Thursday, September 19, 2024

ಪ್ರಾಯೋಗಿಕ ಆವೃತ್ತಿ

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ: ಸಿಬಿಐ ತನಿಖೆಗೆ ಒತ್ತಾಯ

ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕು. ಅವರು ನಡೆಸಿರುವ 108 ಕಾಮಗಾರಿಗಳ 4ಕೋಟಿ ರೂ ತಕ್ಷಣ ಬಿಡುಗಡೆ ಮಾಡಬೇಕೆಂದು ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ನೃಪತುಂಗ ಒತ್ತಾಯಿಸಿದರು.

ಮಂಡ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,ಸಂತೋಷ್ ಪಾಟೀಲ ಅವರು ಬೆಳಗಾವಿ ಜಿಲ್ಲೆ, ಹಿಂಡಲಗಾದಲ್ಲಿ ಕಾಮಗಾರಿ ಪೂರ್ಣಗೊಳಿಸಿ 2 ವರ್ಷಗಳಾಗಿವೆ. ಕಾಮಗಾರಿ ಹಣ ಬಿಡುಗಡೆ ಮಾಡಲು ಶೇ.40ರಷ್ಟು ಕಮಿಷನ್ ಕೇಳಲಾಗುತ್ತಿದೆ. ಎಂದು ಅವರು ಮೊದಲೇ ಆರೋಪ ಮಾಡಿದ್ದರು.ಸಾವಿಗೆ ಸಚಿವ ಈಶ್ವರಪ್ಪ ಅವರೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಹೀಗಾಗಿ ಪ್ರಕರಣವನ್ನು ಸಿಬಿಐ ಅಥವಾ ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಸಂತೋಷ್ ಅವರು ದೆಹಲಿಗೆ ತೆರಳಿ ಪ್ರಧಾನಿ ಮೋದಿ, ಬಿಜೆಪಿ ವರಿಷ್ಠ ಅಮಿತ್ ಅವರಿಗೂ ದೂರು ನೀಡಿದ್ದರೂ ಅವರು ಸಂತೋಷ್ ಸಹಾಯಕ್ಕೆ ಧಾವಿಸಲಿಲ್ಲ. ಬಿಜೆಪಿ ಸರ್ಕಾರ ತಮ್ಮದೇ ಪಕ್ಷದ ಕಾರ್ಯಕರ್ತನ ನೆರವಿಗೆ ಬರುವಲ್ಲಿ ವಿಫಲವಾಗಿದೆ. ಸಚಿವ ಈಶ್ವರಪ್ಪಅವರು ಸಂತೋಷ್ ಆತ್ಮಹತ್ಯೆ ತಡೆದಿಲ್ಲ. ಸಚಿವರು ಅವರ ಸಮಸ್ಯೆ ಆಲಿಸಿದ್ದರೆ ಒಂದು ಅಮೂಲ್ಯ ಜೀವ ಉಳಿಯುತ್ತಿತ್ತು. ಸರ್ಕಾರ ಈಗಲೂ ಸಂತೋಷ್ ಕುಟುಂಬದ ನೆರವಿಗೆ ಬರಬೇಕು. ಕೂಡಲೇ ಅವರು ಮಾಡಿರುವ ಕಾಮಗಾರಿ ಬಿಲ್ ಹಣ 4 ಕೋಟಿ ರೂ ಮಂಜೂರು ಮಾಡಬೇಕು.ಅವರ ಕುಟುಂಬಕ್ಕೆ 2ಕೋಟಿ ಹಣ ಪರಿಹಾರ ನೀಡಬೇಕು. ಇಲ್ಲದಿದ್ದರೆ ನಮ್ಮ ಸಂಘಟನೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.

ಸಂತೋಷ್ ಅವರು ಕಾರ್ಯಾದೇಶವಿಲ್ಲದೆ ಕಾಮಗಾರಿ ನಡೆಸಿರುವುದು ಸಮಂಜಸವಲ್ಲ ನಿಜ. ಆದರೆ, ಸಚಿವರು ಮನಸ್ಸು ಮಾಡಿದ್ದರೆ ಅವರ ಜೀವ ಉಳಿಸಬಹುದಾಗಿತ್ತು. ಇಲಾಖೆ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಪ್ರಧಾನ ಕಾರ್ಯದರ್ಶಿ, ಮುಖ್ಯ ಎಂಜಿನಿಯರ್, ಅಧೀಕ್ಷಕ ಎಂಜಿನಿಯರ್, ಕಾರ್ಯಪಾಲಕ ಎಂಜಿನಿಯರ್‌, ಸಹಾಯಕ ಕಾರ್ಯ ಪಾಲಕ ಎಂಜಿನಿಯರ್, ಕಿರಿಯ ಎಂಜಿನಿಯರ್‌ಗಳ ಈ ಪ್ರಕರಣದಲ್ಲಿ ಆರೋಪಿಗಳು ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.ಸರ್ಕಾರಗಳು ನಿರಂತರವಾಗಿ ಗುತ್ತಿಗೆದಾರರನ್ನು ಶೋಷಣೆ ಮಾಡುತ್ತಿದ್ದಾರೆ.ಐದಾರು ವರ್ಷಗಳಿಂದೀಚೆಗೆ ಭ್ರಷ್ಟಾಚಾರ, ಲಂಚದ ಪ್ರಮಾಣ ಮಿತಿ ಮೀರಿದೆ.ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕಿದೆ ಎಂದರು.

ಮಧ್ಯವರ್ತಿಯಿಂದ ಹಣ ವಸೂಲಿ: ಕೆ.ಎಸ್.ಈಶ್ವರಪ್ಪ ಅವರಿಗೆ ಆಪ್ತರಾಗಿರುವ ಮಧ್ಯವರ್ತಿಯೊಬ್ಬರು ಮಂಡ್ಯ ಜಿಲ್ಲೆಯಲ್ಲಿ ಗುತ್ತಿಗೆದಾರರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ನಿವೃತ್ತ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರ ಪುತ್ರರನಾಗಿರುವ ಮಧ್ಯವರ್ತಿ ಕಾಮಗಾರಿ ಕರಾರು ಸಮಯದಲ್ಲೇ ಶೇ. 30ರಷ್ಟು ಕಮಿಷನ್ ವಸೂಲಿ ಮಾಡುತ್ತಿದ್ದಾರೆ’ ಎಂದು ನೃಪತುಂಗ ಆರೋಪಿಸಿದರು.

‘ಕಾಮಗಾರಿಗಳಿಗೆ ಬಿಲ್ ಪಾವತಿ ಮಾಡಲು ಜೇಷ್ಠತೆ ನಿಯಮ ಅನುಸರಿಸಬೇಕು ಎಂದು ಹೈಕೋರ್ಟ್ ಆದೇಶವಿದೆ. ಆದರೆ ಅಧಿಕಾರಿಗಳು ಮಧ್ಯವರ್ತಿಗಳ ಮಾತು ಕೇಳಿ ಬೇಕಾದವರಿಗೆ ಬಿಲ್ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.ಹಿಂದೆಂದೂ ಈ ಪ್ರಮಾಣದಲ್ಲಿ ಭ್ರಷ್ಟಚಾರ ನಡೆಯುತ್ತಿರಲಿಲ್ಲ. ಈಗ 40 ಪರ್ಸೆಂಟ್ ಕಮಿಷನ್ ನೀಡಬೇಕಿದೆ. ಇದರಿಂದ ಗುತ್ತಿಗೆದಾರರು ಮನೆ-ಮಠ ಮಾರಿಕೊಳ್ಳುವ ದುಸ್ಥಿತಿ ಒದಗಿದೆ. ಹಲವು ಗುತ್ತಿಗೆದಾರರು ಸಾಲ ಮಾಡಿಕೊಂಡು ನಷ್ಟ ಅನುಭವಿಸುತ್ತಿದ್ದಾರೆ ಎಂದು ನೋವು ತೋಡಿಕೊಂಡರು.
ಬಿಐಎ ಪ್ರಧಾನ ಕಾರ್ಯದರ್ಶಿ ರವೀಂದ್ರ,ಗುತ್ತಿಗೆದಾರರಾದ ತಮ್ಮಣ್ಣ, ಯತಿರಾಜ್,ಶರತ್,ರಾಮಲಿಂಗಯ್ಯ ಮತ್ತಿತರರಿದ್ದರು.

ಇದನ್ನೂ ಓದಿ: ಮಂಡ್ಯದಲ್ಲಿ 700 ಕೋಟಿ ಕಾಮಗಾರಿಗಳ ಬಿಲ್ ಬಾಕಿ

Related Articles

ಅತ್ಯಂತ ಜನಪ್ರಿಯ

error: Content is protected !!