ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಒಂದು ಕುಟುಂಬದ ಹಿಡಿತದಲ್ಲಿದ್ದರೆ,40 ವರ್ಷಗಳಿಂದ ಜೆಡಿಎಸ್ ಮತ್ತೊಂದು ಕುಟುಂಬದ ಹಿಡಿತದಲ್ಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಂಗ್ಯವಾಡಿದರು.
ಮದ್ದೂರಿನಲ್ಲಿ ಬಿಜೆಪಿ ಮುಖಂಡ, ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಏರ್ಪಡಿಸಿದ್ದ ಬೃಹತ್ ಆರೋಗ್ಯ ಮೇಳ ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಜೆಪಿಯದ್ದು ಕುಟುಂಬ ರಾಜಕಾರಣ ಅಲ್ಲವಾ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪಕ್ಷದ ನಿರ್ಣಯ ಕುಟುಂಬದ ಮೂಲಕ ಆಗಲ್ಲ. ನಮ್ಮ ಪಕ್ಷದ ಅಧ್ಯಕ್ಷರು ಕುಟುಂಬದ ಮೂಲಕ ಆಗಲ್ಲ. ಪಕ್ಷದ ಕಾರ್ಯಕರ್ತರು ಅಧ್ಯಕ್ಷರಾಗುತ್ತಾರೆ. ನಮ್ಮ ಪಕ್ಷಕ್ಕೂ ಅವರ ಪಕ್ಷಕ್ಕೂ ಹೋಲಿಕೆ ಮಾಡಿ ನೋಡಲಿ ಎಂದರು.
ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಗಳಿಗೆ ನಮ್ಮ ಪಕ್ಷ ಬೆಂಬಲ ಕೊಡುತ್ತೆ. ದುರ್ಬಲ ಇರೋ ಕ್ಷೇತ್ರದಲ್ಲಿ ಬದಲಾವಣೆ ಮಾಡಲಾಗುತ್ತೆ. ಸಾಮರ್ಥ್ಯ ಇದ್ದವರು ಎಲ್ಲಿದ್ರು ಯಶಸ್ವಿ ಆಗುತ್ತಾರೆ ಎಂದರು.
ಸಿಎಂ ಬದಲಾವಣೆ ಮಾಡುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗಡ ಪ್ರತಿಕ್ರಿಯಿಸಿ, ನಮ್ಮ ಪಕ್ಷಕ್ಕೆ ಸೇರಿದರೆ ಮಾತ್ರ ನಮ್ಮ ಪಕ್ಷದ ವಿಚಾರ ಮಾತನಾಡಲು ಅರ್ಹತೆ ಬರುತ್ತೆ. ಅವರು ಯಾವಾಗ ನಮ್ಮ ಪಕ್ಷ ಸೇರುತ್ತಾರೆ ಅಂತ ಮೊದಲು ಹೇಳಲಿ ಎಂದು ಟಾಂಗ್ ನೀಡಿದರು.
ಸಿದ್ದರಾಮಯ್ಯನವರು ಯಾವಾಗ ಭವಿಷ್ಯ ಹೇಳೋಕೆ ಶುರು ಮಾಡಿದ್ರು. ಅವರ ಭವಿಷ್ಯದ ಬಗ್ಗೆ ಅವರಿಗೆ ಗ್ಯಾರಂಟಿ ಇಲ್ಲ. ನಾನೇ ಮುಖ್ಯಮಂತ್ರಿ ಆಗ್ತಿನಿ ಅಂದ್ರು.
ಮೋದಿ ಅಪ್ಪನಾಣೆ ಪ್ರಧಾನಿ ಆಗಲ್ಲ ಅಂದ್ರು. ಆದ್ರೆ ಎರಡು ಬಾರಿ ಪ್ರಧಾನಿಯಾದ್ರು. ಅವರು ಹೇಳೋದೆಲ್ಲ ಸುಳ್ಳು. ಸಿದ್ದರಾಮಯ್ಯ ಹೇಳಿರೋದೆಲ್ಲ ಉಲ್ಟಾ ಆಗಿದೆ ಎಂದರು. ಲೋಕಸಭೆಯಲ್ಲಿ ಬಿಜೆಪಿಗೆ ಒಂದು ಸೀಟು ಬರಲ್ಲ ಅಂದ್ರು. ಅವರಿಗೆ ಬಂದಿದ್ದು ಒಂದು ಸ್ಥಾನ. ನಮಗೆ 25 ಸ್ಥಾನ ಬಂತು ಎಂದು ವ್ಯಂಗ್ಯವಾಡಿದರು.
ಮಂಡ್ಯ ಮತ್ತು ಹಳೇ ಮೈಸೂರು ಭಾಗದಿಂದ ಘಟಾನುಘಟಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸೇರಲಿದ್ದಾರೆ. ಈ ಭಾಗದಲ್ಲೂ ಹೆಚ್ಚಿನ ಸ್ಥಾನಗಳು ಲಭಿಸಲಿದೆ ಎಂದರು.
ಇದನ್ನು ಓದಿ:ಬಿ ಟೀಂ ಕಾಂಗ್ರೇಸ್ ಆರೋಪಕ್ಕೆ ಹೆಚ್. ಡಿ. ದೇವೇಗೌಡ ತಿರುಗೇಟು