ನಾಗಮಂಗಲ ಪುರಸಭಾ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪ್ರತಿನಿಧಿಸುತ್ತಿರುವ ಸದಸ್ಯರ ವಾರ್ಡ್ ಗಳಿಗೆ ನಗರೋತ್ಥಾನ ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯವಾಗಿಲ್ಲ ಎಂದು ಪುರಸಭಾ ಅಧ್ಯಕ್ಷೆ ಆಶಾ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸದಸ್ಯರೂ ಪ್ರತಿನಿಧಿಸುತ್ತಿರುವ ವಾರ್ಡ್ ಗಳಿಗೆ ನಗರೋತ್ಥಾನ ಯೋಜನೆಯಡಿ ಬಂದಿರುವ ಹಣವನ್ನು ಹಂಚಿಕೆ ಮಾಡಿದ್ದೇವೆ.
ಕಾಂಗ್ರೆಸ್ ಸದಸ್ಯರು ಪ್ರತಿನಿಧಿಸುತ್ತಿರುವ ವಾರ್ಡ್ ನಂ.5,11,22ನೇ ವಾರ್ಡ್ ನಲ್ಲಿ ಅಲ್ಲಿಯ ಸಮಸ್ಯೆಗಳಿಗೆ ಅನುಗುಣವಾಗಿ ಅನುದಾನ ನೀಡಲಾಗಿದೆ. ಶಾಸಕ ಸುರೇಶ್ ಗೌಡರು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಕಳೆದ ಎರಡು ದಿನಗಳಿಂದ ಕಾಂಗ್ರೆಸ್ ಸದಸ್ಯರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಚನ್ನಪ್ಪ ಮಾತನಾಡಿ, ಪುರಸಭೆ ವ್ಯಾಪ್ತಿಯ 23 ವಾರ್ಡುಗಳಲ್ಲಿ ಹೊಸದಾಗಿ ರಚಿತವಾಗಿರುವ 7 ವಾರ್ಡ್ ಗಳಿಗೆ ಅಭಿವೃದ್ಧಿಯ ದೃಷ್ಠಿಯಿಂದ ಸ್ವಲ್ಪ ಹೆಚ್ಚಿನ ಅನುದಾನ ನೀಡಲಾಗಿದೆ. ಪುರಸಭೆಯ ವ್ಯಾಪ್ತಿಯಲ್ಲಿ ಹೊಸದಾಗಿ ರಚಿತವಾಗಿರುವ 7 ವಾರ್ಡ್ಗಳಲ್ಲಿ ಮೂರು ಮಂದಿ ಕಾಂಗ್ರೆಸ್ ಸದಸ್ಯರಿದ್ದು, ಅವರ ವಾರ್ಡ್ಗಳಿಗೆ ಅನುದಾನ ನೀಡಲಾಗಿದೆ.
ಗ್ರಾಮ ಪಂಚಾಯಿತಿಯಿAದ ಪುರಸಭೆಗೆ ವರ್ಗಾವಣೆಗೊಂಡಿರುವ ವಾರ್ಡ್ಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಅನುದಾನದಲ್ಲಿ ಹಂಚಿಕೆ ಹೆಚ್ಚಿಗೆ ನೀಡಲಾಗಿದೆಯೇ ಹೊರತು ಇದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲ ಎಂದರು.
ಸದಸ್ಯ ಶಂಕರಲಿಂಗೇಗೌಡ ಮಾತನಾಡಿ, ಅಭಿವೃದ್ಧಿಯ ವಿಚಾರದಲ್ಲಿ ಶಾಸಕ ಸುರೇಶ್‌ಗೌಡರವರು ಪಕ್ಷಾತೀತವಾಗಿ ಕೆಲಸ ನಿರ್ವಹಿಸಿದ್ದಾರೆ. ಬೇಜವಾಬ್ದಾರಿ ವ್ಯಕ್ತಿಗಳ ಹೇಳಿಕೆಯ ಮಾತುಗಳನ್ನು ಕೇಳಿಕೊಂಡು ಕಾಂಗ್ರೆಸ್ ಸದಸ್ಯರು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಖಂಡನೀಯ. ಸತ್ಯಾಂಶ ತಿಳಿಯದೆ ಶಾಸಕರ ಮೇಲೆ ದೂರುವುದು ಸರಿಯಲ್ಲ. ಅನುದಾನವನ್ನು ತಾರತಮ್ಯವಿಲ್ಲದೆ ಹಂಚಲಾಗಿದೆ ಎಂದರು.
ಕಾಂಗ್ರೆಸ್ ಸದಸ್ಯರು ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಮತ್ತು ಶಾಸಕರನ್ನು ಏಕವಚನದಲ್ಲಿ ನಿಂದಿಸಿ ಮಾತನಾಡುವುದನ್ನು ಮುಂದುವರೆಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಪುರಸಭೆಯ ಜೆಡಿಎಸ್ ಸದಸ್ಯರು ಇದ್ದರು.