ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ ಮಾದೇಗೌಡರಿಗೆ ಆಯ್ಕೆಗೆ ಉತ್ತಮ ಅವಕಾಶವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಂಡ್ಯ ನಗರದ ಚಂದ್ರದರ್ಶನ್ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ದಕ್ಷಿಣ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡರ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಮಧು ಜಿ ಮಾದೇಗೌಡರಿಗೆ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವವಿದೆ.ಮಂಡ್ಯ, ಮೈಸೂರು,ಚಾಮರಾಜನಗರ,ಹಾಸನದಲ್ಲಿ ಹೋರಾಟಗಾರ ಜಿ. ಮಾದೇಗೌಡರ ಪುತ್ರ ಮಧು ಮಾದೇಗೌಡರ ಬಗ್ಗೆ ಚೆನ್ನಾಗಿ ಗೊತ್ತಿದ್ದು, ಕಾರ್ಯಕರ್ತರು ಪ್ರತಿ ಮನೆ ಮನೆಗೂ ತೆರಳಿ ಪದವೀಧರ ಮತದಾರರನ್ನು ಭೇಟಿಯಾಗಿ ಅವರ ಮನವೊಲಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿಸಬೇಕೆಂದು ಕರೆ ನೀಡಿದರು.
ಜೆಡಿಎಸ್ ಪಕ್ಷಕ್ಕೆಸೋಲುವ ಭಯ
ಕಳೆದ ಚುನಾವಣೆಯಲ್ಲಿ ಜೆಡಿಎಸ್ ನಿಂದ ಕೆ.ಟಿ. ಶ್ರೀಕಂಠೇಗೌಡ ಆಯ್ಕೆಯಾಗಿದ್ದರು.ಹಾಲಿ ಸದಸ್ಯರಾಗಿರುವ ಅವರಿಗೆ ವಯಸ್ಸು, ಆರೋಗ್ಯ ಎಲ್ಲವೂ ಇದ್ದರೂ ಈ ಬಾರಿ ಯಾಕೆ ನಿಲ್ಲಲಿಲ್ಲ?ಸೋಲುವ ಭಯದಿಂದಲೇ ಈ ಬಾರಿ ತಾವು ನಿಲ್ಲದೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ರಾಮು ಅವರನ್ನು ಮುಂದೆ ತಳ್ಳಿದ್ದಾರೆ. ಅಧಿಕಾರಕ್ಕಾಗಿ ಕಾಂಗ್ರೆಸ್-ಬಿಜೆಪಿ ಯಾರ ಜೊತೆಗಾದರೂ ಹೋಗುವ ಜೆಡಿಎಸ್ ಅಭ್ಯರ್ಥಿಗೆ ಮತ ನೀಡಬಾರದು ಎಂದರು.
ಭ್ರಷ್ಟ ಪಕ್ಷಕ್ಕೆ ಮತ ನೀಡಬೇಡಿ
ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಪ್ರತಿ ಕಾಮಗಾರಿಯಲ್ಲಿ 40 ಪರ್ಸೆಂಟ್ ಕಮಿಷನ್ ನೀಡಬೇಕೆಂದು ಗುತ್ತಿಗೆ ಸಂಘದ ಅಧ್ಯಕ್ಷರೇ ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ.ಇಂತಹ ಭ್ರಷ್ಟ ಸರ್ಕಾರ ಹಿಂದೆಂದೂ ಅಧಿಕಾರದಲ್ಲಿರಲಿಲ್ಲ ಎಂದು ಕಿಡಿಕಾರಿದರು.
ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಿಎಸ್ಟಿ,ನೋಟ್ ಬ್ಯಾನ್,ಲಾಕ್ಡೌನ್ ಮಾಡುವ ಮೂಲಕ ಸಣ್ಣಪುಟ್ಟ ಕೈಗಾರಿಕೆಗಳು ನಾಶ ಮಾಡಿತು.11 ಕೋಟಿ ಇದ್ದ ಉದ್ಯೋಗ 2.5 ಕೋಟಿಗೆ ಬಂದು ನಿಂತಿದೆ.ಅಚ್ಚೇ ದಿನ್ ಕೊಡುತ್ತೇನೆ ಎಂದ ನರೇಂದ್ರ ಮೋದಿ ಸರ್ಕಾರ 8 ವರ್ಷದಲ್ಲಿ ಇಡೀ ದೇಶದಲ್ಲಿ ಬಡವರು,ರೈತರ ಮಕ್ಕಳು ಬದುಕದಂತೆ ಮಾಡಿದೆ ಎಂದರು.
ಸಬ್ ಇನ್ಸ್ ಪೆಕ್ಟರ್ ನೇಮಕಾತಿಯಲ್ಲಿ ಬಿಜೆಪಿ ಸರ್ಕಾರವೇ ಶಾಮೀಲಾಗಿದೆ. ಮಂತ್ರಿಗಳು ಹಾಗೂ ಭ್ರಷ್ಟ ಅಧಿಕಾರಿಗಳು ಕೈಜೋಡಿಸಿ ಒಂದು ಹುದ್ದೆಗೆ 90 ಲಕ್ಷದಿಂದ ಒಂದು ಕೋಟಿ ರೂಪಾಯಿ ವಸೂಲಿ ಮಾಡಿದ್ದಾರೆ.
ಒಂದು ಕೋಟಿಗೆ ಉದ್ಯೋಗ ಮಾರಿಕೊಳ್ಳುವ ಮೂಲಕ ಬಡವರು, ರೈತರ ಮಕ್ಕಳಿಗೆ ಸರ್ಕಾರಿ ಕೆಲಸ ಸಿಗದಂತೆ ಮಾಡಿದೆ. ಪ್ರತಿಯೊಂದು ಇಲಾಖೆಯಲ್ಲಿಯೂ ಲಂಚ ತಾಂಡವಾಡುತ್ತಿದೆ.
ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಪೆಟ್ರೋಲ್ ಬೆಲೆ 68 ರೂಪಾಯಿ ಡೀಸೆಲ್ ಬೆಲೆ 44 ರೂಪಾಯಿ ಇತ್ತು. ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕಡಿಮೆಯಿದ್ದರೂ ಪೆಟ್ರೋಲ್ 110 ರೂಪಾಯಿ,ಡೀಸೆಲ್ 96ರೂಪಾಯಿ ಆಗಲು ಬಿಜೆಪಿಯವರೇ ಕಾರಣ.
ಯುಪಿಎ ಸರ್ಕಾರವಿದ್ದಾಗ ಗ್ಯಾಸ್ ಬೆಲೆ 414 ರೂಪಾಯಿ ಇತ್ತು. ಈಗ ಗ್ಯಾಸ್ ಬೆಲೆ 1050 ರೂಪಾಯಿ ಆಗಿರುವುದಕ್ಕೆ ಯಾರು ಕಾರಣರು ಎಂದು ಜನರು ಮನಗಾಣಬೇಕು ಎಂದರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆಂದು ನರೇಂದ್ರಮೋದಿಯವರು ಎಂಟು ವರ್ಷದಲ್ಲಿ 16 ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಕೆಲಸ ಕೇಳಿದರೆ ಪಕೋಡ ಬೋಂಡಾ ಮಾರಿ ಎನ್ನುವ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಡಿ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಿದೆ ಎಂದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ದೇಶದಲ್ಲಿ ಇಂದು ಸಾಕ್ಷರತೆ ಪ್ರಮಾಣ ಶೇ. 75 ರಿಂದ 78ರವರೆಗೆ ಇದೆಯೆಂದರೆ ಅದಕ್ಕೆ ಕಾಂಗ್ರೆಸ್ ಕಾರಣ. ರೈಟ್ ಟು ಎಜುಕೇಶನ್(ಆರ್ ಟಿಇ) ಮೂಲಕ ಈ ದೇಶದ ಗ್ರಾಮೀಣ ಪ್ರದೇಶದ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಬೇಕು ಎಂದು ಕಾನೂನು ರೂಪಿಸಿದ್ದು ಕಾಂಗ್ರೆಸ್ ಸರ್ಕಾರ.
ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಪದವೀಧರ ಮತದಾರರು ಕಾಂಗ್ರೆಸ್ ಪಕ್ಷದ ಮಧು ಮಾದೇಗೌಡರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್,ಮಾಜಿ ಸಂಸದ ಧ್ರುವನಾರಾಯಣ್,ಮಾಜಿ ಸಚಿವರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಆತ್ಮಾನಂದ, ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್,ಬಿ.ಪ್ರಕಾಶ್,ರಮೇಶ್ ಬಾಬು ಬಂಡಿಸಿದ್ದೇಗೌಡ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳೀಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್,ಮಹಿಳಾ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಕಾಂಗ್ರೆಸ್ ಮುಖಂಡರಾದ ದಡದಪುರ ಶಿವಣ್ಣ, ಡಾ. ಕೃಷ್ಣ, ವಿಜಯ್ ರಾಮೇಗೌಡ,ಗಣಿಗ ರವಿಕುಮಾರ್ ಸೇರಿದಂತೆ ಹಲವರಿದ್ದರು.