Thursday, September 19, 2024

ಪ್ರಾಯೋಗಿಕ ಆವೃತ್ತಿ

ಅದಾನಿ ಸಮೂಹ LIC – SBIಗಳನ್ನು ಹಾಳುಗೆಡವಲು ಕೇಂದ್ರದ ಸಹಕಾರ : ಕಾಂಗ್ರೆಸ್ ಪ್ರತಿಭಟನೆ

ದೇಶದ ಮಧ್ಯಮ ವರ್ಗದವರೆ ಹೆಚ್ಚಿನ ಪ್ರಮಾಣದಲ್ಲಿ ನೆಚ್ಚಿಕೊಂಡಿರುವ  ಭಾರತೀಯ ಜೀವ ವಿಮಾ ನಿಗಮ (LIC) ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗಳನ್ನು ಹಾಳುಗೆಡವಲು ಅದಾನಿ ಸಮೂಹಕ್ಕೆ ಕೇಂದ್ರದ ಬಿಜೆಪಿ ಸರ್ಕಾರವು ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿ ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಎಲ್ಐಸಿ ಹಾಗೂ ಎಸ್ ಬಿ ಐ ಬ್ಯಾಂಕಿನ ಎದುರು ಪ್ರತಿಭಟನೆ ನಡೆಸಿದರು.

ಮಂಡ್ಯ ಕಾಂಗ್ರೆಸ್ ಕಚೇರಿ ಬಳಿ ಜಮಾವಣೆಗೊಂಡ ಕಾರ್ಯಕರ್ತರು, ನಂತರ ಜೀವ ವಿಮಾ ನಿಗಮದ ಬಳಿ ತೆರಳಿ ಪ್ರತಿಭಟನೆ ನಡೆಸಿ, ತರುವಾಯ ಎಸ್ ಬಿಐ ಕಚೇರಿಗೆ ತೆರಳಿ ಅಲ್ಲಿಯೂ ಪ್ರತಿಭಟಿಸಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

nudikarnataka.com

ಎಲ್ ಐಸಿ ಮತ್ತು ಎಸ್ ಬಿಐ ನಲ್ಲಿ ಸಾರ್ವಜನಿಕರು ತಮ್ಮ ಹಣವನ್ನು ಹೂಡಿದ್ದಾರೆ. ಆದರೆ ಆ ಹಣವನ್ನು ಷೇರಿನಲ್ಲಿ ಹೂಡಿಕೆ ಮಾಡಲಾಗಿದ್ದು ಇದಕ್ಕೆ ಕೇಂದ್ರ ಸರ್ಕಾರ ಅದಾನಿಗೆ ಸಹಕಾರ ನೀಡಿದೆ. ಎಸ್ ಬಿ ಐ ನಿಂದ ಅಪಾರ ಪ್ರಮಾಣದಲ್ಲಿ ಅದಾನಿ ಸಮೂಹಕ್ಕೆ ಅಕ್ರಮವಾಗಿ ಸಾಲವನ್ನು ನೀಡಲಾಗಿದೆ. ಇದು ಸರ್ಕಾರಿ ಸ್ವಾಮ್ಯದಲ್ಲಿರುವ ಒಂದು ದೊಡ್ಡ ಬ್ಯಾಂಕೊಂದನ್ನು ಹಾಳು ಮಾಡುವ ಕುತಂತ್ರವಾಗಿದೆ ಎಂದು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಿಂಡನ್ ಬರ್ಗ್ ವರದಿಯ ನಂತರ ಷೇರು ಪೇಟೆಯಲ್ಲಿ ತಲ್ಲಣವಾಗಿದ್ದು ಷೇರಿನಲ್ಲಿ ಅದಾನಿ ಗ್ರೂಪ್ ಸಾವಿರಾರು ಕೋಟಿ ರೂ. ನಷ್ಟ ಅನುಭವಿಸಿದೆ. ಈ ಹಣದಲ್ಲಿ ಸಾರ್ವಜನಿಕರು ಹೂಡಿರುವ ಹಣವೂ ಸೇರಿದೆ. ಆದರೆ ಈ ಹಣಕ್ಕೆ ಕೇಂದ್ರ ಸರ್ಕಾರ ಯಾವುದೇ ರಕ್ಷಣೆಯನ್ನು ನೀಡುತ್ತಿಲ್ಲ. ಜನರು ಕಷ್ಟಪಟ್ಟು ದುಡಿದು ಈ ಸಂಸ್ಥೆಗಳಲ್ಲಿ ತೊಡಗಿಸಿರುವ ಹಣವನ್ನು ರಕ್ಷಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ನಗರಸಭಾ ಸದಸ್ಯರಾದ ಟಿ.ಕೆ.ರಾಮಲಿಂಗು, ಶ್ರೀಧರ್, ನಯೀಂ, ಡಾ.ರವೀಂದ್ರ, ಕೆ.ಸಿ.ಪ್ರಶಾಂತ್ ಬಾಬು, ವಿಜಯ್ ಕುಮಾರ್, ಅಂಜನಾ ಶ್ರೀಕಾಂತ್, ಸಿ.ಎಂ.ದ್ಯಾವಪ್ಪ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!