Friday, June 21, 2024

ಪ್ರಾಯೋಗಿಕ ಆವೃತ್ತಿ

ಸುರೇಶ್ ಗೌಡ ವಿರುದ್ದ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲು: ಸತ್ಯಾನಂದ

ನಾಗಮಂಗಲ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ವಿರುದ್ಧ ಆಧಾರ ರಹಿತವಾಗಿ ಮನಸೋಇಚ್ಛೆ ಆರೋಪಗಳನ್ನು ಮಾಡಿ, ಹೀಯಾಳಿಸಿ, ಏಕವಚನದಲ್ಲಿ ನಿಂದಿಸಿದ್ದ ಮಾಜಿ ಶಾಸಕ ಸುರೇಶ್ಗೌಡರವರ ವಿರುದ್ಧ ಎನ್. ಚಲುವರಾಯಸ್ವಾಮಿರವರು ದಾಖಲಿಸಿದ್ದ ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ಪುರಸ್ಕರಿಸಿ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆರೋಪಿ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಿದೆ ಎಂದು ಕೆಪಿಸಿಸಿ ವಕ್ತಾರ ಟಿ.ಎಸ್.ಸತ್ಯಾನಂದ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋ‍ಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಆಗಸ್ಟ್ 2023 ರಲ್ಲಿ ನಾಗಮಂಗಲದ ತಮ್ಮ ಬೆಂಬಲಿಗರ ಸಭೆ ಹಾಗೂ ಸುದ್ದಿಗೋಷ್ಠಿಯಲ್ಲಿ ಚಲುವರಾಯಸ್ವಾಮಿರವರ ವಿರುದ್ಧ ಹಲವು ಆರೋಪಗಳನ್ನು ಮಾಡಿ ಸುರೇಶ್ ಗೌಡ ಅವರು ಚಲುವರಾಯಸ್ವಾಮಿ ಭ್ರಷ್ಟಾಚಾರ ಮಾಡಿ ರಾಜ್ಯವನ್ನು ಲೂಟಿ ಮಾಡಿದ್ದಾರೆ. 300 ರಿಂದ 400 ಕೋಟಿ ರೂ. ಹಣ ಲೂಟಿ ಮಾಡಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಹಣವನ್ನು ಏರ್ಲಿಫ್ಟ್ ಮಾಡಿದ್ದಾರೆಂದು ಹಾಗೂ ಇನ್ನಿತರ ಆಧಾರ ರಹಿತ ಆರೋಪ ಮಾಡಿದ್ದರು. ಅವರ ಹೇಳಿಕೆಗಳು ಪ್ರಮುಖ ದಿನಪತ್ರಿಕೆ ಮತ್ತು ದೃಶ್ಯಮಾಧ್ಯಮದಲ್ಲೂ ವರದಿಯಾಗಿದ್ದವು. ಇದಕ್ಕೆ ಪ್ರತಿಕ್ರಿಯೆ ನೀಡದೆ ಕಾನೂನು ಮೂಲಕ ಸೂಕ್ತ ಉತ್ತರ ನೀಡಲು ತೀರ್ಮಾನಿಸಿದ ಸಚಿವ ಚಲುವರಾಯಸ್ವಾಮಿ ಅವರು ಬೆಂಗಳೂರು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸೂಕ್ತ ಪರಿಹಾರ ಮತ್ತು ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದರು ಎಂದು ಅವರು ವಿವರಿಸಿದರು.

ಚಲುವರಾಯಸ್ವಾಮಿರವರ ದೂರನ್ನು ಮತ್ತು ಅದರೊಂದಿಗೆ ಸಲ್ಲಿಸಿದ ದಾಖಲಾತಿಗಳು, ಪತ್ರಿಕಾ ಹೇಳಿಕೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ನ್ಯಾಯಾಲಯ ಎನ್. ಚಲುವರಾಯಸ್ವಾಮಿರವರ ಹೇಳಿಕೆಯನ್ನು ದಾಖಲಿಸಿಕೊಂಡು ದೂರಿನ ಗಂಭೀರತೆಯನ್ನು ಪರಿಗಣಿಸಿ ಪ್ರಕರಣದಲ್ಲಿ ಮಾನಹಾನಿಕಾರಕ ಅಂಶಗಳು ಕಂಡು ಬಂದಿರುವುದರಿಂದ ಆರೋಪಿ ಸುರೇಶ್ ಗೌಡ ಅವರ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸಲು ಆದೇಶಿಸಿದೆ ಎಂದು ಹೇಳಿದರು.

ಸಮನ್ಸ್ ಜಾರಿ

ಕೇವಲ ರಾಜಕೀಯ ದುರುದ್ದೇಶದಿಂದ ಹತಾಶರಾಗಿ ಆಧಾರರಹಿತವಾಗಿ ಸುಳ್ಳು ಆರೋಪಗಳನ್ನು ಮಾಡಿದ್ದ ಸುರೇಶ್ ಗೌಡರಿಗೆ ನ್ಯಾಯಾಲಯ ಸಮನ್ಸ್ ನೀಡಿದ್ದು, ಪ್ರಕರಣದ ವಿಚಾರಣೆಯನ್ನು 21-05-2024ಕ್ಕೆ ಕಾಯ್ದಿರಿಸಿದೆ ಎಂದರು.

ಸುಮಲತಾ ತೇಜೋವಧೆಯನ್ನು ಜನತೆ ಇನ್ನೂ ಮರೆತಿಲ್ಲ

ರಾಷ್ಟ್ರ ಹಾಗೂ ರಾಜ್ಯ ರಾಜಕಾರಣಕ್ಕೆ ಹಲವು ಘಟನಾಘಟಿ ನಾಯಕರನ್ನು ಕೊಡುಗೆ ನೀಡಿದ ಮಂಡ್ಯ ಜಿಲ್ಲೆಯ ನಾಯಕರುಗಳ ಮಾತಿಗೆ ತನ್ನದೇ ಆದ ಗತ್ತು, ಗೌರವವಿದೆ. ಮಂಡ್ಯ ಜಿಲ್ಲೆಯ ನಾಯಕರು ಮಾತುಗಳಿಗೆ ಕೇಂದ್ರದ ನಾಯಕರುಮರು ಮಾತನಾಡದೆ ಗೌರವ ನೀಡಿದ ಹಲವು ನಿದರ್ಶನಗಳು ಕಣ್ಮುಂದೆ ಇವೆ. ಆದರೆ ಆ ಪರಂಪರೆಗೆ ಕೊಳ್ಳಿ ಇಟ್ಟ ಜಾತ್ಯಾತೀತ ಜನತಾ ದಳದ ನಾಯಕರು 2018ರಲ್ಲಿ 7 ಜನ ಶಾಸಕರು ಆಯ್ಕೆಯಾದ ನಂತರ ಅಧಿಕಾರದ ಅಹಂನಿಂದ ತಮ್ಮ ಎಲ್ಲೆ ಮೀರಿ ಸಾರ್ವಜನಿಕವಾಗಿ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ಮಾನಹಾನಿಕಾರಕ ಹೇಳಿಕೆ ನೀಡಲು ಮುಂದಾದರು. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಹಾಗೂ ಹಲವು ಕಾಂಗ್ರೆಸ್ ನಾಯಕರ ವಿರುದ್ಧ ಪುಂಖಾನುಪುಂಖವಾಗಿ ಟೀಕಿಸಿ ತೇಜೋವಧೆ ನಡೆಸಿದ್ದು, ಜಿಲ್ಲೆಯ ಜನರ ನೆನಪಿನಿಂದ ಇನ್ನೂ ಮಾಸಿಲ್ಲ ಎಂದು ಹೇಳಿದರು.

ಹೆಚ್.ಡಿ.ಕೆ ಟೀಕೆ

ಇಂತಹ ಹೇಳಿಕೆಗಳಿಗೆ ಪುಷ್ಠಿ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಸ್ಥಾನದ ಘನತೆಯನ್ನು ಮರೆತು ಸಂಸದೆ ಸುಮಲತಾ ಅವರನ್ನು ಕೆ.ಆರ್.ಎಸ್. ಜಲಾಶಯದ ತೂಬಿಗೆ ಅಡ್ಡಲಾಗಿ ಮಲಗಿಸಬೇಕೆಂದು ಹೇಳಿಕೆ ನೀಡಿದ್ದರು. ರಾಜಕಾರಣದಲ್ಲಿ ಟೀಕೆಗಳು ವಿಷಯಾಧಾರಿತ ಹಾಗೂ ಅಭಿವೃದ್ಧಿ ವಿಚಾರಗಳ ಮೇಲೆ ನಡೆಯಬೇಕೇ ಹೊರತು ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ತಂದು ವ್ಯಕ್ತಿಗತವಾಗಿ ಹೀಗಳೆಯುವ ಮಟ್ಟಕ್ಕೆ ಹೋಗಿರುವುದು ವಿಪರ್ಯಾಸವೇ ಸರಿ ಎಂದರು.

ಆಧಾರರಹಿತ ಆರೋಪ

ತಮ್ಮ ಸ್ಥಾನಗಳ ಘನತೆ ಮೀರಿ ರಾಜಕೀಯ ಎದುರಾಳಿಗಳ ಬಗ್ಗೆ ಮನಬಂದಂತೆ ಆಧಾರರಹಿತವಾಗಿ ಆರೋಪ ಮಾಡುವ ಪರಿಪಾಠಗಳಿಂದ ಸಾರ್ವಜನಿಕವಾಗಿ ಅಸಹ್ಯ ಮೂಡಿಸಿದೆ. ಈ ಹಿಂದೆ ಸಚಿವರಾಗಿದ್ದ ಸಿ.ಎಸ್. ಪುಟ್ಟರಾಜುರವರು ತಾವು ಶಾಶ್ವತವಾಗಿ ಅಧಿಕಾರದಲ್ಲಿ ಇರುತ್ತೇವೆಂಬ ಭ್ರಮೆಯಿಂದ ಹಾಲಿ ಸಚಿವರಾಗಿರುವ ಚಲುವರಾಯಸ್ವಾಮಿ ಅವರನ್ನು ಡೆಡ್ಹಾರ್ಸ್ ಎಂದು ಸಾರ್ವಜನಿಕವಾಗಿ ನಿಂದಿಸಿ, ಹೀಯಾಳಿಸಿದ್ದನ್ನು ಜಿಲ್ಲೆಯ ಜನತೆ ಇಂದಿಗೂ ಮರೆತಿಲ್ಲ. ಇದೇ ಹಾದಿಯಲ್ಲಿ ಸಾಗಿದ ಮಾಜಿ ಶಾಸಕ ಸುರೇಶ್ ಗೌಡರವರು 2023ರ ವಿಧಾನಸಭಾ ಚುನಾವಣೆಯ ಸೋಲಿನ ಹತಾಶೆಯಿಂದ ತಾವು ಪರಾಭವಗೊಂಡ ಎರಡು ತಿಂಗಳಲ್ಲೇ ತಮ್ಮ ಎದುರಾಳಿ ಚಲುವರಾಯಸ್ವಾಮಿರವರು ಗೆದ್ದು ಮಂತ್ರಿಯಾದುದ್ದನ್ನು ಸಹಿಸದೆ ಹಲವು ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಹೀಯಾಳಿಸಿ ಅವರ ವರ್ಚಸ್ಸಿಗೆ ಮಸಿ ಬಳಿಯುವ ಕಾರ್ಯಕ್ಕೆ ಮುಂದಾದರು ಎಂದು ದೂರಿದರು.

ಇನ್ನು ಮುಂದೆ ಸಾರ್ವಜನಿಕವಾಗಿ ಆಧಾರವಿಲ್ಲದೆ ಸುಳ್ಳು ಆರೋಪಗಳನ್ನು ಮಾಡುತ್ತಾ ಸಚಿವರೂ ಸೇರಿದಂತೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಮಾನಹಾನಿಕಾರಕ ಹೇಳಿಕೆಗಳನ್ನು ನೀಡುವ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡುವ ವ್ಯಕ್ತಿಗಳ ವಿರುದ್ಧ ಅವರು ಎಷ್ಟೇ ಪ್ರಭಾವಿಗಳಾಗಿದ್ದರೂ ಮೊಕದ್ದಮೆಗಳನ್ನು ದಾಖಲಿಸಿ ಕಾನೂನು ರೀತ್ಯಾ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಗೋ‍ಷ್ಠಿಯಲ್ಲಿ ನಗರಸಭಾ ಸದಸ್ಯ ಟಿ.ಕೆ.ರಾಮಲಿಂಗಯ್ಯ, ಕಾಂಗ್ರೆಸ್ ಮುಖಂಡರಾದ ವೈ.ಎಂ.ನಿಂಗೇಗೌಡ, ನಿಂಗರಾಜು, ವಿಜಯ್ ಕುಮಾರ್, ಹಾಲಹಳ್ಳಿ ಸಂಪತ್, ವಕೀಲ ಮಹೇಶ್ ಹಾಗೂ ಹೊನ್ನೇಶ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!