Friday, September 20, 2024

ಪ್ರಾಯೋಗಿಕ ಆವೃತ್ತಿ

ಹಾಲಿ-ಮಾಜಿ ಶಾಸಕರಿಗೆ ಮುಳುವಾಗಲಿದೆಯೇ ಮುಡಾ ನಿವೇಶನ ಹಗರಣ ?


  • ಇಬ್ಬರು ಹಾಲಿ, ಓರ್ವ ಮಾಜಿ ಶಾಸಕರ ರಾಜಕೀಯ ಭವಿಷ್ಯಕ್ಕೆ ಕುತ್ತು  

  • ವಿವೇಕಾನಂದ ಬಡಾವಣೆಯಲ್ಲಿ 107 ನಿವೇಶನಗಳ ಅಕ್ರಮ ಹಂಚಿಕೆ ಆರೋಪ
  • ಪತ್ರಕರ್ತರು, ಸಂಘಟನೆಯ ಮುಖಂಡರು, ಪುಡಿ ರಾಜಕಾರಣಿಗಳಿಗೆ ನಿವೇಶನ 
  • 24 ಆರೋಪಿಗಳಿಗೆ ನಡುಕ

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ 5 ಕೋಟಿ ಹಣ ದುರುಪಯೋಗ ಸಂಬಂಧ 5 ಮಂದಿಯನ್ನು ಅಪರಾಧಿಗಳೆಂದು ಘೋಷಿಸಿರುವ ಸಿಬಿಐ ನ್ಯಾಯಾಲಯ 7ವರ್ಷ ಜೈಲು ಶಿಕ್ಷೆ ಹಾಗೂ ತಲಾ ಒಂದು ಕೋಟಿ ಹಣ ದಂಡ ವಿಧಿಸಿರುವ ತೀರ್ಪು ಜಿಲ್ಲೆಯ ಇಬ್ಬರು ಹಾಲಿ, ಓರ್ವ ಮಾಜಿ ಶಾಸಕ, ಅಧಿಕಾರಿಗಳೂ ಸೇರಿ ಒಟ್ಟು 24 ಮಂದಿ ಆರೋಪಿಗಳಿಗೆ ನಡುಕ ಹುಟ್ಟಿಸಿದೆ.

ಕಳೆದ ಸೆಪ್ಟಂಬರ್ 9ರಂದು ಸಿಬಿಐ ನ್ಯಾಯಾಲಯ ಮುಡಾದಲ್ಲಿ 5 ಕೋಟಿ ಹಣ ದುರುಪಯೋಗ ಮಾಡಿಕೊಂಡಿದ್ದ ರಾಜಕಾರಣಿ ಮತ್ತು ಉದ್ಯಮಿ ಹೆಬ್ಬಳ್ಳಿ ಆನಂದ್, ನಾಗಲಿಂಗಸ್ವಾಮಿ, ಚಂದ್ರಶೇಖರ್, ಮುಡಾ ಸಿಬ್ಬಂದಿ ನಾಗರಾಜು‌ ಹಾಗೂ ಕೆಬ್ಬಳ್ಳಿ ಆನಂದನ ಆಪ್ತ ಸಹಾಯಕ ಹರ್ಷನ್ ಅವರಿಗೆ ತಲಾ ಒಂದು ಕೋಟಿ ದಂಡ ಹಾಗೂ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಈ ತೀರ್ಪು ಬಂದ ನಂತರ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮವಾಗಿ ನಿವೇಶನ ಪಡೆದ ಹಾಲಿ ಶಾಸಕರಾದ ಎಂ.ಶ್ರೀನಿವಾಸ್, ಸಿ.ಎಸ್. ಪುಟ್ಟರಾಜು, ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಹಾಗೂ ಬಿಜೆಪಿಯ ವಿದ್ಯಾ ನಾಗೇಂದ್ರ ಅವರಿಗೆ ಆತಂಕ ಮೂಡಿಸಿದೆ.

ಒಂದು ವೇಳೆ ಸಿಬಿಐ ನ್ಯಾಯಾಲಯದಲ್ಲಿ ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿರುವುದು ಸಾಬೀತಾದರೆ, ಇದರಲ್ಲಿ ಭಾಗಿಯಾಗಿರುವ ಜನಪ್ರತಿನಿಧಿಗಳ ರಾಜಕೀಯ ಭವಿಷ್ಯದ ಮೇಲೆ ಕರಿ ನೆರಳು ಮೂಡುವುದಂತೂ ಸತ್ಯ.

ಏನಿದು ಹಗರಣ

2009ರಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮಂಡ್ಯದ ಕೆರೆ ಅಂಗಳದ ವಿವೇಕಾನಂದ ಬಡಾವಣೆಯಲ್ಲಿ 107 ನಿವೇಶನಗಳನ್ನು ಆಗಿನ ಮುಡಾ ಅಧ್ಯಕ್ಷೆ ವಿದ್ಯಾ ನಾಗೇಂದ್ರ, ಮುಡಾ ನಿರ್ದೇಶಕ ಎಂ.ಜೆ.ಚಿಕ್ಕಣ್ಣ ಹಾಗೂ ಮುಡಾ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಸೇರಿ ಅಕ್ರಮವಾಗಿ ತಮಗೆ, ತಮ್ಮ ಕುಟುಂಬಸ್ಥರಿಗೆ ಹಾಗೂ ಸ್ನೇಹಿತರಿಗೆ ನಿವೇಶನಗಳನ್ನು ಹಂಚಿಕೆ ಮಾಡಿಕೊಂಡಿದ್ದರು.

ಅಕ್ರಮ ನಿವೇಶನ ಬಯಲಿಗೆ ತರಬೇಕಾದ ಪತ್ರಕರ್ತರು, ಸಂಘಟನೆಯ ಮುಖಂಡರು ಹಾಗೂ ಸ್ಥಳೀಯ ಪುಡಿ ರಾಜಕಾರಣಿಗಳು, ಅವರ ಹಿಂಬಾಲಕರು ಎಲ್ಲರೂ ಅಕ್ರಮವಾಗಿ ಸೈಟು ಪಡೆದುಕೊಂಡಿದ್ದರು.

ಈ ಬಗ್ಗೆ ವಕೀಲ ಸತ್ಯಾನಂದ 2010ರಲ್ಲಿ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಈ ಹಗರಣವನ್ನು ಸಿದ್ದರಾಮಯ್ಯನವರ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಿತ್ತು. ಅದರಂತೆ ಸಿಬಿಐ ನ್ಯಾಯಾಲಯಕ್ಕೆ 2000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿತ್ತು. ವಂಚನೆ ಪ್ರಕರಣದಲ್ಲಿ ಮುಡಾ ಹಣ ದುರುಪಯೋಗ ಸಾಬೀತಾಗಿ ಶಿಕ್ಷೆ ಆದಂತೆಯ ಈ ಪ್ರಕರಣದಲ್ಲೂ ಅಕ್ರಮ ನಿವೇಶನ ಪಡೆದಿರುವುದು ಸಾಬೀತಾದರೆ, ಜನಪ್ರತಿನಿಧಿಗಳ ರಾಜಕೀಯ ಭವಿಷ್ಯಕ್ಕೆ ಕುತ್ತು ಬರಲಿದೆ.

ಅಕ್ರಮ ನಿವೇಶನ ಪ್ರಕರಣವನ್ನು ತಮ್ಮ ಹೆಸರುಗಳನ್ನು ಕೈಬಿಡಬೇಕೆಂದು ಈಗಾಗಲೇ ಸಿ.ಎಸ್. ಪುಟ್ಟರಾಜು ಮತ್ತಿತರರು ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್ ಗಳನ್ನು ಕೋರಿದ್ದರು. ಆದರೆ ಎರಡು ನ್ಯಾಯಾಲಯಗಳು ಈ ಪ್ರಕರಣದಲ್ಲಿ ನಾನು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಅರ್ಜಿಯನ್ನು ತಿರಸ್ಕರಿಸಿ ವಜಾ ಮಾಡಿವೆ.

ಈಗ ವಿಚಾರಣೆ ನಡೆಯುತ್ತಿದ್ದು ನ್ಯಾಯಾಲಯದ ಆದೇಶ ಏನಾಗಲಿದೆಯೋ ಎಂಬ ಕುತೂಹಲ ಜಿಲ್ಲೆಯ ಜನರಲ್ಲಿ ಮೂಡಿಸಿದೆ. ಹಾಲಿ ಶಾಸಕರಿಬ್ಬರು, ಓರ್ವ ಶಾಸಕ ಹಾಗೂ ಅಧಿಕಾರಿಗಳ ಎದೆಯಲ್ಲಿ ಢವಢವ ಎಂದು ನಡುಕ ಮೂಡಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!