ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಟಿಕೆಟ್ ವಂಚಿತ, ಸ್ವಾಭಿಮಾನಿ ಪಡೆ ಅಭ್ಯರ್ಥಿ ಕೆ.ಎಸ್.ವಿಜಯ್ ಆನಂದ್ ಪರವಾಗಿ ಚುನಾವಣಾ ಪ್ರಚಾರ ನಡೆಸಲು ಸಕ್ಕರೆ ನಗರದಲ್ಲಿ ಮೇ 7ರಂದು ಸ್ವಾಭಿಮಾನಿ ಪಡೆಯ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಮುಖಂಡ ಬಿ.ಲೋಕೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಡ್ಯ ನಗರದ ಒಳಾಂಗಣ ಕ್ರೀಡಾಂಗಣದ ಆವರಣದ ಮೈದಾನದಲ್ಲಿ ಅಂದು ಬೆಳಗ್ಗೆ 11ಕ್ಕೆ ಸಭೆ ಆರಂಭಗೊಳ್ಳಲಿದೆ. ಶಾಸಕ ಎಂ.ಶ್ರೀನಿವಾಸ್, ಜಿ.ಪಂ. ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಕಿರುತೆರೆ ನಟ ವಿಶಾಲ್‌ರಘು, ಮುಖಂಡ ಮುದ್ದನಘಟ್ಟ ಮಹಾಲಿಂಗೇಗೌಡ, ಅಭ್ಯರ್ಥಿ ಕೆ.ಎಸ್.ವಿಜಯ್ ಆನಂದ್ ಸೇರಿದಂತೆ ಹಲವು ಪ್ರಮುಖರು, ಗಣ್ಯರು ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆಂದು ತಿಳಿಸಿದರು.
ನಿತ್ಯ ಸಚಿವ ಕೆ.ವಿ.ಶಂಕರಗೌಡ, ಮಾಜಿ ಶಾಸಕ ಕೆ.ಎಸ್.ಸಚ್ಚಿದಾನಂದ ಮತ್ತು ಶಾಸಕ ಎಂ.ಶ್ರೀನಿವಾಸ್ ಅವರ ಅಭಿಮಾನಿಗಳು, ಕೆವಿಎಸ್ ಕುಟುಂಬದ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು. ಸಾವಿರಾರು ಜನರು ಸಮಾವೇಶಕ್ಕೆ ಬರುವ ನಿರೀಕ್ಷೆಯಿದೆ. ನಾವು ಯಾರಿಗೂ ಹಣ ಕೊಟ್ಟು ಕರೆತರುತ್ತಿಲ್ಲ. “ತಂದ ಜನ ಬೇಡ, ಬಂದ ಜನ ಬೇಕು” ಎಂಬುದು ನಮ್ಮ ಸಮಾವೇಶದ ಉದ್ದೇಶ ಎಂದರು.
ಸ್ವಾಭಿಮಾನಿ ಪಡೆ ಅಭ್ಯರ್ಥಿ ಕೆ.ಎಸ್.ವಿಜಯಾನಂದ ಅವರಿಗೆ ತಾತ ಕೆ.ವಿ.ಶಂಕರಗೌಡರ ಹೆಸರೇ ದೊಡ್ಡ ಬಲ ಮತ್ತು ಶಕ್ತಿಯಾಗಿದೆ. ಶಂಕರಗೌಡರು ಸಂಪಾದಿಸಿದ ಜನರೇ ವಿಜಯ್ ಆನಂದ್ ಗೆ ಪಿತ್ರಾರ್ಜಿತ ಆಸ್ತಿ. ಹೀಗಾಗಿ ಈ ಚುನಾವಣೆಯಲ್ಲಿ ಮತದಾರರು ಕೆವಿಎಸ್ ಕುಟುಂಬವನ್ನು ಕೈಬಿಡುವುದಿಲ್ಲವೆಂಬ ವಿಶ್ವಾಸವಿದೆ. ಇನ್ನೊಬ್ಬರನ್ನು ಸೋಲಿಸುವುದು ನಮ್ಮ ಉದ್ದೇಶವಲ್ಲ. ಗೆಲ್ಲಬೇಕೆಂಬುದಷ್ಟೇ ನಮ್ಮ ಗುರಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿಜಯ್ ಅನಂದ್ ಅವರಿಗೆ ಜೆಡಿಎಸ್ ಬಿ ಫಾರಂ ಅನ್ನು ದೇವರೇ ತಪ್ಪಿಸಿರಬಹುದು, ವಿಜಯ್ ಅನಂದ್ ಅವರು ಈ ಚುನಾವಣೆಯಲ್ಲಿ ಗೆದ್ದು, ಮಂಡ್ಯ ಜಿಲ್ಲೆಯ ರಾಜಕೀಯ ಅಸ್ತಿತ್ವವನ್ನು ಸಾಬೀತುಪಡಿಸಲಿದ್ದಾರೆಂದರು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ, ಬಡ ಹಾಗೂ ಸಂಭಾವಿತ ಅಭ್ಯರ್ಥಿ ಆಗಿರುವ ವಿಜಯ್ ಆನಂದ್ ಅವರಿಗೆ ಸಮಾಜದ ಎಲ್ಲಾ ಸ್ತರದ ಮತದಾರರ ಆಶೀರ್ವಾದ ದೊರೆಯಲಿದೆ ಎಂದರು.
ಮತ ಪ್ರಚಾರ ವೇಳೆಯಲ್ಲಿ ಪ್ರತಿ ಗ್ರಾಮಗಳ ಜನತೆ ಸ್ವಾಭಿಮಾನದಿಂದ ಹಣ ಸಂಗ್ರಹಿಸಿ ದೇಣಿಗೆ ನೀಡಲು ಮುಂದಾಗಿರುವುದು, ಪ್ರಜಾಪ್ರಭುತ್ವದ ಶೋಭೆ ಎಂದು ಬಣ್ಣಿಸಿದ ಲೋಕೇಶ್ ಅವರು ವಿಜಯ್ ಆನಂದ್ ಗೆಲುವಿನ ಮೂಲಕ ರಾಜ್ಯಕ್ಕೆ ಸಂದೇಶ ರವಾನೆಯಾಗಲಿದೆ ಎಂದರು.
ಗೋಷ್ಠಿಯಲ್ಲಿ ನಗರಸಭಾ ಸದಸ್ಯ ಪೂರ್ಣಾನಂದ, ಮುಖಂಡರಾದ ಹೊಸಹಳ್ಳಿ ಪುಟ್ಟಸ್ವಾಮಿ, ವೆಂಕಟೇಶ್, ಜಗದೀಶ್ ಉಪಸ್ಥಿತರಿದ್ದರು.




