷೇತ್ರ ವ್ಯಾಪ್ತಿಯಲ್ಲಿ ಪರಿಚಿತವಾಗಿದ್ದು, ಸಾಮಾಜಿಕ ಕಾರ್ಯಕ್ರಮಗಳು ಹಾಗೂ ಆರ್ಥಿಕ ಬಲದಿಂದ ಕ್ಷೇತ್ರದಲ್ಲಿ ತಮ್ಮದೇ ಸಂಘಟನೆಯ ಛಾಪು ಮೂಡಿಸಿಕೊಳ್ಳುವಲ್ಲಿ ಉದಯ್ ಯಶಸ್ವಿಯಾಗಿದ್ದಾರೆ.
ಎಸ್.ಎಂ.ಕೃಷ್ಣ ಕುಟುಂಬದ ಮೇಲೆ ಜನರ ಒಲವು ಸಹಜವಾಗಿತ್ತು. ಇದನ್ನು ಬಳಸಿಕೊಂಡು ಕ್ಷೇತ್ರದಲ್ಲಿ ಗುರುಚರಣ್ ಇನ್ನಷ್ಟು ಪ್ರಬಲವಾಗಿ ಸಂಘಟನೆಗಿಳಿದಿದ್ದರೆ ಕ್ಷೇತ್ರದಲ್ಲಿ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸಬಹುದಿತ್ತು. ಆದರೆ ಪಕ್ಷ ಸಂಘಟನೆಯಲ್ಲಿ ಹಿಂದೆ ಬಿದ್ದ ಕಾರಣ ಕದಲೂರು ಉದಯ್ ಎಂಟ್ರಿಯಾಗ ಬೇಕಾಯಿತು ಈ ವೈಫಲ್ಯವೇ ಗುರುಚರಣ್ ಗೆ ಮುಳವಾಯಿತು ಎಂಬುವುದು ಹಲವು ಕಾಂಗ್ರೆಸ್ ಮುಖಂಡರ ನಿಲುವಾಗಿದೆ.
ಎರಡು ವರ್ಷಗಳ ಹಿಂದೆ ದಿಢೀರನೇ ಮದ್ದೂರು ರಾಜಕಾರಣಕ್ಕೆ ಕಾಲಿಟ್ಟ ಕದಲೂರು ಉದಯ್ ಇಂದು ಕಾಂಗ್ರೆಸ್ ಪಕ್ಷ ಸೇರಿ ಬಿ.ಫಾರಂ ಪಡೆಯಲು ಪರಿಗಣಿಸಲ್ಪಡುತ್ತಾರೆ ಎಂದರೆ,ರಾಜಕೀಯ,ಆರ್ಥಿಕ ಬಲ ಎಲ್ಲವೂ ಇದ್ದ ಗುರುಚರಣ್ ಅವರೇಕೆ ಪರಿಗಣಿಸಲ್ಪಡುವುದಿಲ್ಲ ಎನ್ನುವುದಕ್ಕೆ ಅವರು ಮಾಡಿಕೊಂಡ ಕೆಲವು ಸ್ವಯಂಕೃತ ತಪ್ಪುಗಳೇ ಕಾರಣ ಎಂಬ ಚರ್ಚೆ ಜಿಲ್ಲೆಯಲ್ಲಿ ಸಾಗಿದೆ.
ರಾಜಕಾರಣದಲ್ಲಿ ಪದೇ ಪದೇ ಅವಕಾಶಗಳು ಲಭ್ಯವಾಗುವುದಿಲ್ಲ ಎಂಬ ವ್ಯಾಖ್ಯಾನದಂತೆ ‘ಕೈ’ ಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಹ ಸ್ಥಿತಿ ಸದ್ಯದ ಮಟ್ಟಿಗೆ ಗುರುಚರಣ್ ಅವರದ್ದಾಗಿದೆ ಎನ್ನುವ ಮಾತುಗಳು ರಾಜಕೀಯ ಪಡೆಸಾಲೆಯಲ್ಲಿ ಕೇಳಿ ಬರುತ್ತಿವೆ.




