ವರದಿ : ಪ್ರಭು
ಕಾಂಗ್ರೆಸ್ ಪಕ್ಷಕ್ಕೆ ಯಾರೇ ಸೇರ್ಪಡೆಗೊಂಡರು ಸ್ವಾಗತ ಮಾಡುವುದಾಗಿ ಕೆಪಿಸಿಸಿ ಸದಸ್ಯ ಎಸ್ ಗುರುಚರಣ್ ತಿಳಿಸಿದರು.
ಮದ್ದೂರು ತಾಲೂಕಿನ ಸೋಮನಹಳ್ಳಿಯ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜ ಸೇವಕ ಕದಲೂರು ಉದಯ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಬಗ್ಗೆ ತಮಗೆ ಮಾಹಿತಿ ಇಲ್ಲ, ಸಾಮಾನ್ಯ ಕಾರ್ಯಕರ್ತರಂತೆ ಬಂದು ಪಕ್ಷ ಸಂಘಟನೆಗೆ ಯಾರೇ ಬಂದು ಸೇರ್ಪಡೆಗೊಂಡರು ತಾವು ಸ್ವಾಗತ ಮಾಡುವುದಾಗಿ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜಿಲ್ಲಾ ನಾಯಕರಾದ ಎನ್ ಚೆಲುವರಾಯಸ್ವಾಮಿ, ಸ್ಥಳೀಯ ಶಾಸಕರಾದ ಮಧು ಜಿ ಮಾದೇಗೌಡ, ದಿನೇಶ್ ಗೂಳಿಗೌಡ, ಅವರ ಅಭಿಪ್ರಾಯವನ್ನು ಪಡೆದು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ ಅವರು, ನೂರಾರು ವರ್ಷದ ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತರಾಗಿ ಯಾರೇ ಬಂದರೂ ನಾವು ಸೇರಿಸಿಕೊಳ್ಳುವುದಾಗಿ ಹೇಳಿದರು.
ಪಕ್ಷದ ವರಿಷ್ಠರ ಆದೇಶದಂತೆ ಕಾಂಗ್ರೆಸ್ ಪಕ್ಷದ ಭರವಸೆಯ ಕಾರ್ಡ್ ಪ್ರತಿ ಮನೆಗೆ ಹಂಚಿಕೆ ಮಾಡುವ ಸಂಬಂಧ ಕಾರ್ಯಯೋಜನೆ ರೂಪಿಸುತ್ತಿದ್ದು ಸ್ಥಾನಮಾನಗಳ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲವೆಂದರು. ಪಕ್ಷದ ವರಿಷ್ಟ ನಾಯಕರು, ಏನು ಆದೇಶ ನೀಡುತ್ತಾರೋ ಅದರಂತೆ ನಡೆದುಕೊಳ್ಳುವುದು ನಮ್ಮ ಕರ್ತವ್ಯ., ಅಭ್ಯರ್ಥಿ ವಿಚಾರದಲ್ಲಿ ಯಾವುದೇ ರೀತಿಯ ಚರ್ಚೆ ನಡೆದಿಲ್ಲವೆಂದರು.
ಮೈಸೂರಿನಲ್ಲಿ ನಡೆದ ಸಭೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಚರ್ಚೆ ನಡೆದಿದೆಯೇ ಹೊರತು, ಅಭ್ಯರ್ಥಿ ಆಯ್ಕೆ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲೇ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರೇ ನನ್ನನ್ನು ಅಭ್ಯರ್ಥಿಯೆಂದು ತೀರ್ಮಾನ ಮಾಡಿದ್ದು, ಈ ಸಂಬಂಧ ಕಳೆದ ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ಹಲವಾರು ಕಾರ್ಯತಂತ್ರಗಳನ್ನು ರೂಪಿಸುತ್ತಿರುವುದಾಗಿ ಹೇಳಿದರು.




