Saturday, May 18, 2024

ಪ್ರಾಯೋಗಿಕ ಆವೃತ್ತಿ

ಅಧಿವೇಶನ ನಡೆವಾಗ ಪಂಚರತ್ನಯಾತ್ರೆ ಮಾಡುವ ಶಾಸಕರು ಬೇಕಾ ? : ಚೆಲುವರಾಯಸ್ವಾಮಿ

ದೇವಸ್ಥಾನದಷ್ಟೇ ಪವಿತ್ರವಾದ ಜಾಗ ವಿಧಾನಸಭೆ. ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುವಾಗ ಪಂಚರತ್ನ ಯಾತ್ರೆ ಮಾಡುವ ಶಾಸಕರು ಬೇಕಾ ?.  ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ಮಾತ್ರ ಸದನ ಪವಿತ್ರನಾ ? ಬೇರೆಯವರು ಸಿಎಂ ಆದರೆ ಸದನ ಅಪವಿತ್ರನಾ ? ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚೆಲುವರಾಯಸ್ವಾಮಿ ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದರು.

ಮಂಡ್ಯ ತಾಲ್ಲೂಕಿನ ಸಂತೆಕಸಲಗೆರೆ ಭೂಮಿಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂತೆಕಸಲಗೆರೆ ಗ್ರಾಮ ಪಂಚಾಯಿತಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಟಿಎ ಡಿಎ ತೆಗೆದುಕೊಳ್ಳಲು ಅಸೆಂಬ್ಲಿಗೆ ಹೋಗಬೇಕಾ ಎಂದು ಕುಮಾರಸ್ವಾಮಿ ಅವರು ಅಸೆಂಬ್ಲಿ ಬಗ್ಗೆ ಲಘುವಾಗಿ ಮಾತನಾಡಿರುವುದು ವಿಪರ್ಯಾಸ. ಜನರ ಸಮಸ್ಯೆಗೆ ಪರಿಹಾರ ಹುಡುಕುವ ಜಾಗಕ್ಕೆ ಹೋಗದವರು ಅಸೆಂಬ್ಲಿ ಬಗ್ಗೆ ಲಘುವಾಗಿ ಮಾತನಾಡಬಾರದು ಎಂದು ತಿರುಗೇಟು ನೀಡಿದರು.

ಕಳೆದ ಚುನಾವಣಾ ಸಮಯದಲ್ಲೂ ರೈತರ ಸಾಲಮನ್ನಾ, ಸ್ವಸಹಾಯ ಸಂಘಗಳ ಸಾಲಮನ್ನಾ, ಮಾಡುವುದಾಗಿ ಭರವಸೆ ನೀಡಿದ್ದರು. ಚುನಾವಣೆಯಲ್ಲಿ ಜೆಡಿಎಸ್‌ಗೆ ಬಹುಮತ ಬರಲಿಲ್ಲ. ಕೊನೆಗೆ ಕಾಂಗ್ರೆಸ್ ಜೊತೆ ಸೇರಿಕೊಂಡು ಸಮ್ಮಿಶ್ರ ಸರ್ಕಾರ ರಚನೆಯಾಗಿ ಜಿಲ್ಲೆಯ ಜನರ ಬಯಕೆಯಂತೆ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾದರು. ಆದರೂ, ಮೈಷುಗರ್ ಕಾರ್ಖಾನೆಯನ್ನು ಆರಂಭಿಸಲಿಲ್ಲ, ಆರು ಜನ ಶಾಸಕರಿದ್ದರೂ ರಸ್ತೆಗಳಲ್ಲಿನ ಒಂದೇ ಒಂದು ಗುಂಡಿ ಮುಚ್ಚಲಿಲ್ಲ ಎಂದರು.

ಜಿಲ್ಲೆಯಲ್ಲಿ ಕೃಷಿ ಹೊಂಡಗಳಾಗಿಲ್ಲ, ನರೇಗಾ ಕೆಲಸಗಳು ಸರಿಯಾಗಿ ಆಗುತ್ತಿಲ್ಲ, ಲೋಕೋಪಯೋಗಿ ಇಲಾಖೆಯಲ್ಲಿ ₹ 500 ಕೋಟಿಗೂ ಹೆಚ್ಚು ಹಣವನ್ನು ಗುತ್ತಿಗೆದಾರರಿಗೆ ಬಾಕಿ ನೀಡಬೇಕಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಈ ರೀತಿ ಇತ್ತಾ ? ಎಂದು ವಿಮರ್ಶೆ ಮಾಡಿ ತೀರ್ಮಾನ ಕೈಗೊಳ್ಳುವ ಸಮಯ ಬಂದಿದೆ. ಇನ್ನು ಮೂರು ತಿಂಗಳಲ್ಲಿ ಚುನಾವಣೆ ಬರುತ್ತಿದೆ. ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಯಾವ ರೀತಿ ಅಭಿವೃದ್ಧಿಯಾಗಿದೆ. ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆಯೇ ? ಮೂರು ಜನ ಮುಖ್ಯಮಂತ್ರಿಗಳಾದರೂ ಜಿಲ್ಲೆಯ ಅಭಿವೃದ್ಧಿಯಾಗಿಲ್ಲ ಇದಕ್ಕೆ ಜನರು ತಕ್ಕ ಉತ್ತರ ನೀಡಬೇಕಿದೆ ಎಂದರು.

ನಾನು ಮಂಡ್ಯ ಜಿಲ್ಲೆಯವನು ನಿಮ್ಮ ಜೊತೆ ಇರುತ್ತೇನೆ. ಈ ಬಾರಿ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ. ರಮೇಶ್ ಬಾಬು ಬಂಡಿಸಿದ್ದೇಗೌಡ ಅವರನ್ನು ಗೆಲ್ಲಿಸುವ ಮೂಲಕ ನಿಮ್ಮ ಸೇವಕನಾಗಿ ಕೆಲಸ ಮಾಡಲು ಬಾಬಣ್ಣ ಅವರನ್ನು ಆಯ್ಕೆ ಮಾಡಿ. ಮಂಡ್ಯ ಜಿಲ್ಲೆಯಲ್ಲಿ ಇರುವುದು ಒಂದೇ ಕಾಂಗ್ರೆಸ್ ನಮ್ಮಲ್ಲಿ ಯಾವುದೇ ಬಿನ್ನಾಭಿಪ್ರಾಯವಿಲ್ಲ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಜಿಲ್ಲೆಯ ಬಗ್ಗೆ ಅಭಿಮಾನವಿದೆ ಕಾಂಗ್ರೆಸ್ ಸರ್ಕಾರ ರಚನೆ ಮಾಡಲು ಎಲ್ಲರ ಆಶೀರ್ವಾದ ಬೇಕು ಎಂದು ಹೇಳಿದರು.

ಮಾಜಿ ಸಚಿವ ಎಂ.ಎಸ್. ಆತ್ಮಾನಂದ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಬಂದಿದೆ. ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿಯಾಗಿದ್ದಾರೆ ಎಂದು ತಿಳಿಸಿದರು.

ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡರಾದ ಹೆಮ್ಮಿಗೆ ಸಿದ್ದಪ್ಪ, ನಾಗರಾಜು, ಶ್ರೀನಿವಾಸ, ರುದ್ರಪ್ಪ, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎಚ್.ತ್ಯಾಗರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿಡಿ ಗಂಗಾಧರ್, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ರಮೇಶ್ ಮಿತ್ರ, ಅಂತರಾಜು, ಸುಧೀರ್ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!