Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಹಕಾರಿ ಕ್ಷೇತ್ರದ ಬಲವರ್ಧನೆಯಿಂದ ಗ್ರಾಮೀಣಾಭಿವೃದ್ಧಿ ಸಾಧ್ಯ : ರವೀಂದ್ರ ಶ್ರೀಕಂಠಯ್ಯ

ಸಹಕಾರಿ ಕ್ಷೇತ್ರಗಳ ಬಲವರ್ಧನೆಯಿಂದ ಗ್ರಾಮೀಣಾಭಿವೃದ್ಧಿ ಸಾಧ್ಯ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯ ತಾಲ್ಲೂಕಿನ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಮ್ಮಿಗೆ ಗ್ರಾಮದಲ್ಲಿ ಆಯೋಜನೆಗೊಂಡಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಹಾಗೂ ಗ್ರಾಮದ ಹಾಲು ಶೀಥಲೀಕರಣ ಘಟಕದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಸಹಕಾರಿ ಕ್ಷೇತ್ರಗಳಿಗೆ ಉತ್ತಮ ಬುನಾದಿ ಹಾಕಿದರೆ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ.ಸಹಕಾರಿ ಕ್ಷೇತ್ರ ಬಲವರ್ಧನೆಗೊಂಡರೆ ಪರ್ಯಾಯ ಸರ್ಕಾರದಂತೆ ಗ್ರಾಮಾಭಿವೃದ್ಧಿಗೆ ಅನುಕೂಲವಾಗಲಿದೆ. ಉತ್ತಮ ಆಡಳಿತ ಹಾಗೂ ಜನಸೇವೆ ಮಾಡುವ ಗುರಿ ಸಹಕಾರಿ ಕ್ಷೇತ್ರದಲ್ಲಿದ್ದು, ಆ ಕ್ಷೇತ್ರದ ಬಲಿಷ್ಟತೆಗೆ ನಾವೆಲ್ಲರೂ ಸಹಕರಿಸಬೇಕೆಂದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಜಾರಿಗೊಳಿಸಿರುವ ಸಾಲ ಮನ್ನಾ ಯೋಜನೆ ಅವರ ಅಭಿಲಾಷೆಯಂತೆ ರೈತರಿಗೆ ನೆರವಾಗಿಲ್ಲ. ಹೆಚ್ಚು ಜನರಿಗೆ ಸಾಲ ಮನ್ನಾ ಯೋಜನೆಯಿಂದ ಪ್ರಯೋಜನವಾಗಿದ್ದರೂ, ಕೆಲವು ಜನರಿಗೆ ಅನಾನುಕೂಲವಾಗಿದೆ. ಬಾಕಿ ಉಳಿದಿರುವ ಸಾಲ ಮನ್ನಾದ ಹಣ ಬಿಡುಗಡೆಗೆ ಸರ್ಕಾರ ಮುಂದಾಗಬೇಕು. ಈ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.

ಅತಿವೃಷ್ಠಿಯಿಂದ ರಾಜ್ಯದ ಅನ್ನದಾತರು ಬೆಳೆ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದು,ಅವರ ನೆರವಿಗೆ ಸರ್ಕಾರ ಮುಂದಾಗಬೇಕು. ಮಂಡ್ಯ ಜಿಲ್ಲೆಗೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಜೆಡಿಎಸ್ ಪಕ್ಷ ರೈತರ ಪಕ್ಷವಾಗಿದೆ‌.ಜಿಲ್ಲೆಯ ರೈತರು ಹಾಗೂ ಜನಸಾಮಾನ್ಯರ ಬಗ್ಗೆ ಕಾಳಜಿ ಇರುವ ಜೆಡಿಎಸ್ ಪಕ್ಷ ಹಾಗೂ ಅಭ್ಯರ್ಥಿಗಳಿಗೆ ಜಿಲ್ಲೆಯ ಜನ ಶಕ್ತಿ ತುಂಬುವ ಕೆಲಸ ಮಾಡಬೇಕೆಂದು ಮನವಿ ಮಾಡಿದರು.

ಹಿರಿಯ ಸಹಕಾರಿ ಕೀಲಾರ ಕೃಷ್ಣ ಅವರು ಮಾತನಾಡಿ, ಜಿಲ್ಲೆಯ ರೈತರಿಗೆ ಬಾಕಿ ಬರಬೇಕಾದ ಸಾಲ ಮನ್ನಾ ಯೋಜನೆಯ ಕಂತು ಬಿಡುಗಡೆಗೆ ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಮನವಿ ಮಾಡಿದರು.

ವೇದಿಕೆಯಲ್ಲಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಉಪಾಧ್ಯಕ್ಷ ರಘುನಂದನ್, ನಿರ್ದೇಶಕ ನೆಲ್ಲಿಗೆರೆ ಬಾಲು, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹೆಚ್.ಸಿ.ಕಾಳೇಗೌಡ, ಹಾಲಹಳ್ಳಿ ಅಶೋಕ್, ಸಹಕಾರ ಸಂಘಗಳ ಉಪನಿಬಂಧಕ ವಿಕ್ರಮ್ ರಾಜೇಅರಸ್, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಂ.ಕೆ.ಸುಂದರಪ್ಪ ಹಾಗೂ ಜಿ.ಪಂ.ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!