Thursday, September 19, 2024

ಪ್ರಾಯೋಗಿಕ ಆವೃತ್ತಿ

ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಅಗತ್ಯ : ಸಿ.ಎಂ.ಚಂಚಲ

ಇತ್ತೀಚಿನ ದಿನಗಳಲ್ಲಿ ಗ್ರಾಹಕರು ವಂಚನೆಗೊಳಗಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದರೂ, ಪ್ರಶ್ನಿಸಿ ಪ್ರಕರಣ ದಾಖಲಿಸುವುದು ಮಾತ್ರ ವಿರಳ. ಇದಕ್ಕೆ ಅರಿವಿನ ಕೊರತೆಯೇ ಕಾರಣಗಿದ್ದು, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಅಗತ್ಯವೆಂದು ಮಂಡ್ಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷರಾದ ಸಿ.ಎಂ.ಚಂಚಲ ಹೇಳಿದರು.

ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಅಕ್ಷಯನಿಕೇತನ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಇವರ ವತಿಯಿಂದ ಮಂಡ್ಯನಗರದ ಕ್ಷೇತ್ರ ಸಂಪನ್ಮೂಲ ಕಚೇರಿ ಆವರಣದಲ್ಲಿ ನಡೆದ ಗ್ರಾಹಕರ ಕ್ಲಬ್ ರಚನೆ ಹಾಗೂ ಕಾರ‍್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನಿನ ಅಡಿಯಲ್ಲಿ ಗ್ರಾಹಕರಿಗೆ ಇರುವ ಹಕ್ಕುಗಳು ಮತ್ತು ಸೌಲಭ್ಯಗಳ ಬಗ್ಗೆ ಜನರಿಗೆ ಮಾಹಿತಿ ಕೊರತೆ ಇದೆ. ಇದನ್ನು ಎನ್‌ಜಿಓಗಳು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ‍್ಯಕ್ರಮಗಳನ್ನು ಆಯೋಜಿಸುವುದು ಅಗತ್ಯ.
ನಿತ್ಯದ ಬದುಕಿನಲ್ಲಿ ನಾವು ಒಂದಲ್ಲ, ಒಂದು ವಸ್ತುಗಳನ್ನು ಖರೀದಿ ಮಾಡುತ್ತೇವೆ, ಸೇವೆಯನ್ನೂ ಪಡೆಯುತ್ತೇವೆ. ಇದರಲ್ಲಿ ಲೋಪಗಳು ಉಂಟಾದಾಗ ನಾವು ನೀಡಿದ ಹಣ ವ್ಯರ್ಥವಾಗುತ್ತದೆ. ಇಂತಹ ಘಟನೆಗಳಿಂದಾಗಿ ಗ್ರಾಹಕರಿಗೆ ಅನ್ಯಾಯವಾಗುತ್ತದೆ. ಇದನ್ನು ಪ್ರಶ್ನಿಸಿ ಗ್ರಾಹಕರ ವೇದಿಕೆಯಲ್ಲಿ ಪ್ರಕರಣ ದಾಖಲು ಮಾಡಿದಾಗ ಅದಕ್ಕೆ ತಕ್ಕ ಪರಿಹಾರ ಪಡೆಯಲು ಸಾಧ್ಯ ಎಂದು ಸಲಹೆ ನೀಡಿದರು.

ನಿತ್ಯದ ಬಳಕೆ ವಸ್ತುಗಳನ್ನು ಕೊಳ್ಳುವಾಗ ವರ್ತಕ ಅಥವಾ ಅದರ ಪ್ರತಿನಿಧಿ ಸಮರ್ಪಕ ಮಾಹಿತಿ ನೀಡುವುದಿಲ್ಲ. ಗರಿಷ್ಠ ದರಕ್ಕಿಂತ ಹೆಚ್ಚಿನ ಹಣ ಪಡೆಯುವುದು, ತೂಕದಲ್ಲಿ ಮೋಸ ಮಾಡುವುದು. ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿ ಅದರ ವ್ಯಾರಂಟಿ ಅವಧಿಯಲ್ಲಿ ಲೋಪಗಳು ಉಂಟಾದಾಗ ಅದನ್ನು ವಾಪಸ್ಸು ಪಡೆದು ತಕ್ಕ ಹಣವನ್ನು ಪಾವತಿಸದಿದ್ದರೆ, ಅಂತಹ ವರ್ತಕ, ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿ ಪರಿಹಾರವನ್ನು ಪಡೆಯಲು ಸಾಧ್ಯವಿದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಟಿ.ಚಂದ್ರಕಲಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ಎನ್.ಶ್ರೀನಿವಾಸ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎನ್.ಉಮೇಶ್, ಎಂ.ರೇಣುಕ, ಅಕ್ಷಯ ನಿಕೇತನ ಸಂಸ್ಥೆಯ ಸೂನಗಹಳ್ಳಿ ಪುಟ್ಟಸ್ವಾಮಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!